ಕನ್ನಡಿಗರ ಕಣ ಕಣದಲ್ಲೂ ಕಾವೇರಿ ನೀರು ಬೆರೆತು ಹೋಗಿದ್ದು, ಕಾವೇರಿ ನೀರು ಇಲ್ಲದೇ ಹೋದರೆ ಸುಮಾರು 2 ಕೋಟಿಗೂ ಹೆಚ್ಚು ಕನ್ನಡಿಗರಿಗೆ ದೊಡ್ಡ ಗಂಡಾಂತರ ಎದುರಾಗಲಿದೆ. ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ವಾಸ ಮಾಡುವ ಕನ್ನಡಿಗರಿಗೆ ಇದೇ ಕಾವೇರಿ ತಾಯಿ ನೀರು ಆಧಾರ. ಕಾವೇರಿ ನದಿಯನ್ನು ಜೀವ ನದಿ ಎಂದು ಪೂಜೆ ಮಾಡುವ ರಾಜ್ಯ ನಮ್ಮದು, ಆದರೆ ಬರ ಪರಿಸ್ಥಿತಿ ಬಂದಾಗ ಪದೇ ಪದೇ ಕಾವೇರಿ ನೀರಿಗಾಗಿ ಕಿರಿಕಿರಿ ಮಾಡಿ ಗಲಾಟೆ ಮಾಡುವ ತಮಿಳುನಾಡು ಈ ಬಾರಿ ಕೂಡ ಕಿಚ್ಚು ಹೊತ್ತಿಸುವ ಕೆಲಸ ಮಾಡಿದೆ. ಇಂತಹ ಸಮಯದಲ್ಲೇ ಚಾಪೆ ಕೆಳಗೆ ತೂರಿದ ತಮಿಳುನಾಡಿಗೆ ಈಗ ಕರ್ನಾಟಕ ಸರ್ಕಾರ ಸರಿಯಾಗಿ ಬುದ್ಧಿ ಕಲಿಸಲು ಸಜ್ಜಾಗಿದೆ.
ಕರ್ನಾಟಕದಲ್ಲಿ ಎಲ್ಲಾ ಕಡೆ ಬರ ಆವರಿಸಿ, ಮಲೆನಾಡು ಪ್ರದೇಶದಲ್ಲಿ ಕೂಡ ಭತ್ತ & ಇತರ ಬೆಳೆಗಳಿಗೆ ನೀರು ಇಲ್ಲದೆ ಪರದಾಡುತ್ತಿದ್ದಾರೆ ಕೃಷಿಕರು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರ ಕೂಡ ಕಠಿಣ ಕ್ರಮಗಳನ್ನ ಕೈಗೊಂಡು ನೀರು ರಕ್ಷಣೆ ಮಾಡುವುದಕ್ಕೆ ಮುಂದಾಗಿದೆ. ಈಗಾಗಲೇ ಕಾವೇರಿ ಕೊಳ್ಳದಲ್ಲಿ ಕೃಷಿಗೆ ಕಾವೇರಿ ನದಿ ನೀರು ಬಳಕೆಯನ್ನ ಮಾಡದಂತೆ ಆದೇಶ ಕೂಡ ಹೊರಡಿಸಲಾಗಿದೆ. ಕನ್ನಡ ನಾಡಿಗೆ ಇಷ್ಟೆಲ್ಲಾ ಕಷ್ಟ ಎದುರಾಗಿರುವ ಸಮಯದಲ್ಲೇ ಮತ್ತೊಂದು ಕಡೆ ನಮ್ಮ ನೆರೆಯ ರಾಜ್ಯ ತಮಿಳುನಾಡು ಮಾತ್ರ ಕಿರಿಕ್ ತೆಗೆದು, ಕಾವೇರಿ ನೀರು ಬೇಕು ಎಂದು ಕಿಚ್ಚು ಹೊತ್ತಿಸಿದೆ. ಇದೇ ಸಮಯದಲ್ಲಿ ಕರ್ನಾಟಕ ಸರ್ಕಾರ ಕೂಡ ಖಡಕ್ ಕೌಂಟರ್ ಕೊಡಲು ಸಜ್ಜಾಗಿದೆ.
ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ನಿರ್ಧಾರ
ಅಷ್ಟಕ್ಕೂ ಇದೀಗ ಕಾವೇರಿ ನದಿಯ ನೀರಿನ ಹಂಚಿಕೆ ವಿಚಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ ನಿರ್ದೇಶನ ಪ್ರಶ್ನಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ. ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ ಆದೇಶ ವಿರುದ್ಧವಾಗಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಕಾನೂನು ಹೋರಾಟಕ್ಕೆ ಕರ್ನಾಟಕ ಸಜ್ಜು
ಪ್ರಮುಖವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತನಾಡಿದ ಸಿಎಂ, ಅಡ್ವೊಕೇಟ್ ಜನರಲ್ & ಕಾನೂನು ತಜ್ಞರು ಹಾಗೂ ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮೇಲ್ಮವಿಗೆ ಅಗತ್ಯ ಸಿದ್ಧತೆಗಳನ್ನ ಕೈಗೊಳ್ಳಲಾಗಿದೆ ಎಂದಿದ್ದಾರೆ. ಇದು ರಾಜ್ಯದ ರೈತರಿಗೆ ನೆಮ್ಮದಿ ತರುವ ಸುದ್ದಿ ಆಗಿದೆ. ಈ ಬಾರಿ ಮಳೆಯು ಕೃಪೆ ತೋರದಿರುವ ಕಾರಣ ರಾಜ್ಯದಲ್ಲಿ ಮಳೆ ಕೊರತೆ ಎದುರಾಗಿದೆ. ಈ ಹಿಂದೆ ತಮಿಳುನಾಡು ಮನವಿಯನ್ನ ಸಮಿತಿಯು 2 ಬಾರಿ ತಿರಸ್ಕರಿಸಿತ್ತು, ಆದರೆ ಈ ಬಾರಿ ನೀರು ಹರಿಸಲು ಸೂಚಿಸಿರುವುದು ಪ್ರಶ್ನಿಸಿ ಕಾನೂನು ಹೋರಾಟ ನಡೆಸಲಾಗುವುದು. ಬೆಂಗಳೂರಿಗೆ ಮರಳಿದ ನಂತರ, ರಾಜ್ಯದ ವಿರೋಧ ಪಕ್ಷದ ನಾಯಕರ ಜೊತೆಗೆ ಈ ಕುರಿತು ವಿಸ್ತೃತ ಚರ್ಚೆ ನಡೆಸಲಾಗುವುದು ಎಂದು ಸಿಎಂ ಮಾಹಿತಿ ನೀಡಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿಗೆ ಸತ್ಯ ದರ್ಶನ
ಹಾಗೇ ಮತ್ತೊಂದು ಆಪ್ಷನ್ ಕೂಡ ಇದ್ದು, ಖುದ್ದು ತಮಿಳುನಾಡು ಸಿಎಂ ಕರ್ನಾಟಕಕ್ಕೆ ಬಂದಾಗ ರಾಜ್ಯದ ವಾಸ್ತವ ಸ್ಥಿತಿ ತಿಳಿಸಲು ಇದೀಗ ಕರ್ನಾಟಕ ಸರ್ಕಾರ ಮುಂದಾಗಿದೆ. ತಮಿಳುನಾಡು ಮುಖ್ಯಮಂತ್ರಿ ತಮ್ಮ ಜೊತೆ ಚರ್ಚಿಸಲು ಇಂಗಿತ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ. ಈ ಕಾರಣಕ್ಕೆ ಶೀಘ್ರವೇ ನೆರೆ ರಾಜ್ಯ ತಮಿಳುನಾಡು ಸಿಎಂ ಕರ್ನಾಟಕಕ್ಕೆ ಬರುವ ನಿರೀಕ್ಷೆ ಇದೆ, ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಪರಿಸ್ಥಿತಿ ಖುದ್ದಾಗಿ ವೀಕ್ಷಿಸಲು ತಮಿಳುನಾಡು ಸಿಎಂಗೆ ಮನವಿ ಮಾಡಲಾಗಿದೆ. ಅದಕ್ಕಾಗಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲು ಕೂಡ ಕರ್ನಾಟಕ ಸರ್ಕಾರ ಮುಂದಾಗಿದೆ. ಇದರ ಬಗ್ಗೆ ಕೂಡ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಸ್ತಾಪ ಮಾಡಿದ್ದು, ತಮಿಳುನಾಡು ಮುಖ್ಯಮಂತ್ರಿ ಖುದ್ದಾಗಿ ಕರ್ನಾಟಕದ ಪರಿಸ್ಥಿತಿ ನೋಡಿದ ನಂತರ ಯಾವ ನಿರ್ಧಾರ ಕೈಗೊಳ್ಳುತ್ತಾರೆ? ಎಂಬುದನ್ನ ಕಾದು ನೋಡಬೇಕಿದೆ.