ಕಾವೇರಿ ನೀರಿಗಾಗಿ ದೊಡ್ಡ ಮಟ್ಟದಲ್ಲಿ ಗಲಾಟೆ ನಡೆಯುತ್ತಿದ್ದು, ಕರ್ನಾಟಕ ಬಂದ್ ಮಾಡಿ ಆಕ್ರೋಶ ಹೊರ ಹಾಕಲು ಇದೀಗ ಕನ್ನಡಪರ ಸಂಘಟನೆಗಳು ಸಜ್ಜಾಗಿವೆ. ಬರ ಪರಿಸ್ಥಿತಿ ಇದ್ದಾಗಲೂ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಲು ಒತ್ತಡ ಹೇರುತ್ತಿರುವ ಹಿನ್ನೆಲೆ ಇದೀಗ ದೊಡ್ಡ ಮಟ್ಟದ ತಿಕ್ಕಾಟ ಶುರುವಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಎರಡೂ ರಾಜ್ಯಗಳ ನಡುವೆ ಮತ್ತೊಮ್ಮೆ ಕಿಚ್ಚು ಹೊತ್ತಿಕೊಳ್ಳುವ ಭೀತಿ ಆವರಿಸಿದೆ. ಈ ಸಮಯದಲ್ಲೇ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದೊಡ್ಡ ಸವಾಲು ಎದುರಾಗಿದ್ದು, ಹೀಗೆ ಪರಿಸ್ಥಿತಿ ಸೂಕ್ಷ್ಮವಾಗಿರುವ ಸಮಯದಲ್ಲೇ ಗುರು ಎಸ್.ಎಂ. ಕೃಷ್ಣ ಹಾದಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್?
ಅಂದಹಾಗೆ ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ನಡುಕ ಹುಟ್ಟಿಸಿದೆ, ಇನ್ನು ದಕ್ಷಿಣ ಕರ್ನಾಟಕ ಭಾಗದ ಕುಡಿಯುವ ನೀರಿನ ಮೂಲ ಕಾವೇರಿ ನದಿ ಬತ್ತಿ ಹೋಗುತ್ತಿದೆ. ಕಾವೇರಿ ಕೊಳ್ಳದಲ್ಲಿ ಮಳೆ ಇಲ್ಲದೆಯೇ ಭಾರಿ ಸಮಸ್ಯೆ ಉಂಟಾಗಿರುವ ಕಾರಣಕ್ಕೆ ರೈತರು ಬೆಳೆ ಬೆಳೆಯಲು ಆಗದೆ ಒದ್ದಾಡುತ್ತಿದ್ದಾರೆ. ಇನ್ನು ಬೆಂಗಳೂರು ನಗರದ ಜನರಿಗೆ ಕುಡಿಯುವ ನೀರು ಸಿಗುತ್ತಾ? ಕೆಆರ್‌ಎಸ್ ಡೆಡ್ ಸ್ಟೋರೇಜ್ ತಲುಪುತ್ತಾ? ಎಂಬ ಭಯ ಮೂಡಿದೆ. ಈಗಾಗಲೇ ಕಾವೇರಿ ನದಿಯ ನೀರು ನಂಬಿ ಬೆಳೆ ಹಾಕಿದ್ದ ಮಂಡ್ಯ & ಮೈಸೂರು ಭಾಗದ ರೈತರಿಗೆ ಬರದ ಛಾಯೆ ಎದುರಾಗಿ ನಲುಗಿ ಹೋಗುವಂತೆ ಮಾಡಿದೆ.
ಅನ್ಯಾಯ.. ಅನ್ಯಾಯ.. ಘೋರ ಅನ್ಯಾಯ...
ಇಷ್ಟೆಲ್ಲಾ ಸಮಸ್ಯೆ ಇದ್ದರೂ, ಮತ್ತೊಮ್ಮೆ ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಹಿನ್ನಡೆ ಆಗಿದ್ದು ಆಕ್ರೋಶ ಭುಗಿಲೆದ್ದಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿ ದಿನವೂ 3,500 ಕ್ಯುಸೆಕ್ ನೀರು ರಿಲೀಸ್ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಈ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಶಿಫಾರಸನ್ನು ಪ್ರಾಧಿಕಾರ ಯಥಾಸ್ಥಿತಿಯಲ್ಲಿ ಅನುಮೋದಿಸಿ, ಒಟ್ಟಾರೆ 4.5 ಟಿಎಂಸಿ ನೀರನ್ನ ತಮಿಳುನಾಡಿಗೆ ಹರಿಸುವಂತೆ ಆದೇಶಿಸಿದೆ. ಈ ಆದೇಶಕ್ಕೆ ಸೆಡ್ಡು ಹೊಡೆದು ನೀರು ಬಿಡಲ್ಲ ಎಂಬ ನಿರ್ಣಯಕ್ಕೆ ಡಿ.ಕೆ. ಶಿವಕುಮಾರ್ ಅವರ ಸರ್ಕಾರ ಬಂದಿದೆ. ಹಾಗಾದ್ರೆ ಎಸ್.ಎಂ. ಕೃಷ್ಣ ಹಾದಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್?
ಎಸ್.ಎಂ. ಕೃಷ್ಣ ಅವಧಿಯಲ್ಲೂ ಹೋರಾಟ
ಅಷ್ಟಕ್ಕೂ 2002-03ರ ಅವಧಿಯಲ್ಲಿ ಕೂಡ ಕರ್ನಾಟಕ ರಾಜ್ಯ ಭೀಕರ ಬರ ಪರಿಸ್ಥಿತಿ ಎದುರಿಸಿತ್ತು, ಹೀಗೆ ಬರ ಸ್ಥಿತಿ ಎದುರಾದ ಸಮಯದಲ್ಲಿ ಕಾವೇರಿ ನದಿಯಲ್ಲಿ ತೀವ್ರ ನೀರಿನ ಕೊರತೆ ಕೂಡ ಉಂಟಾಗಿ ಕನ್ನಡಿಗರು ನಲುಗಿ ಹೋಗಿದ್ದರು. ಆ ಸಮಯದಲ್ಲೂ, ಅಂದ್ರೆ 2002-03 ರಲ್ಲಿ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರು ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದ್ದಾಗ, ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ರೈತರ ಪರ ನಿಲ್ಲುವ ಸಂದೇಶ ನೀಡುವ ಉದ್ದೇಶದಿಂದ ಎಸ್.ಎಂ. ಕೃಷ್ಣ ಅವರು ಕನ್ನಡಿಗರ ರಾಜಧಾನಿ ಬೆಂಗಳೂರಿನಿಂದ ಮಂಡ್ಯ ತನಕ ಪಾದಯಾತ್ರೆ ನಡೆಸಿದ್ದರು. ಆ ಹೋರಾಟ ರಾಜ್ಯ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿ ಇಂದಿಗೂ ಜನರ ಮನಸ್ಸಿನಲ್ಲಿ ಇದೆ. ಹೀಗಿದ್ದಾಗ ಡಿ.ಕೆ. ಶಿವಕುಮಾರ್ ಅವರು ಕೂಡ ಅದೇ ರೀತಿ ಮಾಡುತ್ತಾರಾ? ಎಂಬ ಪ್ರಶ್ನೆ ಮೂಡಿದೆ.
ಆದರೆ ನ್ಯಾಯಾಂಗದ ನಿರ್ದೇಶನ ನಿರ್ಲಕ್ಷಿಸುವುದು ಸರ್ಕಾರಕ್ಕೆ ಕಾನೂನು ತೊಡಕು ಉಂಟುಮಾಡುವ ಸಾಧ್ಯತೆಯ ಜೊತೆಗೆ, ಒತ್ತಡ ಹೆಚ್ಚಿಸುವ ಸಾಧ್ಯತೆ ಇದೆ. ಮತ್ತೊಂದು ಕಡೆ ರಾಜಕೀಯ ಒತ್ತಡ, ಜನಾಭಿಪ್ರಾಯ & ಕಾನೂನು ಹೊಣೆಗಾರಿಕೆ ಎಂಬ 3 ಪ್ರಮುಖ ಅಂಶಗಳ ಮಧ್ಯೆ ಸರ್ಕಾರವು ಸಮತೋಲನ ಕಾಯ್ದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ಇದೀಗ ಕರ್ನಾಟಕ ಸರ್ಕಾರಕ್ಕೆ ಎದುರಾಗಿದೆ. ಇಡೀ ದೇಶವೇ ಕಾವೇರಿ ನದಿ ನೀರಿನ ವಿಚಾರದಲ್ಲಿ ಕನ್ನಡ ನಾಡಿನ ಕಡೆಗೆ ತನ್ನ ದೃಷ್ಟಿ ನೆಟ್ಟಿದ್ದು ಮುಂದೆ ಏನಾಗುತ್ತೆ ಎಂಬುದನ್ನ ಸ್ವಲ್ಪ ದಿನಗಳ ಕಾಲ ಕಾದು ನೋಡಬೇಕು.