Kaveri Water: ಕನ್ನಡಿಗರ ಆಕ್ರೋಶಕ್ಕೆ ಹೆದರಿದ ತಮಿಳುನಾಡು ಮುಖ್ಯಮಂತ್ರಿ ವಿಜಯ್?

bengaluru diaries | August 1, 2026 - 9:16 pm
ಕನ್ನಡಿಗರು ಶಾಂತಿ ಪ್ರಿಯರು, ಹೀಗಂತಾ ಕಾವೇರಿ ನೀರಿನ ತಂಟೆಗೆ ಬಂದರೆ ಕನ್ನಡಿಗರ ಶಕ್ತಿ ಇಡೀ ಜಗತ್ತಿಗೇ ಗೊತ್ತಾಗುತ್ತದೆ. ಅದರಲ್ಲೂ ಬರ ಪರಿಸ್ಥಿತಿ ಬಂದಾಗ ಬೇಕು ಬೇಕು ಅಂತಲೇ ಕಿರಿಕ್ ಮಾಡುವ ತಮಿಳುನಾಡು ಸರ್ಕಾರ & ಅಲ್ಲಿನ ರಾಜಕೀಯ ನಾಯಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನಡಿಗರು ಇದಕ್ಕೆಲ್ಲಾ ಉತ್ತರ ಕೊಡಲು ಆಗಸ್ಟ್ 13 ಗುರುವಾರ ಕರ್ನಾಟಕ ಬಂದ್ ಮಾಡಲು ಕರೆ ನೀಡಿದ್ದಾರೆ. ಇಂತಹ ಸ್ಥಿತಿಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಕೂಡ ಥಂಡಾ ಹೊಡೆದಿದ್ದು, ಕರ್ನಾಟಕಕ್ಕೆ ಬರಬೇಕಿದ್ದ ತಮಿಳುನಾಡು ಸಿಎಂ ವಿಜಯ್ ಈಗ ಎಸ್ಕೇಪ್ ಆಗಿದ್ದಾರಾ? ಎಂಬ ಚರ್ಚೆ ಜೋರಾಗಿದೆ. ಒಂದು ಕಡೆ ಕಾವೇರಿ ನೀರು ಕಿತ್ತುಕೊಳ್ಳಲು ತಮಿಳುನಾಡು ಪ್ರಯತ್ನ ಮಾಡುತ್ತಿರುವ ಸಮಯದಲ್ಲೇ, ಇನ್ನೊಂದು ಕಡೆ ತಮಿಳುನಾಡಿಗೆ ಕನ್ನಡಿಗರ ಬಗ್ಗೆ ಭಯ ಶುರುವಾದಂತೆ ಕಾಣುತ್ತಿದೆ.

ತಮಿಳುನಾಡು ರಾಜ್ಯಕ್ಕೆ ಕರ್ನಾಟಕ ಮುಂದಿನ 15 ದಿನಗಳ ಕಾಲ ಪ್ರತಿ ದಿನವೂ 3,500 ಕ್ಯುಸೆಕ್ ನೀರು ರಿಲೀಸ್ ಮಾಡಲು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿರ್ದೇಶನ ನೀಡಿದೆ. ಹೀಗೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಶಿಫಾರಸ್ಸಿಗೆ ಪ್ರಾಧಿಕಾರ ಯಥಾಸ್ಥಿತಿಯಲ್ಲಿ ಅನುಮೋದಿಸಿದೆ. ಒಟ್ಟಾರೆ 4.5 ಟಿಎಂಸಿ ನೀರನ್ನ ತಮಿಳುನಾಡಿಗೆ ಹರಿಸಲು ಆದೇಶಿಸಿದೆ. ಈ ಆದೇಶವು ಕನ್ನಡ ನಾಡಿನಲ್ಲಿ ತಲ್ಲಣ ಎಬ್ಬಿಸಿದ್ದು, ತಮಿಳುನಾಡು ಮಾಡುತ್ತಿರುವ ಕಿರಿಕ್‌ಗೆ ತಕ್ಕ ಉತ್ತರ ಕೊಡಲು ಕನ್ನಡಿಗರು ಸಜ್ಜಾಗಿದ್ದಾರೆ. ಹೀಗಿದ್ಧಾಗಲೇ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಇದೀಗ ಉಲ್ಟಾ ಹೊಡೆದಿದ್ದು, ಕರ್ನಾಟಕಕ್ಕೆ ಕೊಡಬೇಕಿದ್ದ ಭೇಟಿ ಮುಂದೂಡಿಕೆ ಮಾಡಿದ್ದು ಯಾಕೆ? ಎಂದು ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದಾರೆ.



ತಮಿಳುನಾಡು ಸಿಎಂ ಭೇಟಿ ರದ್ದು?
ಹೌದು, ಕಾವೇರಿ ನೀರಿನ ವಿವಾದದ ಜೋರಾದ ಬೆನ್ನಲ್ಲೇ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಆಗಸ್ಟ್ 3 ಸೋಮವಾರ ಬೆಂಗಳೂರಲ್ಲಿ ನಿಗದಿ ಆಗಿದ್ದ ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಜೊತೆಗಿನ ಸಭೆಯೇ ಮುಂದೂಡಿಕೆ ಆಗಿದೆ. ಒಂದು ಕಡೆ ಕರ್ನಾಟಕದಲ್ಲಿ ಉದ್ವಿಗ್ನ ವಾತಾವರಣ & ಪ್ರತಿಭಟನೆಗಳು ಆರಂಭವಾದ ಹಿನ್ನೆಲೆ ಇದೀಗ ಅತಿಥಿಗಳಿಗೆ ಮುಜುಗರ ತರುವುದು ಬೇಡ ಎನ್ನುವ ಕಾರಣಕ್ಕೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳುತ್ತಿದ್ದರೂ, ಬೇರೆಯದ್ದೇ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಕಾವೇರಿ ನೀರಿನ ವಿಚಾರದಲ್ಲಿ ಇದೇ ತಮಿಳುನಾಡು ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೆ ಕನ್ನಡ ನಾಡಿನಲ್ಲಿ ತೀವ್ರ ಆಕ್ರೋಶ ಮೊಳಗಿದ ಕಾರಣ ಖುದ್ದು ಸಿಎಂ ವಿಜಯ್ ಈ ನಿರ್ಧಾರ ಕೈಗೊಂಡಿದ್ದಾರಾ? ಎಂಬ ಚರ್ಚೆ ಜೋರಾಗಿದೆ. ಅಲ್ಲದೇ ಕನ್ನಡಿಗರ ಆಕ್ರೋಶಕ್ಕೆ ವಿಜಯ್ ಹೆದರಿದ್ದಾರಾ? ಎಂಬ ಚರ್ಚೆ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಜೋರಾಗಿದೆ.

ವಿಜಯ್ ಸಿನಿಮಾ ಪ್ರದರ್ಶನ ಬಂದ್
ಮತ್ತೊಂದು ಕಡೆ ವಿಜಯ್ ತಮಿಳುನಾಡಿನಲ್ಲೇ ಇದ್ದರೂ ಕನ್ನಡಿಗರು ಮಾತ್ರ ಇಲ್ಲಿಂದಲೇ ಬಿಸಿ ಮುಟ್ಟಿಸಿ ತಮ್ಮ ತಾಕತ್ ತೋರಿಸುತ್ತಿದ್ದಾರೆ. ಕಾವೇರಿ ಕಣಿವೆಯಲ್ಲಿ ಈಗ ಬರ ಪರಿಸ್ಥಿತಿ ಎದುರಾಗಿದ್ದರೂ ನೀರಿಗಾಗಿ ಕಿರಿಕ್ ತೆಗೆದಿರುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ರೋಶ ಹೊರ ಹಾಕುತ್ತಿದ್ದಾರೆ. ಹಾಗೇ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ ಕೊನೆಯ ಸಿನಿಮಾ ಜನನಾಯಗನ್ ಪ್ರದರ್ಶನಕ್ಕೆ ಈಗ ಬ್ರೇಕ್ ಹಾಕಲಾಗುತ್ತಿದೆ. ಕರ್ನಾಟಕ ರಾಜ್ಯದ ಹಲವು ಕಡೆ ಜನನಾಯಗನ್ ಸಿನಿಮಾ ಪ್ರದರ್ಶನ ಆಗುತ್ತಿರುವ ಥಿಯೇಟರ್‌ಗಳಿಗೆ ಬಿಸಿ ಮುಟ್ಟಿಸಲಾಗಿದೆ.

ಹಾಗೇ ಜನನಾಯಗನ್ ಸಿನಿಮಾ ಪ್ರದರ್ಶನ ಮಾಡುತ್ತಿದ್ದ ಹಲವು ಸಿನಿಮಾ ಮಂದಿರಗಳ ಮೇಲೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುನಿಸಿಕೊಂಡು, ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ಇದೀಗ ಜನನಾಯಗನ್ ಸಿನಿಮಾ ಕರ್ನಾಟಕದಲ್ಲಿ ಬಹುತೇಕ ನಿಂತು ಹೋದಂತೆ ಆಗಿದೆ. ಈ ಸಮಯದಲ್ಲೇ ವಿಜಯ್ ಕರ್ನಾಟಕ ಭೇಟಿಯು ಕೂಡ ಮುಂದೂಡಿಕೆ ಆಗಿರುವುದು ತಲ್ಲಣ ಎಬ್ಬಿಸಿದೆ. ಕಾವೇರಿ ನೀರಿನ ವಿಚಾರದಲ್ಲಿ ತಿಕ್ಕಾಟ ಇನ್ನಷ್ಟು ಹೆಚ್ಚಾಗುವ ಮುನ್ಸೂಚನೆ ಈಗ ಸಿಗುತ್ತಿದೆ.