ಕರ್ನಾಟಕಕ್ಕೆ ಮತ್ತೊಮ್ಮೆ ಆಘಾತ ಎದುರಾಗಿದ್ದು, ಮುಂಗಾರು ಮಳೆ ಕೈಕೊಟ್ಟು ಈಗ ಕರ್ನಾಟಕದಲ್ಲಿ ಜನರು ಹನಿ ನೀರಿಗೂ ಪರದಾಡುವ ಸಮಯದಲ್ಲೂ ಕೂಡ ಕಾವೇರಿ ನೀರು ಬಿಡಲೇಬೇಕಾದ ಪರಿಸ್ಥಿತಿ ಬಂದು ಬಿಟ್ಟಿದೆ. ಈ ಕಾರಣಕ್ಕೆ ಆಕ್ರೋಶ ಹೊರಹಾಕಿರುವ ಕನ್ನಡಿಗರು ದೊಡ್ಡ ಮಟ್ಟದಲ್ಲಿ ಹೋರಾಟ ಆರಂಭಿಸಿದ್ದಾರೆ, ಇಲ್ಲಿ ಕುಡಿಯುವುದಕ್ಕೇ ನೀರು ಇಲ್ಲ ಇನ್ನು ತಮಿಳುನಾಡಿಗೆ ಬೆಳೆ ಬೆಳೆಯಲು ನೀರು ಬೇಕಾ? ಎಂದು ಪ್ರಶ್ನೆ ಮಾಡುತ್ತಾ ಪ್ರತಿಭಟನೆ ಶುರು ಮಾಡಿದ್ದಾರೆ. ಬೆಂಗಳೂರು ಟು ಮೈಸೂರು ಮಾತ್ರವಲ್ಲ, ಕರ್ನಾಟಕದ ಬಹುತೇಕ ಕಡೆಗಳಲ್ಲಿ ಇದೀಗ ಕಾವೇರಿ ನೀರಿನ ವಿಚಾರವಾಗಿ ದೊಡ್ಡ ಹೋರಾಟ ಶುರುವಾಗಿದೆ. ಹಾಗಾದ್ರೆ ಈ ಹೋರಾಟದ ಕಿಚ್ಚು, ಕನ್ನಡಿಗರ ಆಕ್ರೋಶ ತಮಿಳುನಾಡಿಗೆ ತಟ್ಟಲಿದೆಯಾ? ಬನ್ನಿ ತಿಳಿಯೋಣ.
ನೀರು.. ನೀರು.. ನೀರು.. ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಬರ ಆವರಿಸಿರುವ ಪರಿಣಾಮ ದೊಡ್ಡ ಮಟ್ಟದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಬಹುತೇಕ ಮುಂಗಾರು ಮಳೆ ಕೈಕೊಟ್ಟು ಹೋಗಿರುವ ಕಾರಣಕ್ಕೆ ಇದೀಗ ದೊಡ್ಡ ಸಮಸ್ಯೆ ಉಂಟಾಗಿ, ರೈತರು ತಲೆಮೇಲೆ ಕೈ ಹೊತ್ತು ಕೂರುವ ವಾತಾವರಣ ರಾಜ್ಯದಲ್ಲಿ ಎದುರಾಗಿದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ, ಮತ್ತೊಮ್ಮೆ ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಹಿನ್ನಡೆ ಆಗಿದ್ದು ಆಕ್ರೋಶ ಭುಗಿಲೆದ್ದಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿ ದಿನವೂ 3,500 ಕ್ಯುಸೆಕ್ ನೀರು ರಿಲೀಸ್ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಈ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಶಿಫಾರಸನ್ನು ಪ್ರಾಧಿಕಾರ ಯಥಾಸ್ಥಿತಿಯಲ್ಲಿ ಅನುಮೋದಿಸಿ, ಒಟ್ಟಾರೆ 4.5 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವಂತೆ ಆದೇಶಿಸಿದೆ.
ಕನ್ನಡಿಗರಿಗೆ ಕಾವೇರಿ ನೀರಿನ ಆತಂಕ
ಅಂದಹಾಗೆ ತಮಿಳುನಾಡು ರಾಜ್ಯದ ಕಿತಾಪತಿ ಮುಂದುವರಿದಿದೆ, ಆ ಕಡೆ ಮೇಕೆದಾಟು ಡ್ಯಾಂ ನಿರ್ಮಾಣಕ್ಕೂ ಬಿಡದೇ & ಇನ್ನೊಂದು ಕಡೆ ನಮ್ಮ ಪಾಲಿನ ಕಾವೇರಿ ನೀರಿಗೂ ಕಣ್ಣು ಹಾಕುತ್ತಾ ಎಗರಾಡುತ್ತಿರುವ ನೆರೆ ರಾಜ್ಯ ತಮಿಳುನಾಡು ಮೊಂಡು ಹಠ ಮುಂದುವರಿಸಿದೆ. ಹೀಗಿದ್ದಾಗ 2026 ರಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದ ಹಿನ್ನೆಲೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿದಿದೆ. ಹಲವೆಡೆ ಬರದ ಪರಿಸ್ಥಿತಿ ತಲೆದೋರಿ ಕುಡಿಯುವ ನೀರು & ಕೃಷಿ ಚಟುವಟಿಕೆಗಳ ಬಗ್ಗೆ ಆತಂಕ ಹೆಚ್ಚಾಗಿದೆ. ಆದರೆ ಇದ್ಯಾವುದನ್ನೂ ಅರ್ಥ ಮಾಡಿಕೊಳ್ಳದವರ ರೀತಿ ಪ್ರಾಧಿಕಾರ ಆದೇಶ ನೀಡಿಬಿಟ್ಟಿದೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ ಕನ್ನಡಿಗರು.
ಕರ್ನಾಟಕ ಸರ್ಕಾರ ಫುಲ್ ಅಲರ್ಟ್
ಕಾವೇರಿ ನೀರಿನ ವಿಚಾರದಲ್ಲಿ ತಿಕ್ಕಾಟ ಜೋರಾಗುತ್ತಿದ್ದಂತೆ ಕರ್ನಾಟಕ ಸರ್ಕಾರ ಫುಲ್ ಅಲರ್ಟ್ ಆಗಿದ್ದು, ಈಗ ಮಹತ್ವದ ಹೆಜ್ಜೆ ಇಟ್ಟಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನ ಹೊರಬಿದ್ದ ತಕ್ಷಣವೇ ಕರ್ನಾಟಕ ಸರ್ಕಾರ ತುರ್ತು ಸಭೆ ನಡೆಸಿ, ಈಗಿನ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ರಿಲೀಸ್ ಮಾಡದೇ ಇರಲು ತಾತ್ಕಾಲಿಕವಾಗಿ ನಿರ್ಧಾರ ಕೈಗೊಂಡಿದೆ. ಈ ವಿಚಾರವನ್ನ ಎಲ್ಲ ರಾಜಕೀಯ ಪಕ್ಷಗಳ ಜೊತೆ ಚರ್ಚಿಸಿ ಒಗ್ಗಟ್ಟಿನ ನಿಲುವು ರೂಪಿಸಲು ಆಗಸ್ಟ್ 2 ಭಾನುವಾರ ಸರ್ವಪಕ್ಷ ಸಭೆಯನ್ನ ಇದೀಗ ಕರೆಯಲಾಗಿದೆ. ಪಕ್ಷಾತೀತವಾಗಿ ಒಗ್ಗಟ್ಟಿನ ಮಂತ್ರ ಜಪಿಸಲು ಕೂಡ ಮುಂದಾಗಿದ್ದಾರೆ ಕರ್ನಾಟಕದ ರಾಜಕಾರಣಿಗಳು.
ಸಭೆಯ ನಂತರ ಮುಂದಿನ ಕಾನೂನು ಹಾಗೂ ಆಡಳಿತಾತ್ಮಕ ಕ್ರಮಗಳ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಕಾವೇರಿ ನೀರಿನ್ನೇ ನಂಬಿ ಬದುಕುತ್ತಿರುವ ಮಂಡ್ಯ & ಮೈಸೂರು ಸೇರಿ ಹಳೇ ಮೈಸೂರು ಭಾಗದ ಜನರಲ್ಲಿ ಆತಂಕದ ವಾತಾವರಣ ಮೂಡಿದೆ. ಕರ್ನಾಟಕ ಸರ್ಕಾರವು ಕೂಡ ಇದೀಗ ಮುಂದಿನ ಕಾನೂನು ಹೋರಾಟಕ್ಕೆ ಸಕಲ ಸಿದ್ಧತೆಯನ್ನ ಮಾಡಿಕೊಳ್ಳುತ್ತಿದೆ. ತಮಿಳುನಾಡು ರಾಜಕಾರಣಿಗಳು ಮತ್ತೊಮ್ಮೆ ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜಕೀಯ ಮುಂದುವರಿಸಿದ್ದು, ಕಿರಿಕ್ ಜೋರಾಗುತ್ತಿದೆ. ಇದೇ ಸಮಯದಲ್ಲೇ ಮೇಕೆದಾಟು ಯೋಜನೆ ಮತ್ತೊಮ್ಮೆ ಚರ್ಚೆಯ ಕೇಂದ್ರಬಿಂದು ಆಗಿದ್ದು, ಮೇಕೆದಾಟು ಡ್ಯಾಂ ನಿರ್ಮಿಸೋಕೆ ಒತ್ತಾಯವನ್ನು ಮಾಡುತ್ತಿದ್ದಾರೆ ಕನ್ನಡಿಗರು.