ಮಳೆ.. ಮಳೆ.. ಮಳೆ.. ಹೀಗೆ ಕಳೆದ 1 ವಾರದಿಂದ ಕರ್ನಾಟಕದ ಜನರು ಸತತವಾಗಿ ಬರೀ ಮಳೆಯ ಸುದ್ದಿಗಳನ್ನು ಕೇಳಿ ಕೇಳಿ ಆಶ್ಚರ್ಯಗೊಂಡಿದ್ದರು. ಆದರೆ ಈಗ ಮಳೆರಾಯ ಸೈಲೆಂಟ್ ಆದಂತೆ ಕಾಣುತ್ತಿದ್ದು, ಮಳೆ ಅಬ್ಬರ ಕಡಿಮೆ ಆಗಿದೆ. ಪ್ರಮುಖ ನದಿಗಳ ಜನ್ಮಸ್ಥಾನ ಆಗಿರುವ ಕರ್ನಾಟಕ ರಾಜ್ಯದ ಮಲೆನಾಡು ಭಾಗವೂ ಸೇರಿದಂತೆ, ಉತ್ತರ ಒಳನಾಡು & ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮಳೆರಾಯ ಬಹುತೇಕ ಸೈಲೆಂಟ್ ಆಗುತ್ತಿರುವ ಲಕ್ಷಣ ಗೋಚರಿಸಿದೆ. ಏಕೆಂದರೆ ಒಂದು ಕಡೆ ಉತ್ತರ ಭಾರತ ಹಾಗೂ ಈಶಾನ್ಯ ಭಾರತದಲ್ಲಿ ಮಳೆ ಮೋಡಗಳ ರಾಶಿ ಆವರಿಸಿದ್ದರೆ, ಇನ್ನೊಂದು ಕಡೆ ದಕ್ಷಿಣ ಭಾರತದಲ್ಲಿ ಮೆಲ್ಲಗೆ ಮೋಡಗಳೇ ಕಾಣೆ ಆಗುತ್ತಿವೆ. ಹೀಗಾಗಿಯೇ ಇದೀಗ ಮುಂಗಾರು ಮಳೆ ಅಬ್ಬರ ಕರ್ನಾಟಕ ರಾಜ್ಯದಲ್ಲೂ ಕುಂಟಿತವಾಗಿದ್ದು, ಕರ್ನಾಟಕದ ಜಲಾಶಯಗಳು ಇನ್ನೇನು ತುಂಬುವ ಹಂತದಲ್ಲಿ ಮಳೆ ಮಾಯವಾಗುತ್ತಿದೆ.
ಕಾವೇರಿ ಕೊಳ್ಳದಲ್ಲಿ ಮಳೆ ಪ್ರಮಾಣ ಕಡಿಮೆ ಆದರೆ ಇಡೀ ರಾಜ್ಯದಲ್ಲೇ ಸಂಚಲನ ಸೃಷ್ಟಿಯಾಗುತ್ತದೆ, ಯಾಕೆ ಅಂದ್ರೆ ಕಾವೇರಿ ನೀರಿನ ವಿಚಾರಕ್ಕೆ ತಮಿಳುನಾಡು ಕಿರಿಕ್ ಮಾಡೇ ಮಾಡುತ್ತದೆ. ಮತ್ತೊಂದು ಕಡೆ ಕನ್ನಡಿಗರ ರಾಜಧಾನಿ ಬೆಂಗಳೂರಿನ ಜನರಿಗೆ ನೀರಿನ ಕೊರತೆ ಉಂಟಾಗುತ್ತದೆ, ಆ ಮೂಲಕ ಭಯದ ವಾತಾವರಣ ಕೂಡ ನಿರ್ಮಾಣವಾಗಿ ಕಾನೂನು ಹೋರಾಟ ಶುರುವಾಗುತ್ತದೆ. ಇಷ್ಟೆಲ್ಲದರ ನಡುವೆ ಕರ್ನಾಟಕ ಕೂಡ ನೀರು ರಿಲೀಸ್ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕುವ ಕಾರಣಕ್ಕೆ ದೊಡ್ಡ ದೊಡ್ಡ ಹೋರಾಟಗಳು ಭುಗಿಲೇಳುತ್ತವೆ. ಇದೇ ರೀತಿ 2026ರ ಈ ವರ್ಷ ಕೂಡ ಮುಂಗಾರು ಮಳೆ ಇನ್ನೇನು ಕೈಕೊಟ್ಟು ಹೋಗಿತ್ತು, ಕರ್ನಾಟಕದ ಜನರು ಬರದಲ್ಲೇ ಬದುಕುವ ಆತಂಕ ಎದುರಾಗಿತ್ತು. ಆದರೆ ಆಗಸ್ಟ್ ಮೊದಲ ವಾರ ಸುರಿದ ಮುಂಗಾರು ಮಳೆ ಬರದ ಆತಂಕವನ್ನು ದೂರ ಮಾಡಿದೆ. ಆ ಮೂಲಕ ಕನ್ನಡ ನಾಡಿಗೆ ಭರ್ಜರಿ ಸುದ್ದಿ ಸಿಕ್ಕಂತೆ ಆಗಿದ್ದರೂ, ಕಾವೇರಿ ಕೊಳ್ಳದಲ್ಲಿ ಡ್ಯಾಂಗಳು ಬಹುತೇಕ ತುಂಬೇ ಇಲ್ಲ!
ಕೆಆರ್‌ಎಸ್ ಜಲಾಶಯದ ಬಗ್ಗೆಯೇ ಚಿಂತೆ!
ಕಾವೇರಿ ನೀರಿನ ವಿಚಾರ ಬಂದರೆ ತಮಿಳುನಾಡು ಮೊದಲು ಕಣ್ಣಿಡುವುದು ಕನ್ನಡಿಗರ ಹೆಮ್ಮೆ ಕೆಆರ್‌ಎಸ್ ಡ್ಯಾಂ ಮೇಲೆ. ಏಕೆಂದರೆ ಕೆಆರ್‌ಎಸ್ ಡ್ಯಾಂ ಇಡೀ ಕಾವೇರಿ ಕೊಳ್ಳದಲ್ಲಿ ಅತ್ಯಂತ ಹೆಚ್ಚು ನೀರು ಶೇಖರಣೆ ಆಗುವ & ಅತಿಮುಖ್ಯ ಜಲಾಶಯ. ಇದೇ ಕಾರಣಕ್ಕೆ ಕೆಆರ್‌ಎಸ್ ಡ್ಯಾಂ ನೀರಿನ ಮೇಲೆ ಕಣ್ಣು ಹಾಕುವ ತಮಿಳುನಾಡಿಗೆ, ಈ ಬಾರಿ ಕೂಡ ಅದೇ ಹುಚ್ಚು ಹಿಡಿದಿದೆ. ಕನ್ನಡಿಗರು ಕೂಡ ತಮಿಳುನಾಡಿನ ರಾಜಕಾರಣಿಗಳ ವಿರುದ್ಧ ಭಾರಿ ಆಕ್ರೋಶ ಹೊರಹಾಕಿ ಇನ್ನೇನು ಆಗಸ್ಟ್ 13ಕ್ಕೆ ಬಂದ್ ಮಾಡಲು ಕೂಡ ಮುಂದಾಗಿದ್ದಾರೆ. ಇಂತಹ ಸಮಯದಲ್ಲೇ ಭಾರಿ ಮಳೆ ಸುರಿದು ಕೆಆರ್‌ಎಸ್ ಜಲಾಶಯ ಅರ್ಧದಷ್ಟು ತುಂಬಿದೆ. ಈ ಮೂಲಕ ಸುಮಾರು 25 ಟಿಎಂಸಿಗೂ ಹೆಚ್ಚು ನೀರು ಈಗ ಕೆಆರ್‌ಎಸ್ ಜಲಾಶಯದಲ್ಲಿ ಇದ್ದು, ಕನ್ನಡಿಗರ ರಾಜಧಾನಿ ಬೆಂಗಳೂರು ಟೆನ್ಷನ್ ಫ್ರೀ ಆಗಿದೆ ಎನ್ನಬಹುದು. ಹಾಗೇ ಕಾವೇರಿ ಕೊಳ್ಳದ ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ಕೂಡ ಬಹುತೇಕ ಫುಲ್ ಆಗಿವೆ.