ಮಳೆ ಆರ್ಭಟ ಮತ್ತೆ ಜೋರಾಗಿದ್ದು, ಕನ್ನಡಿಗರಿಗೆ ಒಂದಷ್ಟು ನೆಮ್ಮದಿ ಸಿಕ್ಕಿದೆ. ಅದರಲ್ಲೂ ಮುಂಗಾರು ಮಳೆ ಕೈಕೊಟ್ಟು ಹೋಗಿದೆ ಎಂದು ಚಿಂತೆ ಮಾಡುತ್ತಿದ್ದ ಕನ್ನಡ ನಾಡಿನ ಜನರಿಗೆ ಇದೀಗ ಭರ್ಜರಿ ಸುದ್ದಿಯು, ಖುಷಿಪಡುವ ಸಂದೇಶವು ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಲೆನಾಡು ಪ್ರದೇಶ ಹಾಗೂ ಕರಾವಳಿ ಭಾಗದಲ್ಲಿ ಭರ್ಜರಿ ಮಳೆ ಸುರಿಯುತ್ತಿದೆ. ಹಾಗೇ ಉತ್ತರ ಕರ್ನಾಟಕ ಭಾಗದಲ್ಲೂ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ಮುಂಗಾರು ಮಳೆ ಚುರುಕುಗೊಂಡ ಪರಿಣಾಮ ಇದೀಗ ಕರ್ನಾಟಕದ ನದಿಗಳ ನೀರಿನ ಪ್ರಮಾಣ ಗಣನೀಯ ಮಟ್ಟದಲ್ಲಿ ಏರಿಕೆ ಕಂಡಿದೆ. ಈ ಮೂಲಕ ಮಳೆ ಕೊರತೆ ನಡುವೆ ನಲುಗಿ ಹೋಗಿದ್ದ ಕರ್ನಾಟಕ ರಾಜ್ಯದ ಜನರಿಗೆ ಮಳೆರಾಯ ಆಕ್ಟಿವ್ ಆಗಿ ಖುಷಿ ಕೊಟ್ಟಿದ್ದಾನೆ.
ಮಳೆ ಅಬ್ಬರಕ್ಕೆ ಈಗಾಗಲೇ ಹಲವು ಕಡೆ ಹಲವು ರೀತಿಯ ಸಮಸ್ಯೆಗಳು ಎದುರಾಗಿದ್ದು, ಮಳೆ ಪ್ರಮುಖವಾಗಿ ಕರ್ನಾಟಕದ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯೂ ಸೇರಿ ಮೈಸೂರು ಭಾಗ, ಹುಬ್ಬಳ್ಳಿ & ಧಾರವಾಡ ಸುತ್ತಮುತ್ತಲ ಜಿಲ್ಲೆಗಳಲ್ಲಿ ಹಾಗೇ ಬೆಳಗಾವಿಯಲ್ಲಿ ಸುರಿಯುತ್ತಿದೆ. ಇಷ್ಟು ಮಾತ್ರವಲ್ಲ ಇನ್ನೂ 2 ದಿನಗಳ ಕಾಲ ಇದೇ ರೀತಿ ಮಳೆ ವಾತಾವರಣವು ಈ ಭಾಗಗಳಲ್ಲಿ ಮುಂದುವರಿಯುತ್ತದೆ ಎಂಬ ಸಂದೇಶ ರವಾನಿಸಲಾಗಿದೆ. ಈ ಮೂಲಕ ಕನ್ನಡ ನಾಡಿನಲ್ಲಿ ಮಳೆ ಕೊರತೆ ಕಡಿಮೆ ಆಗಿದ್ದು, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕೂಡ ಏರಿಕೆ ಕಾಣುತ್ತಿದೆ.
ಮಳೆ.. ಮಳೆ.. ಮಳೆ..
ಕರ್ನಾಟಕದ ಮಲೆನಾಡು & ಕರಾವಳಿ ಭಾಗಗಳ ಜೊತೆಗೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕೂಡ ಇದೀಗ ಮಳೆ ನಿರೀಕ್ಷೆ ಮೂಡಿದ್ದು ಜನರು ಫುಲ್ ಖುಷ್ ಆಗಿದ್ದಾರೆ ಈಗ. ಹಾಗೇ ಮತ್ತೊಂದೆಡೆ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆ ಮುನ್ಸೂಚನೆ ಹಿನ್ನೆಲೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು & ಹಾಸನ ಮತ್ತು ಉತ್ತರ ಕನ್ನಡ ಜಿಲ್ಲೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಇನ್ನುಳಿದ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ನಿರೀಕ್ಷೆ ಮಾಡಲಾಗಿದೆ. ಅಲ್ಲದೇ ಭಾರಿ ಮಳೆ ಕಾರಣಕ್ಕೆ ಈ ಭಾಗಗಳಲ್ಲಿ ಅಲ್ಲಲ್ಲಿ ಅವಘಡ ಸಂಭವಿಸಿದ ವರದಿ ಆಗಿದ್ದು, ಮುಂಜಾಗ್ರತಾ ಕ್ರಮ ಕೈಗೊಂಡಿರುವ ಅಧಿಕಾರಿಗಳು ಎಲ್ಲವನ್ನೂ ಸೂಕ್ಷ್ಮವಾಗಿ ನಿಭಾಯಿಸುತ್ತಿದ್ದಾರೆ.
ತಮಿಳುನಾಡಿಗೆ ಹರದಿ ಕಾವೇರಿ ನೀರು
ಹೀಗಿದ್ದಾಗ ಕಾವೇರಿ ನದಿ ನೀರಿಗಾಗಿ ಕಿರಿಕ್ ಮಾಡಿದ್ದ ತಮಿಳುನಾಡಿಗೆ ಈಗ ಖುಷಿ ಸಿಕ್ಕಿದೆ, ಏಕೆಂದರೆ ಈ ಕಡೆ ಕರ್ನಾಟಕದ ಕಾವೇರಿ ಕೊಳ್ಳದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಹೀಗಾಗಿ ಕನ್ನಡ ನಾಡಿನ ಕಬಿನಿ ಸೇರಿ ಕಾವೇರಿ ಕೊಳ್ಳದ ಜಲಾಶಯಗಳು ತುಂಬುತ್ತಿವೆ. ಅದರಲ್ಲೂ ಕಬಿನಿ ಡ್ಯಾಂ ಫುಲ್ ಆಗಿರುವ ಕಾರಣಕ್ಕೆ ಈಗ ನೀರು ಹೊರಗೆ ಬಿಡಲಾಗುತ್ತಿದ್ದು, ತಮಿಳುನಾಡು ರಾಜ್ಯಕ್ಕೆ ಕಾವೇರಿ ನೀರು ಹರಿಯುತ್ತಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿ ದಿನ 3,500 ಕ್ಯುಸೆಕ್ ನೀರು ರಿಲೀಸ್ ಮಾಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕಕ್ಕೆ ನಿರ್ದೇಶನ ನೀಡಿತ್ತು. ಒಟ್ಟಾರೆ 4.5 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲು ಆದೇಶಿಸಿತ್ತು, ಇದೀಗ ಮಳೆ ಹೆಚ್ಚಾದ ಕಾರಣ ನೀರು ತಮಿಳುನಾಡಿಗೆ ಹರಿಯುತ್ತಿದೆ.
ಒಟ್ನಲ್ಲಿ ಇದೀಗ ಕಾವೇರಿ ಕೊಳ್ಳದಲ್ಲಿ ಮತ್ತೆ ಮಂದಹಾಸ ಮೂಡಿಸಿದೆ ಭಾರಿ ಭರ್ಜರಿ ಸುರಿಯುತ್ತಿರುವ ಮಳೆ. ಮೈಸೂರು ಜಿಲ್ಲೆ, ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿಯ ಸಮೀಪ ಇರುವ ಕಬಿನಿ ಜಲಾಶಯ ಈಗ ಭರ್ತಿಯಾಗಿದೆ. ಈ ಡ್ಯಾಂ ಗರಿಷ್ಠ ಎತ್ತರ 84 ಅಡಿ, ಇದೀಗ ಇಲ್ಲಿನ ನೀರಿನ ಮಟ್ಟ 80 ಅಡಿ ತಲುಪಿದೆ. ಅಂದರೆ ಪೂರ್ಣ ಸಾಮರ್ಥ್ಯ ತಲುಪಲು ಅಲ್ಪ ಪ್ರಮಾಣದ ನೀರು ಮಾತ್ರ ಬೇಕು. ಮತ್ತೊಂದು ಕಡೆ ಕಬಿನಿ ಡ್ಯಾಂನಲ್ಲಿ 11,500 ಕ್ಯೂಸೆಕ್ ಒಳಹರಿವು ಇದ್ದು, ಮತ್ತಷ್ಟು ಖುಷಿ ಕೊಟ್ಟಿದೆ. ಹಾಗೇ ಕಾವೇರಿ ಕಣಿವೆಯಲ್ಲಿ ಇನ್ನಷ್ಟು ಪ್ರಮಾಣದ ಮಳೆ ಬೀಳುವ ಮುನ್ಸೂಚನೆ ಇರುವುದು ಬರ ಸಮಸ್ಯೆಯನ್ನು ದೂರ ಮಾಡಿದೆ.