ಕಾವೇರಿ ನದಿ ನೀರಿನ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ ತಿಕ್ಕಾಟ ಶುರುವಾಗಿ, ನೋಡ ನೋಡುತ್ತಲೇ ಎರಡು ರಾಜ್ಯಗಳ ನಡುವೆ ಬೆಂಕಿ ಹೊತ್ತಿಕೊಂಡಿದೆ. ಇನ್ನೇನು ಹೋರಾಟ ಶುರುವಾಗಿ ಎರಡೂ ರಾಜ್ಯಗಳ ಗಡಿ ಭಾಗವು ಧಗಧಗ ಹೊತ್ತಿ ಉರಿಯಬಹುದು ಎಂಬ ಭೀತಿ ನಡುವೆ ಈ ತಿಕ್ಕಾಟಕ್ಕೆ ಬ್ರೇಕ್ ಹಾಕಿದ ಭರ್ಜರಿ ಮಳೆ. ಕರ್ನಾಟಕದ ಮಲೆನಾಡು ಭಾಗ & ಕೇರಳದ ವಯನಾಡು ಪ್ರದೇಶದಲ್ಲಿ ತೀವ್ರ ಮಳೆ ಬೀದ್ದು, ಈ ರೀತಿಯಾಗಿ ಭರ್ಜರಿ ಮಳೆ ಬೀಳುತ್ತಿರುವ ಪರಿಣಾಮ ಈಗಾಗಲೇ ಕಾವೇರಿ ಕಣಿವೆಯಲ್ಲಿ ಭಾರಿ ನೀರು ಹರಿದು ಬರ್ತಾ ಇದೆ. ಅದ್ರಲ್ಲೂ ತಮಿಳುನಾಡಿಗೆ ಹರಿಯಬೇಕಾಗಿದ್ದ ನೀರಿಗಿಂತ ಹೆಚ್ಚಿನ ಪ್ರಮಾಣದ ಕಾವೇರಿ ನೀರು ಈಗ ಹರಿದು ಹೋಗಿ ನೀರಿಗಾಗಿ ಕಿರಿಕ್ ಮಾಡ್ತಿದ್ದ ತಮಿಳುನಾಡು ಸೈಲೆಂಟ್ ಆಗಿದೆ.
ಕಾವೇರಿ ಕಣಿವೆಯಲ್ಲಿ ಭಾರಿ ಪ್ರಮಾಣ ಮಳೆ ಬೀಳುತ್ತಿರುವ ಕಾರಣ, ಕೆಆರ್‌ಎಸ್ ಸೇರಿ ವಿವಿಧ ಜಲಾಶಯಗಳ ಮಟ್ಟ ನಿರೀಕ್ಷೆಗೆ ಮೀರಿ ಏರಿಕೆ ಕಂಡಿದೆ. ಅದರಲ್ಲೂ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿ ದಿನ 3,500 ಕ್ಯುಸೆಕ್ ನೀರು ರಿಲೀಸ್ ಮಾಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ನಿರ್ದೇಶನ ನೀಡಿತ್ತು. ಈ ಮೂಲಕ ಒಟ್ಟು 4.5 ಟಿಎಂಸಿ ನೀರನ್ನ ತಮಿಳುನಾಡಿಗೆ ಹರಿಸಲು ಆದೇಶಿಸಿತ್ತು, ಆದ್ರೆ ಈಗ ಮುಂಗಾರು ಮಳೆ ಅಬ್ಬರ ಹೆಚ್ಚಾದ ಕಾರಣ ಕಾವೇರಿ ನೀರು ತಮಿಳುನಾಡಿಗೆ ಹರಿಯುತ್ತಿದೆ. ನೋಡ ನೋಡ್ತಾನೆ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟವು 100 ಅಡಿ ದಾಟಿ, ಇನ್ನೇನು 120 ಅಡಿ ಮುಟ್ಟುವ ಮುನ್ಸೂಚನೆ ನೀಡುತ್ತಿದೆ ಮಳೆರಾಯನ ಆರ್ಭಟ. ಅದರಲ್ಲೂ ಕಾವೇರಿ ಕಣಿವೆಯ ಪ್ರಮುಖ ಡ್ಯಾಂ ಕಬಿನಿ ಜಲಾಶಯದ ಮೂಲಕ ಈಗ ತಮಿಳುನಾಡಿನ ಕಡೆಗೆ ಭಾರಿ ನೀರು ಹರಿದಿದೆ.
ಕೆಆರ್‌ಎಸ್ ಡ್ಯಾಂಗೆ 32,048 ಕ್ಯೂಸೆಕ್ ನೀರು!
ಕಾವೇರಿ ಜಲಾನಯನ ಪ್ರದೇಶದಲ್ಲಿ ಈಗ ಸುರಿದ ನಿರಂತರ ಮಳೆ ಪರಿಣಾಮ ಕೃಷ್ಣರಾಜಸಾಗರ ಜಲಾಶಯವು ಭಾರಿ ಪ್ರಮಾಣದ ನೀರನ್ನು ಪಡೆಯುತ್ತಿದೆ. ಕೊಡಗು ಜಿಲ್ಲೆ ಮಡಿಕೇರಿ ಸೇರಿದಂತೆ ಮೇಲ್ದಂಡೆ ಪ್ರದೇಶಗಳಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆ ನೀರಿನ ಮಟ್ಟ ಕ್ಷಣಕ್ಷಣಕ್ಕೆ ಏರಿಕೆ ಆಗುತ್ತಿದೆ. ಕೆಆರ್‌ಎಸ್ ಮಹತ್ವದ 100 ಅಡಿ ಗಡಿ ದಾಟಿದ್ದು, ಹೀಗೆ ಕೆಆರ್‌ಎಸ್ 100 ಅಡಿ ದಾಟಿದ ಪ್ರತಿವರ್ಷವೂ ಕನ್ನಡಿಗರಿಗೆ ನೆಮ್ಮದಿ ನೀಡುವ ಸುದ್ದಿ ಸಿಕ್ಕಿತ್ತು. ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ, ಇದೀಗ ನೀರಿನ ಮಟ್ಟ 100.34 ಅಡಿ ತಲುಪಿದೆ. ಜಲಾಶಯಕ್ಕೆ 32,000 ಕ್ಯೂಸೆಕ್ ನೀರು ಹರಿದು ಬರ್ತಿದ್ದು, ಇನ್ನೇನು ಕೆಲವೇ ಕೆಲ ದಿನಗಳಲ್ಲಿ ಡ್ಯಾಂ ಸಂಪೂರ್ಣವಾಗಿ ತುಂಬುವ ನಿರೀಕ್ಷೆ ಇದೆ.
ಕಬಿನಿ ಡ್ಯಾಂನಿಂದ ಭಾರಿ ನೀರು ಹೊರಕ್ಕೆ
ತಮಿಳುನಾಡಿಗೆ ನೇರ ನೀರು ಹರಿಸಲು ಸಾಧ್ಯ ಇರುವುದು ಕಬಿನಿ ಜಲಾಶಯದಿಂದ, ಹೀಗಾಗಿ ನೇರವಾಗಿ ಕಬಿನಿ ಡ್ಯಾಂ ಮೂಲಕ ಈಗ ನೀರು ಹರಿದು ಹೋಗ್ತಿದೆ. ಕಾವೇರಿ ನದಿಯ ಪ್ರಮುಖ ಜಲಾಶಯ ಆಗಿರುವ ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಬಿನಿ ಡ್ಯಾಂಗೆ ಈಗ ಭಾರಿ ನೀರು ಹರಿದು ಬರ್ತಿದೆ. ಅದ್ರಲ್ಲೂ ಈ ಭಾಗದಲ್ಲಿ 31,746 ಕ್ಯುಸೆಕ್ ಒಳಹರಿವು ಇರುವ ಕಾರಣಕ್ಕೇ, ಸುಮಾರು 30,000 ಕ್ಯುಸೆಕ್ ನೀರು ಹರಿದು ಹೊರ ಹೋಗುತ್ತಿದೆ. ಇದು ತಮಿಳುನಾಡಿಗೆ ನೇರವಾಗಿ ಹರಿಯುವ ನೀರಾಗಿದ್ದು, ಕರ್ನಾಟಕ ಹರಿಸಬೇಕಿದ್ದ ಕಾವೇರಿ ನೀರಿನ ಪಾಲಿನಲ್ಲಿ ಈಗ ಭಾರಿ ಏರಿಕೆ ಕಂಡುಬಂದಿದೆ ಎಂದು ಮಾಹಿತಿ ನೀಡಲಾಗಿದೆ. ಹೀಗಿದ್ದಾಗ, ಮತ್ತೊಂದು ಕಡೆ ಕಾನೂನು ಹೋರಾಟದಲ್ಲಿ ಕರ್ನಾಟಕ ರಾಜ್ಯ ಜಯ ಗಳಿಸುವ ನಿರೀಕ್ಷೆಯು ಕೂಡ ಮೂಡಿದೆ.