ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಏನೆಲ್ಲಾ ಆಗುತ್ತಿದೆ ಅನ್ನೋದನ್ನ ಇಡೀ ದೇಶವೇ ಗಮನ ಇಟ್ಟು ನೋಡ್ತಾ ಇದೆ ಈಗ. ಯಾಕಂದ್ರೆ, ದೇಶದ ಅತಿದೊಡ್ಡ ರಾಜ್ಯ ಹಾಗೂ ಆರ್ಥಿಕವಾಗಿ ಸದೃಢವಾದ ರಾಜ್ಯದ ರಾಜಕೀಯ ಇಡೀ ದೇಶಕ್ಕೆ ಪ್ರಮುಖ ವಿಚಾರ. ಹೀಗಿದ್ದಾಗ ಜೂನ್ ತಿಂಗಳಲ್ಲಿ ಸಿದ್ದರಾಮಯ್ಯ ಪದತ್ಯಾಗ ಹಾಗೂ ನೂತನ ಮುಖ್ಯಮಂತ್ರಿ ಆಗಿ ಡಿ.ಕೆ. ಶಿವಕುಮಾರ್ ಅವರ ಎಂಟ್ರಿ ನಂತರ ಕರ್ನಾಟಕ ರಾಜಕೀಯ ಈಗ ಹಾಟ್‌ಸ್ಪಾಟ್ ಆಗಿದೆ. ಇದೆಲ್ಲಾ ಆದ ನಂತರ ಕೂಡ ಕಾಂಗ್ರೆಸ್ ಹೈಕಮಾಂಡ್‌ಗೆ ನಿದ್ದೆ ಇಲ್ಲದಂತೆ ಆಗಿತ್ತು, ಯಾಕಂದ್ರೆ ಸಚಿವ ಸಂಪುಟ ವಿಸ್ತರಣೆ ವಿಚಾರ ಭಾರಿ ಚರ್ಚೆಗೆ ವೇದಿಕೆ ಒದಗಿಸಿತ್ತು. ಇದೀಗ ಹೊಸ ಸಚಿವರಿಗೆ ಪಟ್ಟ ಫಿಕ್ಸ್ ಆಗಿದ್ದರು ಕೂಡ, ರಾಜ್ಯಪಾಲರ ಬಗ್ಗೆಯೇ ಚಿಂತೆ ಶುರುವಾಗಿದೆ! ಯಾಕೆ ಗೊತ್ತಾ? ಮಾಹಿತಿ ತಿಳಿಯೋಣ ಬನ್ನಿ...
ಹೌದು, ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನ ನಿಗದಿಪಡಿಸುವ ಸಲುವಾಗಿ ಮಧ್ಯಪ್ರದೇಶ ಪ್ರವಾಸದಲ್ಲಿರುವ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಗುರುವಾರ ಮಧ್ಯಾಹ್ನ ಬೆಂಗಳೂರಿಗೆ ವಾಪಸ್ ಬರುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. ಕರ್ನಾಟಕ ರಾಜ್ಯಪಾಲರು 3 ದಿನಗಳ ಕಾಲ ಮಧ್ಯಪ್ರದೇಶ ಪ್ರವಾಸ ಕೈಗೊಂಡಿದ್ದು, ನಿಗದಿತ ವೇಳಾಪಟ್ಟಿ ಪ್ರಕಾರ ಗುರುವಾರ ರಾತ್ರಿ ಪ್ರವಾಸ ಮುಗಿಸಿ ವಾಪಸ್ ಬೆಂಗಳೂರಿಗೆ ಬರಬೇಕಿದೆ. ಆದರೆ, ರಾಜ್ಯಪಾಲರ ಪ್ರವಾಸದ ವೇಳಾಪಟ್ಟಿ ತಿಳಿಯುತ್ತಿದ್ದಂತೆ ಅಲರ್ಟ್ ಆದ ಸಿಎಂ ಡಿ.ಕೆ. ಶಿವಕುಮಾರ್ ಅವರು, ಗುರುವಾರ ಸಂಜೆ ವೇಳೆಗೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಿಗದಿಪಡಿಸಲು ನಿರ್ಧರಿಸಿದ್ದಾರೆ.
ರಾಜ್ಯಪಾಲರು ಹೇಳಿದ್ದು ಏನು ಗೊತ್ತಾ?
ಅಂದಹಾಗೆ ಇದೇ ಕಾರಣಕ್ಕೆ ಇದೀಗ ರಾಜ್ಯಪಾಲರನ್ನು ಸಂಪರ್ಕಿಸಿರುವ ಕರ್ನಾಟಕದ ಮುಖ್ಯಮಂತ್ರಿಗಳು, ತಮ್ಮ ವಾಪಸಾತಿಗಾಗಿ ವಿಶೇಷ ವಿಮಾನದ ವ್ಯವಸ್ಥೆಯನ್ನ ಮಾಡಲಾಗುವುದು. ತಾವು ಗುರುವಾರ ರಾತ್ರಿವರೆಗೂ ಕಾಯದೆ, ಮಧ್ಯಾಹ್ನವೇ ಬೆಂಗಳೂರಿಗೆ ಆಗಮಿಸಬೇಕು ಎಂದು ವಿಶೇಷವಾಗಿ ಕೋರಿದ್ದಾರೆ. ಅಲ್ಲದೇ ಸಿಎಂ ಅವರ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಜ್ಯಪಾಲರು, ಆಗಲಿ ನೋಡೋಣ ಎಂದು ಈಗ ತಿಳಿಸಿರುವುದಾಗಿ ರಾಜಭವನದ ಮೂಲಗಳು ಮಾಹಿತಿ ನೀಡಿವೆ. ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ಮಧ್ಯೆ, ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಶೀಘ್ರದಲ್ಲೇ ಆಯೋಜಿಸಲು ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ.
ಅಂತಿಮ ಪಟ್ಟಿ ಬಗ್ಗೆ ಕುತೂಹಲ!
ಕರ್ನಾಟಕ ರಾಜ್ಯದಲ್ಲಿ ಈ ಬಾರಿ ವಿಸ್ತರಣೆ ಆಗುವ ಸಚಿವ ಸಂಪುಟ ಭವಿಷ್ಯದ ಚುನಾವಣೆಗಳ ದೃಷ್ಟಿಯಿಂದ & 2028 ವಿಧಾನಸಭೆ ಹಾಗೂ 2029 ಲೋಕಸಭೆ ಚುನಾವಣೆ ದೃಷ್ಟಿಯಿಂದ ಕೂಡ ಪ್ರಮುಖವಾದ ವಿಚಾರವಾಗಿದೆ. ಸಚಿವ ಸಂಪುಟ ವಿಸ್ತರಣೆಯ ಕುರಿತು ಕಾಂಗ್ರೆಸ್ ಪಕ್ಷದೊಳಗೂ ಚಟುವಟಿಕೆಗಳು ಹೆಚ್ಚಾಗಿದ್ದು, ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿವೆ ಎನ್ನಲಾಗ್ತಿದೆ. ಈಗಾಗಲೇ ಹಲವು ಶಾಸಕರು ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಟೆನ್ಷನ್ ಮಾಡಿಕೊಂಡಿದ್ದಾರೆ, ಅಂತಿಮ ಪಟ್ಟಿ ಬಗ್ಗೆ ಕುತೂಹಲವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂತಹ ಸಮಯದಲ್ಲೇ ಕರ್ನಾಟಕದ ರಾಜ್ಯಪಾಲರು ಪ್ರವಾಸ ಕೈಗೊಂಡಿರುವುದು ಶಾಸಕರ ಪಾಲಿಗೆ ಟೆನ್ಷನ್ ಹೆಚ್ಚಾಗುವಂತೆ ಮಾಡಿದೆ.
ಚುನಾವಣೆ ಲೆಕ್ಕಾಚಾರದಲ್ಲಿ ಸಚಿವರ ಆಯ್ಕೆ?
ಮೊದಲೇ ಹೇಳಿದಂತೆ 2028 ಕರ್ನಾಟಕ ವಿಧಾನಸಭೆ ಚುನಾವಣೆ ಮಾತ್ರವಲ್ಲದೇ, ಮುಂಬರುವ 2029ರ ಲೋಕಸಭೆ ಚುನಾವಣೆ ಗಮನದಲ್ಲಿ ಇಟ್ಟುಕೊಂಡೇ ಸಚಿವ ಸ್ಥಾನ ಹಂಚಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಇದೀಗ ಕಾಂಗ್ರೆಸ್ ಪಕ್ಷಕ್ಕೆ 2029 ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ್ದಾದ ಹಿನ್ನೆಲೆ, ಪಕ್ಷದ ಬಲವರ್ಧನೆಗೆ ಒತ್ತು ನೀಡಿ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎನ್ನಲಾಗಿದೆ. ಜಾತಿ, ಜಿಲ್ಲಾವಾರು, ಪ್ರಾದೇಶಿಕವಾರು, ಭಾಷಾ, ಧರ್ಮದ ಲೆಕ್ಕ ಮಾತ್ರವಲ್ಲ ಪಕ್ಷಕ್ಕೆ ಬಲ ತುಂಬುವ ದೃಷ್ಟಿಯಿಂದ ಕೂಡ ಇದೀಗ ನೂತನ ಸಚಿವರ ಆಯ್ಕೆ ನಡೆಯುತ್ತಿದೆ. ಈ ಹಿನ್ನೆಲೆ ಇದೀಗ ಕರ್ನಾಟಕದ ಸಂಪುಟ ವಿಸ್ತರಣೆ ವಿಚಾರ ಭಾರಿ ಕೂತೂಹಲ ಕೆರಳಿಸಿದೆ.