ಕರ್ನಾಟಕದಲ್ಲಿ ಸರ್ಕಾರ ರಚಿಸಿದ ನಂತರ ಕಾಂಗ್ರೆಸ್ ನಾಯಕರಿಗೆ ಸಾಲು ಸಾಲು ಸವಾಲು ಎದುರಾಗುತ್ತಿದ್ದು, ಈ ಪೈಕಿ ಸಿಎಂ ಬದಲಾವಣೆ ವಿಚಾರ ಜೂನ್ ತಿಂಗಳಲ್ಲಿ ಸದ್ದು ಮಾಡಿತ್ತು. ಆ ನಂತರ ಕರ್ನಾಟಕದ ಹೊಸ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆದರೆ, ಹೀಗೆ ಹೊಸ ಮುಖ್ಯಮಂತ್ರಿ ಆಗಮನದ ನಂತರ ಕೂಡ ಸಿಕ್ಕಾಪಟ್ಟೆ ಸವಾಲುಗಳು ಕಾಂಗ್ರೆಸ್ ಹೈಕಮಾಂಡ್ ಮುಂದೆ ಎದುರಾಗಿದೆ. ಅದರಲ್ಲೂ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣ ಆಗಿದ್ದು, ಸಚಿವ ಸ್ಥಾನಕ್ಕೆ ಶಾಸಕರ ಭರ್ಜರಿ ಸರ್ಕಸ್ ಶುರುವಾಗಿದೆ. ಹೀಗಿದ್ದಾಗಲೇ ಸಚಿವ ಸ್ಥಾನಕ್ಕೆ ಯಾರು ಯಾರನ್ನು ಆಯ್ಕೆ ಮಾಡಬೇಕು?? ಎಂಬ ಆಯ್ಕೆಯ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ.
ಕರ್ನಾಟಕ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದಕ್ಕಿಂತ ಮೊದಲು ಒಂದು ಲೆಕ್ಕ, ಡಿ.ಕೆ. ಶಿವಕುಮಾರ್ ಸಿಎಂ ಆದ ನಂತರ ಮತ್ತೊಂದು ಲೆಕ್ಕ ಎಂಬಂತಾಗಿದೆ. ಯಾಕಂದ್ರೆ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಪಟ್ಟಕ್ಕೆ ಎಂಟ್ರಿ ಕೊಟ್ಟ ನಂತರ ಭಾರಿ ದೊಡ್ಡ ಬದಲಾವಣೆಗಳು ನಡೆಯುತ್ತಿವೆ. ಅದರಲ್ಲೂ ಈ ಪೈಕಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಇದ್ದ ನಾಯಕರು ಇದೀಗ ಭವಿಷ್ಯದ ಬಗ್ಗೆ ಚಿಂತೆ ಮಾಡುವಂತೆ ಆಗಿದೆ. ಅದರಲ್ಲೂ ಸ್ವತಃ ಸಿದ್ದರಾಮಯ್ಯ ಅವರ ಮಾತನ್ನೂ ಕೇಳದೆ, ಅವರ ವಿರುದ್ಧವೇ ಕೆಲಸ ಮಾಡಿದ ಆರೋಪ ಹೊತ್ತಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಇದೀಗ ಮಂತ್ರಿ ಸ್ಥಾನ ಸಿಗದೇ ಇರುವ ಸಾಧ್ಯತೆ ದಟ್ಟವಾಗಿದೆ. ಇದರ ಜೊತೆಗೆ ಇನ್ನೂ 50 ಸಚಿವ ಸ್ಥಾನ ಆಕಾಂಕ್ಷಿಗಳು ಭರ್ಜರಿ ಫೈಟ್ ಮಾಡ್ತಾ ಇದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಜೊತೆ ಗಂಭೀರ ಚರ್ಚೆ
ಹೌದು, ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಚಟುವಟಿಕೆಗಳು ರಾಷ್ಟ್ರ ರಾಜಧಾನಿ ದೆಹಲಿ ತಲುಪಿವೆ. ಅಂದಹಾಗೆ ಕರ್ನಾಟಕ ಸಚಿವ ಸಂಪುಟದಲ್ಲಿರುವ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಹಿರಿಯ ನಾಯಕರ ಜೊತೆ ಮಹತ್ವದ ಸಭೆಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಈಗ ದೆಹಲಿ ತಲುಪಿದ್ದಾರೆ. ಈ ಸಭೆಯು ರಾಜಕೀಯವಾಗಿ ಹೆಚ್ಚಿನ ಗಮನ ಸೆಳೆದಿದೆ. ಹೊಸ ಸಚಿವರ ಆಯ್ಕೆ, ಪ್ರಾದೇಶಿಕ ಸಮತೋಲನ & ಪಕ್ಷದ ಸಂಘಟನೆ ಬಲವರ್ಧನೆ ಸೇರಿ ಹಲವು ವಿಚಾರ ಸಭೆಯಲ್ಲಿ ಚರ್ಚೆಗೆ ಬರಲಿವೆ ಎನ್ನಲಾಗಿದೆ. ಈ ಚರ್ಚೆಯ ಜೊತೆಗೆ ಮಂತ್ರಿ ಸ್ಥಾನ ಸಿಗದೆ ರೆಬೆಲ್ ಆಗುವ ನಾಯಕರನ್ನು ಹೇಗೆ ಸಮಾಧಾನ ಮಾಡುವುದು? ಎಂಬ ಚರ್ಚೆ ಕೂಡ ನಡೆಯಲಿದೆ.
ಕರ್ನಾಟಕದಲ್ಲಿ ನೂತನ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದ ಡಿ.ಕೆ. ಶಿವಕುಮಾರ್ ಅವರು, ಸಂಪುಟ ರಚನೆ ಮಾಡಿದ್ದಾರೆ. ಆದರೆ ಇದೀಗ ಖಾಲಿ ಇರುವ ಸ್ಥಾನಗಳಿಗೆ ನೂತನ ಸಚಿವರ ಆಯ್ಕೆ ನಡೆಯಲಿದೆ. ಖಾಲಿ ಇರುವ ಬರೋಬ್ಬರಿ 20 ಸಚಿವ ಸ್ಥಾನಗಳ ಭರ್ತಿಗಾಗಿ ಇಂದು ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಹೈವೋಲ್ಟೇಜ್ ಮೀಟಿಂಗ್ ನಡೆಯುತ್ತಿದೆ. ಇಡೀ ದಿನ ಎಐಸಿಸಿ ಉನ್ನತ ನಾಯಕರ ಜೊತೆ ಕರ್ನಾಟಕ ಕಾಂಗ್ರೆಸ್ ನಾಯಕರು ಮಹತ್ವದ ಮಾತುಕತೆ ನಡೆಸಲಿದ್ದು, ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿರುವ ಬರೋಬ್ಬರಿ 50 ಶಾಸಕರಲ್ಲಿ ಯಾರಿಗೆ ಪಟ್ಟ ಸಿಗುತ್ತೆ? ಯಾರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ? ಅನ್ನೋ ಚರ್ಚೆ ಜೋರಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ & ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ದೆಹಲಿಗೆ ತೆರಳಿದ್ದಾರೆ.
ಸುರ್ಜೇವಾಲಾ ಜೊತೆ ಮೊದಲ ಹಂತದ ಮೀಟಿಂಗ್
ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಸಭೆಯಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ಪ್ರಮುಖ ನಾಯಕರು ಭಾಗಿ ಆಗಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ & ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆಗೆ ಮೊದಲ ಹಂತದ ಮೀಟಿಂಗ್ ಇಂದು ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಸಂಪುಟ ವಿಸ್ತರಣೆ ಸಂಬಂಧ ವಿವಿಧ ಆಯ್ಕೆಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಯಲಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ಮಾಹಿತಿ ನೀಡಿವೆ. ಸಚಿವರ ಅಂತಿಮ ಪಟ್ಟಿ ಅಥವಾ ಖಚಿತ ಸಂಖ್ಯೆ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆ ಸಿಕ್ಕಿಲ್ಲ. ಹೀಗಾಗಿ ಕಾದು ನೋಡಬೇಕಾಗಿದ್ದು, ಆಕಾಂಕ್ಷಿಗಳ ಪಟ್ಟಿ ಮಾತ್ರ ತುಂಬಾ ದೊಡ್ಡದಾಗಿದೆ.
ಆಕಾಂಕ್ಷಿಗಳಿಂದ ಒತ್ತಡ ತಂತ್ರದ ಮೊರೆ?
ಮತ್ತೊಂದು ಕಡೆ ತಮ್ಮ ತಮ್ಮ ಬೆಂಬಲಿಗರಿಗೆ ಮಂತ್ರಿ ಪಟ್ಟವನ್ನ ನೀಡಬೇಕೆಂದು ಪಟ್ಟು ಹಿಡಿದಿರುವ ರಾಜ್ಯ ನಾಯಕರ ವಾದ & ಅಭಿಪ್ರಾಯವನ್ನು ರಾಹುಲ್ ಗಾಂಧಿ ಆಲಿಸಲಿದ್ದಾರೆ. ಭವಿಷ್ಯದ ನಾಯಕತ್ವ ಹಾಗೂ ಪಕ್ಷದ ಸಂಘಟನೆಯನ್ನು ಗಮನದಲ್ಲಿ ಇಟ್ಟುಕೊಂಡು ರಾಹುಲ್ ಗಾಂಧಿ ಜೊತೆಗಿನ ಚರ್ಚೆಯ ಬಳಿಕವೇ 20 ಸಂಭಾವ್ಯ ಸಚಿವರ ಅಂತಿಮ ಪಟ್ಟಿ ಅಧಿಕೃತವಾಗಿ ಹೊರ ಬೀಳಲಿದೆ. ಅದರಲ್ಲೂ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರಲ್ಲಿ ಸಾಕಷ್ಟು ಉತ್ಸಾಹ ಈಗ ಮೂಡಿದ್ದು, ಇನ್ನೊಂದು ಕಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಸಿದ್ದು ಬೆಂಬಲಿಗರು ಇದೀಗ ಒತ್ತಡ ತಂತ್ರ ಅನುಸರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಮಾತ್ರ ಇದ್ಯಾವುದಕ್ಕೂ ಕೇರ್ ಮಾಡದೆ ಸಚಿವ ಸ್ಥಾನಕ್ಕೆ ಸೂಕ್ತ ಶಾಸಕರನ್ನು ಆಯ್ಕೆ ಮಾಡಲು ಮುಂದಾಗಿದೆ.
ಯಾರಿಗೆ ಸಿಗಲಿದೆ ಸಚಿವ ಸ್ಥಾನ?
ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಸಚಿವ ಸಂಪುಟ ವಿಸ್ತರಣೆ ಜೊತೆಗೆ ಮತ್ತೊಂದು ಸವಾಲು ಇದ್ದು, ಪ್ರಮುಖವಾಗಿ 2028 ಕರ್ನಾಟಕ ವಿಧಾನಸಭೆ ಚುನಾವಣೆ ಮಾತ್ರವಲ್ಲದೆ, ಮುಂಬರುವ 2029ರ ಲೋಕಸಭೆ ಚುನಾವಣೆ ಗಮನದಲ್ಲಿ ಇಟ್ಟುಕೊಂಡೇ ಸಚಿವ ಸ್ಥಾನ ಹಂಚಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಕಾಂಗ್ರೆಸ್ ಪಕ್ಷಕ್ಕೆ 2029 ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದಾಗಿರುವ ಹಿನ್ನೆಲೆ, ಈಗಿನಿಂದಲೇ ಪಕ್ಷದ ಬಲವರ್ಧನೆಗೆ ಒತ್ತು ನೀಡುವ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎನ್ನಲಾಗಿದೆ. ಜಾತಿ, ಜಿಲ್ಲಾವಾರು, ಪ್ರಾದೇಶಿಕವಾರು & ಭಾಷಾ, ಧರ್ಮದ ಲೆಕ್ಕದಲ್ಲಷ್ಟೇ ಅಲ್ಲದೇ ಲೋಕಸಭೆಯಲ್ಲಿ ಗೆದ್ದು ತೋರಿಸುವ ಸಾಮರ್ಥ್ಯ ಇರುವ ಶಾಸಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ಅತ್ತ ಜಮೀರ್ ಅಹ್ಮದ್ ಖಾನ್, ಬಸವರಾಜ ರಾಯರೆಡ್ಡಿ, ರಾಘವೇಂದ್ರ ಹಿಟ್ನಾಳ್, ಗೋಪಾಲಕೃಷ್ಣ ಬೇಳೂರು ಸೇರಿದಂತೆ ರಮೇಶ್ ಬಂಡಿಸಿದ್ದೇ ಗೌಡ ಹಾಗೂ ನಾಗೇಂದ್ರ, ಗುಬ್ಬಿ ವಾಸು, ನಂಜೇಗೌಡ & ಇತರರು ಈಗ ಮಂತ್ರಿ ಪಟ್ಟಕ್ಕೆ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.