Karnataka Government: ಸಚಿವ ಸಂಪುಟ ವಿಸ್ತರಣೆ ಟೆನ್ಷನ್, ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ?

bengaluru diaries | July 13, 2026 - 10:30 am
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಬರೋಬ್ಬರಿ 3 ವರ್ಷಗಳೇ ಕಳೆದಿದ್ದು, ಜೂನ್ ತಿಂಗಳಲ್ಲಿ ಹೊಸ ಸಿಎಂ ಕೂಡ ಎಂಟ್ರಿ ಕೊಟ್ಟಾಗಿದೆ. ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಈಗಾಗಲೇ ಹೊಸ ಸಚಿವ ಸಂಪುಟ ರಚನೆ ಸಮಯದಲ್ಲಿ ದೊಡ್ಡ ಕಿರಿಕ್ ಆಗಿದ್ದು, ಕಾಂಗ್ರೆಸ್ ವರಿಷ್ಠರು ಅದನ್ನ ಸರಿ ಮಾಡುವುದರಲ್ಲಿ ಒದ್ದಾಡಿ ಹೋಗಿದ್ದರು. ಹೀಗಿದ್ದಾಗ ಇನ್ನೇನು ಎಲ್ಲಾ ಸೈಲೆಂಟ್ ಆಗಿದೆ, ಸರ್ಕಾರ ಆರಾಮವಾಗಿ ನಡೆಯುತ್ತೆ ಬಿಡು ಎನ್ನುವಷ್ಟರಲ್ಲೇ ಸಚಿವ ಸಂಪುಟ ವಿಸ್ತರಣೆ ಟೆನ್ಷನ್ ಶುರುವಾಗಿದ್ದು ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಾ? ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣವೂ ಇದೆ ಅದನ್ನ ಮುಂದೆ ಓದಿ ತಿಳಿಯೋಣ ಬನ್ನಿ.

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಡೆಯುತ್ತಿರುವ ರಾಜಕೀಯ ಚರ್ಚೆಗಳು ಪಕ್ಷದ ಒಳಗೆ ನಡೆದಿರುವ ಬೆಳವಣಿಗೆಗಳಿಗೆ ಹೊಸ ಆಯಾಮ ನೀಡಿವೆ. ಮಂತ್ರಿ ಪಟ್ಟಕ್ಕಾಗಿ ಹಲವಾರು ಶಾಸಕರು ನಿರೀಕ್ಷೆಯಲ್ಲಿ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ಸಮೀಕರಣಗಳ ಬಗ್ಗೆ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಈ ರೀತಿಯ ಭಾರಿ ಮಹತ್ವದ ರಾಜಕೀಯ ಬೆಳವಣಿಗೆಗಳ ನಡುವೆಯೇ ಹಿರಿಯ ನಾಯಕ ಹಾಗೂ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮುಂದಿನ ರಾಜಕೀಯ ನಡೆ ಇಡೀ ರಾಜ್ಯ ರಾಜಕೀಯದ ಗಮನ ಸೆಳೆಯುತ್ತಿದೆ.


ಸಂಪುಟ ವಿಸ್ತರಣೆಯಿಂದ ಸರ್ಕಾರಕ್ಕೆ ಆಪತ್ತು?
ಹೌದು, ವಿಧಾನಸೌಧ 3ನೇ ಮಹಡಿಯ ಕಾರಿಡಾರ್‌ಗಳಲ್ಲಿ ಈಗ ಹರಡುತ್ತಿರುವುದು ಬರೀ ಅಭಿವೃದ್ಧಿಯ ಸುಗಂಧವಲ್ಲ, ಅದು ಅಧಿಕಾರದ ಆಸೆಯ ಅತೃಪ್ತ ಶಾಸಕರ ನಿಟ್ಟುಸಿರು. ಅಷ್ಟಕ್ಕೂ ಸಿಎಂ ಡಿ.ಕೆ.ಶಿವಕುಮಾರ್ ಅವರ ಕ್ಯಾಬಿನೆಟ್ ವಿಸ್ತರಣೆ ಚರ್ಚೆ ಶುರುವಾಗಿದ್ದೇ ತಡ ಕರ್ನಾಟಕ ಕಾಂಗ್ರೆಸ್ ಗೋಡೆಯಲ್ಲಿ ಬಿರುಕುಗಳು ಸ್ಪಷ್ಟವಾಗಿ ಕಂಡಿವೆ. ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿ ಎಷ್ಟು ದೊಡ್ಡದಾಗಿದೆ ಅಂದ್ರೆ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳೂ ಸಾಲುವುದಿಲ್ಲ.

50 ಘಟಾನುಘಟಿ ಶಾಸಕರು ಈಗ ಸಚಿವ ಸ್ಥಾನ ಪಟ್ಟ ಪಡೆಯಲು ಹಪಹಪಿಸುತ್ತಿದ್ದಾರೆ. ಹೀಗಿದ್ದಾಗ ಒಂದು ಕಡೆ ಕೆಲವರು ಸಿಎಂ ಡಿ.ಕೆ. ಶಿವಕುಮಾರ್‌ರ ಬಳಿ ಬೇಡುತ್ತಿದ್ದರೆ, ಇನ್ನೂ ಕೆಲವರು ಸಿದ್ದರಾಮಯ್ಯ ಅವರ ಮೂಲಕ ಒತ್ತಡ ಹಾಕಿಸುವ ತಂತ್ರಕ್ಕೆ ಮೊರೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ, ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ಸರ್ಕಾರಕ್ಕೆ ಆಪತ್ತು ಎದುರಾಗುತ್ತಾ? ವಿರೋಧ ಪಕ್ಷ ನಾಯಕರ ಮಾತು ನಿಜವಾಗುತ್ತಾ? ಬನ್ನಿ ತಿಳಿಯೋಣ.

ಜಮೀರ್ ಅಹ್ಮದ್ ಖಾನ್ ಟೆನ್ಷನ್
ಅಂದಹಾಗೆ ಪ್ರಮುಖವಾಗಿ ಜಮೀರ್ ಅಹ್ಮದ್ ಖಾನ್ ಅವರು ಹಲವು ವರ್ಷಗಳಿಂದ ಕಾಂಗ್ರೆಸ್‌ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದು, ಅಲ್ಪಸಂಖ್ಯಾತ ಸಮುದಾಯದಲ್ಲಿ ಪ್ರಭಾವ ಹೊಂದಿದ್ದಾರೆ. ಇದೇ ಕಾರಣಕ್ಕೆ ಸಚಿವ ಸಂಪುಟದ ಅಂತಿಮ ಪಟ್ಟಿಯಲ್ಲಿ ಅವರ ಹೆಸರು ಇರಬಹುದೇ ಎಂಬ ಕುತೂಹಲ ಸಹಜವಾಗಿದೆ. ಹೀಗಿದ್ದರೂ ಈ ಬಗ್ಗೆ ಪಕ್ಷದ ನಾಯಕತ್ವ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಅಕಸ್ಮಾತ್ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದರೆ ರೊಚ್ಚಿಗೆದ್ದು ಹೊಸ ವರಸೆ ಶುರು ಮಾಡುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಇನ್ನೂ ಕೆಲವು ಚರ್ಚೆಗಳ ಪ್ರಕಾರ, ಜಮೀರ್ ಅಹ್ಮದ್ ಖಾನ್ ಅವರು ಮಂತ್ರಿಪಟ್ಟ ಸಿಗದೇ ಇದ್ದರೆ ಬೇರೆ ಪಕ್ಷಕ್ಕೆ ಪ್ರಯಾಣ ಬೆಳೆಸುತ್ತಾರಾ? ಎಂಬ ಚರ್ಚೆ ಕೂಡ ಜೋರಾಗಿದೆ.

2029ರ ಲೋಕಸಭೆ ಚುನಾವಣೆಯೇ ಟಾರ್ಗೆಟ್
ಪ್ರಮುಖವಾಗಿ 2028ರ ಕರ್ನಾಟಕ ವಿಧಾನಸಭೆ ಚುನಾವಣೆ ಮಾತ್ರವಲ್ಲದೆ, ಮುಂಬರುವ 2029ರ ಲೋಕಸಭೆ ಚುನಾವಣೆ ಗಮನದಲ್ಲಿ ಇಟ್ಟುಕೊಂಡೇ ಇದೀಗ ಸಚಿವ ಸ್ಥಾನ ಹಂಚಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಏಕೆಂದರೆ ಕಾಂಗ್ರೆಸ್‌ ಪಕ್ಷಕ್ಕೆ 2029 ಲೋಕಸಭೆ ಚುನಾವಣೆಯು ಅತ್ಯಂತ ಮಹತ್ವದ್ದಾಗಿರುವ ಹಿನ್ನೆಲೆ, ಈಗಿನಿಂದಲೇ ಪಕ್ಷದ ಬಲವರ್ಧನೆಗೆ ಒತ್ತು ನೀಡುವ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎನ್ನಲಾಗಿದೆ. ರಾಜ್ಯದಲ್ಲಿ ಸಚಿವ ಸ್ಥಾನ ಪಡೆಯುವ ನಾಯಕರು ತಮ್ಮ ಪ್ರಭಾವದ ವ್ಯಾಪ್ತಿ ಮತ್ತು ಸಾಮರ್ಥ್ಯದ ಮೂಲಕ ಸಂಘಟನೆ ಬಲಪಡಿಸುವುದರ ಜೊತೆಗೆ ಲೋಕಸಭೆ ಚುನಾವಣೆಯಲ್ಲಿ ಬೆಸ್ಟ್ ರಿಸಲ್ಟ್ ತರುವ ಸಾಮರ್ಥ್ಯ ಹೊಂದಿರಬೇಕು ಎಂಬ ಮಾನದಂಡವನ್ನು ಹೈಕಮಾಂಡ್ ಪರಿಗಣಿಸುತ್ತಿದೆ ಎನ್ನಲಾಗಿದೆ.


ಪಕ್ಷ ಬಿಡುತ್ತಾರಾ ರೆಬೆಲ್ ಶಾಸಕರು?
ಹೀಗಿದ್ದಾಗಲೇ ಜಾತಿ, ಜಿಲ್ಲಾವಾರು, ಪ್ರಾದೇಶಿಕವಾರು ಹಾಗೂ ಭಾಷಾ, ಧರ್ಮದ ಲೆಕ್ಕದಲ್ಲಷ್ಟೇ ಅಲ್ಲದೇ ಲೋಕಸಭೆಯಲ್ಲಿ ಗೆದ್ದು ತೋರಿಸುವ ಸಾಮರ್ಥ್ಯ ಇರುವ ಶಾಸಕರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ. ಇಂತಹ ಸಮಯದಲ್ಲಿ ಅತ್ತ ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ತಪ್ಪಿದರೆ ಅಲ್ಲೋಲ ಕಲ್ಲೋಲ ಉಂಟಾಗುವ ಭೀತಿ ನಡುವೆಯೇ ಮತ್ತೊಂದು ಕಡೆ ಮಂತ್ರಿ ಪಟ್ಟಕ್ಕೆ ಈಗ ಪ್ರಬಲ ಆಕಾಂಕ್ಷಿಗಳಾಗಿರುವ ಬಸವರಾಜ ರಾಯರೆಡ್ಡಿ, ರಾಘವೇಂದ್ರ ಹಿಟ್ನಾಳ್, ಗೋಪಾಲಕೃಷ್ಣ ಬೇಳೂರು ಸೇರಿದಂತೆ ರಮೇಶ್ ಬಂಡಿಸಿದ್ದೇ ಗೌಡ ಹಾಗೂ ನಾಗೇಂದ್ರ, ಗುಬ್ಬಿ ವಾಸು, ನಂಜೇಗೌಡ ಮತ್ತು ಇತರರು ಪಕ್ಷ ತೊರೆಯುವ ಅಥವಾ ಸರ್ಕಾರದ ವಿರುದ್ಧ ರೆಬೆಲ್ ಆಗುವ ಆತಂಕ ಕೂಡ ಕಾಂಗ್ರೆಸ್ ವರಿಷ್ಠರಲ್ಲಿ ಆವರಿಸಿದೆ ಸದ್ಯಕ್ಕೆ.

ಎಲ್ಲವನ್ನೂ ಎದುರಿಸಲು ವರಿಷ್ಠರು ಸಜ್ಜು!
ರಾಜ್ಯದ ವಿವಿಧ ಭಾಗಗಳಲ್ಲಿ ಪಕ್ಷದ ಹಿಡಿತವನ್ನು ಬಲಪಡಿಸುವುದು, ಸ್ಥಳೀಯ ನಾಯಕತ್ವವನ್ನು ಉತ್ತೇಜಿಸುವುದು ಹಾಗೂ ಮತದಾರರ ಜೊತೆಗೆ ನಿರಂತರವಾಗಿ ಸಂಪರ್ಕ ಕಾಯ್ದುಕೊಳ್ಳುವುದು ಭವಿಷ್ಯದಲ್ಲಿ ಸಚಿವರ ಪ್ರಮುಖ ಜವಾಬ್ದಾರಿ ಆಗಿರುವ ಹಿನ್ನೆಲೆ ವರಿಷ್ಠರು ಎಲ್ಲಾ ಆಯಾಮದಲ್ಲೂ ಚಿಂತಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಸಂಪುಟ ವಿಸ್ತರಣೆ ವೇಳೆ ಸಾಮಾಜಿಕ & ಪ್ರಾದೇಶಿಕ ಸಮತೋಲನದ ಜೊತೆಯಲ್ಲಿ ಚುನಾವಣೆ ಗೆಲುವಿನ ಸಾಮರ್ಥ್ಯವೂ ಪ್ರಮುಖ ಮಾನದಂಡವಾಗುವ ಸಾಧ್ಯತೆ ಇದೆ. ಹೀಗಾಗಿ ಇಡೀ ರಾಜ್ಯ ರಾಜಕೀಯದ ಗಮನ ಇದೀಗ ಸಂಪುಟ ವಿಸ್ತರಣೆ ಮೇಲೆಯೇ ನೆಟ್ಟಿದೆ.

ಒಟ್ನಲ್ಲಿ ಕರ್ನಾಟಕ ರಾಜಕೀಯ ಇದೀಗ ಇಡೀ ರಾಷ್ಟ್ರದ ಗಮನ ಸೆಳೆಯುತ್ತಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವ ಕೆಲವೇ ರಾಜ್ಯಗಳ ಪೈಕಿ ಕರ್ನಾಟಕ ಕೂಡ ಒಂದಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಬಿಸಿಬಿಸಿ ಚರ್ಚೆಗೆ ವೇದಿಕೆ ಒದಗಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ಬಗ್ಗೆ ಅಲರ್ಟ್ ಆಗಿದ್ದಾರೆ. ಮತ್ತೊಂದು ಕಡೆ ಬಿಜೆಪಿ ಕೇಂದ್ರದ ನಾಯಕರು ಕರ್ನಾಟಕ ರಾಜಕೀಯ ಬೆಳವಣಿಗೆಯ ಪ್ರತಿಕ್ಷಣದ ಅಪ್‌ಡೇಟ್ ಇದೀಗ ಪಡೆಯುತ್ತಿದ್ದಾರೆ.