ಮಳೆ ಇಲ್ಲ... ನೀರೂ ಇಲ್ಲ... ಕರ್ನಾಟಕ ರಾಜ್ಯದಲ್ಲಿ ಇದೀಗ ಎಲ್ಲಾ ಕಡೆ ಬರ ಆವರಿಸುವ ಪರಿಸ್ಥಿತಿ ಇದೆ. ಆ ಕಡೆ ಮಲೆನಾಡಿನ ಪ್ರದೇಶಗಳಲ್ಲಿ ಕೂಡ ಭತ್ತ ಹಾಗೂ ಇತರ ಬೆಳೆಗಳಿಗೆ ನೀರು ಇಲ್ಲದೆ ಪರದಾಡುತ್ತಿದ್ದಾರೆ ಕೃಷಿಕರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಕೂಡ ಕಠಿಣ ಕ್ರಮಗಳನ್ನು ಕೈಗೊಂಡು, ನೀರು ರಕ್ಷಣೆ ಮಾಡುವುದಕ್ಕೆ ಮುಂದಾಗಿದೆ. ಅದರಲ್ಲೂ ಈ ವರ್ಷ ಮುಂಗಾರು ಮಳೆ ಹಾಗೂ ಹಿಂಗಾರು ಮಳೆ ಎಲ್ಲವೂ ಕೈಕೊಡುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿಯೇ ರಾಜ್ಯದಲ್ಲಿ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೇ ಇರುವ ಪರಿಣಾಮ ನೀರಿನ ಸಂಗ್ರಹ ಪರಿಸ್ಥಿತಿ ದಿನದಿಂದ ದಿನಕ್ಕೆ ಆತಂಕಕಾರಿ ಹಂತಕ್ಕೆ ತಲುಪುತ್ತಿದೆ. ಇಷ್ಟೆಲ್ಲದರ ನಡುವೆ ಡ್ಯಾಂ & ಕೆರೆಗಳ ನೀರು ಖಾಲಿ ಖಾಲಿ, ರೈತರಿಗೆ ಸಿಎಂ ಮಹತ್ವದ ಸಂದೇಶ...
ಹೌದು, ಕರ್ನಾಟಕ ರಾಜ್ಯ ಈ ಬಾರಿ ಮುಂಗಾರು ಮಳೆಯ ಕೊರತೆಯಿಂದ ಜಲಾಶಯಗಳ ನೀರಿನ ಮಟ್ಟದಲ್ಲಿ ಭಾರೀ ಕುಸಿತ ಕಂಡುಬಂದ ಹಿನ್ನೆಲೆ ಪರದಾಡುವ ಪರಿಸ್ಥಿತಿ ಇದೆ. ಇನ್ನು ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಇದೀಗ ಮುಂದಿನ ಪರಿಸ್ಥಿತಿ ನಿಭಾಯಿಸಲು ಸಜ್ಜಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಮುನ್ನೆಚ್ಚರಿಕೆ ಕ್ರಮ ಎಂಬಂತೆ ಸದ್ಯ ಲಭ್ಯವಿರುವ ನೀರನ್ನು ಜನರ ಕುಡಿಯುವ ಅವಶ್ಯಕತೆಗೆ ಮಾತ್ರ ಸಂರಕ್ಷಿಸುವ ತೀರ್ಮಾನವನ್ನು, ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಈ ಮೂಲಕ ಬರ ಪರಿಸ್ಥಿತಿಗೆ ಈಗಲೇ ಸಿದ್ಧತೆ ಆರಂಭವಾಗಿದ್ದು, ಪ್ರಕೃತಿ ಮಾತೆಯ ಮುನಿಸಿನ ಪರಿಣಾಮ ಎಲ್ಲಾ ಕಡೆ ಚಿಂತೆ ಶುರುವಾಗಿದೆ. ಅದರಲ್ಲೂ ಬಯಲು ಸೀಮೆ ಭಾಗ ಹಾಗೂ ನದಿ ನೀರು ನಂಬಿ ಬದುಕುವ ಪ್ರದೇಶಗಳ ಜನರು ಭಯಪಡುವಂತೆ ಆಗಿದೆ.
ಮಲೆನಾಡು ಭಾಗದಲ್ಲಿ ಪರಿಸ್ಥಿತಿ ಭೀಕರ
ಮುಂಗಾರು ಮಳೆಯೇ ಆಗಿರಲಿ & ಹಿಂಗಾರು ಮಳೆಯೇ ಆಗಿರಲಿ, ಮಲೆನಾಡು ಭಾಗದಲ್ಲಿ ಭರ್ಜರಿ ಮಳೆ ಬರುತ್ತಾ ಸದಾ ಹಸಿರಿನ ಸಿರಿಯಿಂದ ಕೂಡಿರುತ್ತದೆ. ಅದರಲ್ಲೂ ದೊಡ್ಡ ದೊಡ್ಡ ಪರ್ವತಗಳು ಮಳೆಯ ಭಾರವಾದ ಮೋಡ ತಡೆಹಿಡಿದು ಭಾರಿ ಮಳೆ ಸುರಿಸುತ್ತವೆ. ಹೀಗಿದ್ದಾಗ 2026 ಮುಂಗಾರು ಮಳೆ ಸಮಯದಲ್ಲಿ ಪರಿಸ್ಥಿತಿ ಬೇರೆಯದ್ದೇ ರೀತಿ ಇದೆ. ಸೋಷಿಯಲ್ ಮೀಡಿಯಾಗಳಲ್ಲಿ ಇದೀಗ ವೈರಲ್ ಆಗುತ್ತಿರುವ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆ ಸೇರಿ ಹಲವು ಮಲೆನಾಡು ಜಿಲ್ಲೆಗಳ ವಿಡಿಯೋಗಳು ಭೀಕರ ನೀರಿನ ಸಮಸ್ಯೆ ಪ್ರತಿಬಿಂಬಿಸುತ್ತಿವೆ. ಬಹುತೇಕ ಕೃಷಿಕರು ಈಗ ಭತ್ತ ಬೆಳೆಯಲು ಹಾಗೂ ತೋಟಗಳನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದು, ನೋಡ ನೋಡುತ್ತಲೇ ಭವಿಷ್ಯದಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗುವ ಮುನ್ಸೂಚನೆ ಸಿಗುತ್ತಿದೆ. ಹೀಗಾಗಿಯೇ ಇದೀಗ ಸಿಎಂ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳ ಜೊತೆಗೆ ವಿಶೇಷ ಸಭೆ ನಡೆಸಿದ್ದಾರೆ.
178 ತಾಲೂಕುಗಳ ಮಳೆ ಪ್ರಮಾಣ ಕುಸಿತ
ಕರ್ನಾಟಕದ ವಿವಿಧ ಜಿಲ್ಲೆಗಳ ಮಳೆ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿ ಖಡಕ್ ಸೂಚನೆ ನೀಡಿದ್ದಾರೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು. ಈ ವರ್ಷ ಶೇಕಡಾ 60 ರಷ್ಟು ಮಳೆ ಕೊರತೆ ದಾಖಲಾಗಿರುವುದು ಕಳವಳಕಾರಿ ಬೆಳವಣಿಗೆ, ಮಳೆ ಅಭಾವದಿಂದಾಗಿ ರಾಜ್ಯದ ಪ್ರಮುಖ ಡ್ಯಾಂಗಳ ನೀರು ಸಂಗ್ರಹವೂ ಭಾರಿ ಕುಸಿತ ಕಂಡಿದೆ. ಕರ್ನಾಟಕದ ಜಲಾಶಯಗಳಲ್ಲಿ ಒಟ್ಟು ಸಾಮರ್ಥ್ಯದ ಅಂದಾಜು ಶೇಕಡಾ 40 ರಷ್ಟು ಮಾತ್ರ ನೀರು ಉಳಿದಿದೆ ಎಂದು ವಿವರಿಸಿದ ಮುಖ್ಯಮಂತ್ರಿಗಳು, ಮಳೆ ಕೊರತೆಯ ಪರಿಣಾಮ ರಾಜ್ಯದ ಅನೇಕ ತಾಲೂಕುಗಳು ಬರದ ಪರಿಸ್ಥಿತಿ ಕಡೆಗೆ ಸಾಗುತ್ತಿವೆ. ಒಟ್ಟು 178 ತಾಲೂಕುಗಳಲ್ಲಿ ಮಳೆ ಪ್ರಮಾಣ ತೀವ್ರವಾಗಿ ಕುಸಿದಿದೆ ಎಂದಿದ್ದಾರೆ. ಈ ಎಲ್ಲಾ ಕಾರಣಗಳನ್ನು ತಾಳೆಹಾಕಿ ನೋಡಿ ಇದೀಗ ಕುಡಿಯುವ ನೀರಿನ ರಕ್ಷಣೆಗೆ ಸರ್ಕಾರ ಮುಂದಾಗಿದೆ.