ಭಾರತದ ಯುವ ಸಮೂಹ ತೀವ್ರ ಆಕ್ರೋಶಗೊಂಡು ದೊಡ್ಡ ಹೋರಾಟ ಮಾಡಿದ್ದು, ನೀಟ್ ಪ್ರಶ್ನೆ ಪತ್ರಿಕೆಯ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡಿದ್ದಾರೆ. ಇಂತಹ ಸಮಯದಲ್ಲೇ ಕರ್ನಾಟಕ ರಾಜ್ಯದಲ್ಲಿ ಕೂಡ ತಲ್ಲಣ ಎಬ್ಬಿಸುವ ಘಟನೆ ನಡೆದಿದ್ದು, ಭಾರಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿತ್ತು ಇದು. ಕರ್ನಾಟಕದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ, ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗ ಗಂಭೀರ ಹೆಜ್ಜೆಯ ಇರಿಸಿದೆ. ನೇಮಕಾತಿ ಬಗ್ಗೆ ಸಾರ್ವಜನಿಕವಾಗಿ ಮತ್ತು ಸುದ್ದಿ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ಗಂಭೀರ ಆರೋಪಗಳು & ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಹಿನ್ನೆಲೆ, ಆಯೋಗ ಜುಲೈ 26, 2026 ಭಾನುವಾರ ಅಂದ್ರೆ ಇವತ್ತು ತುರ್ತು ಸಭೆಯನ್ನು ನಡೆಸಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಅಂದಹಾಗೆ ಸೋಷಿಯಲ್ ಮೀಡಿಯಾ & ಸುದ್ದಿ ವಾಹಿನಿಗಳಲ್ಲಿ ಕೆಪಿಎಸ್‌ಸಿ ನೇಮಕಾತಿ ಬಗ್ಗೆ ಸತತವಾಗಿ ಕೇಳಿಬಂದ ಟೀಕೆಗಳನ್ನು ಜವಾಬ್ದಾರಿಯುತವಾಗಿ ಪರಿಗಣಿಸಿರುವ ಕೆಪಿಎಸ್‌ಸಿ, ಸಾರ್ವಜನಿಕ ವಲಯದಲ್ಲಿ ಈಗ ಪಾರದರ್ಶಕತೆ ಮತ್ತು ನಂಬಿಕೆ ಮರುಸ್ಥಾಪಿಸುವ ನಿಟ್ಟಿನಲ್ಲಿ ಕೆಲ ಪ್ರಮುಖ ಕ್ರಮವನ್ನ ಕೈಗೊಂಡಿದೆ. ಜುಲೈ 24, 2026 ಶುಕ್ರವಾರ ವಿಧಾನಸೌಧ ಪೊಲೀಸ್ ಠಾಣೆಗೆ ಸಲ್ಲಿಕೆ ಆಗಿದ್ದ ದೂರು, ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗಳು ಹಾಗೂ ಜುಲೈ 25ರ ಪ್ರಾಥಮಿಕ ಮಾಹಿತಿ ವರದಿಯನ್ನ ಆಯೋಗವು ಅತ್ಯಂತ ಗಂಭೀರವಾಗಿ ಪರಿಶೀಲಿಸಿದೆ. ಇದೇ ಕಾರಣಕ್ಕೆ ಈಗ ದೂರಿನಲ್ಲಿರುವ ಅಂಶಗಳು ಅತಿ ಸೂಕ್ಷ್ಮ & ಗಂಭೀರ ಸ್ವರೂಪದ್ದಾಗಿದೆ ಎಂಬುದನ್ನು ಅರಿತುಕೊಂಡು ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಹಾಗಾದ್ರೆ, ಇದೀಗ ಬಂದಿರುವ ಮಹತ್ವದ ಮಾಹಿತಿ ಏನು? ಬನ್ನಿ ಈ ಬಗ್ಗೆ ತಿಳಿಯೋಣ.
ವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ?
ನೀಟ್ ವಿಚಾರವಾಗಿ ಕಾಂಗ್ರೆಸ್ ದೊಡ್ಡ ಹೋರಾಟದಲ್ಲಿ ಭಾಗಿಯಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಖುದ್ದು ಬೆಂಬಲ ನೀಡಿತ್ತು. ಆದರೆ ಈಗ ಖುದ್ದು ಕಾಂಗ್ರೆಸ್ ಆಡಳಿತ ಇರುವ ರಾಜ್ಯದಲ್ಲೇ ಈಗ ಗಂಭೀರ ಆರೋಪ ಕೇಳಿ ಬಂದಿದೆ. ಹೀಗಾಗಿ ಪ್ರಕರಣದ ಸತ್ಯಾಸತ್ಯತೆಯ ತಿಳಿಯಲು, ಆಯೋಗದ ಹಿರಿಯ ಸದಸ್ಯರ ಅಧ್ಯಕ್ಷತೆಯಲ್ಲಿ ವಿಶೇಷ ಆಂತರಿಕ ವಿಚಾರಣಾ ಉಪ ಸಮಿತಿಯನ್ನ ರಚಿಸಲಾಗಿದೆ. ಪಶು ವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯ ಪ್ರತಿ ಹಂತದ ಪ್ರಕ್ರಿಯೆ ಹಾಗೂ ದಾಖಲೆಗಳನ್ನು ಮುಂದಿನ ಒಂದು ವಾರದೊಳಗೆ ಕೂಲಂಕಷವಾಗಿ ಪರಿಶೀಲಿಸಿ, ಕೂಡಲೇ ವಾಸ್ತವಾಂಶದ ವರದಿಯನ್ನ ಆಯೋಗಕ್ಕೆ ಸಲ್ಲಿಸುವಂತೆ ಸದರಿ ಉಪ ಸಮಿತಿಗೆ ಸೂಚಿಸಲಾಗಿದೆ. ಹೀಗಾಗಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಆರೋಪ ಕೇಳಿಬಂದ ಕಾರಣಕ್ಕೆ ಇದೀಗ ಅಂತಿಮ ಆಯ್ಕೆಪಟ್ಟಿ ತಡೆಹಿಡಿದಿದೆ ಕೆಪಿಎಸ್‌ಸಿ.
ಪಶು ವೈದ್ಯಾಧಿಕಾರಿಗಳ ಆಯ್ಕೆಗೆ ಬ್ರೇಕ್
ಮತ್ತೊಂದು ಕಡೆ ಉಪ ಸಮಿತಿಯ ವಿಚಾರಣೆಗೆ ಅಗತ್ಯವಿರುವ ಎಲ್ಲಾ ದಾಖಲೆ & ಮಾಹಿತಿ ಒದಗಿಸಲು ಆಯೋಗದ ಕಾರ್ಯದರ್ಶಿ ಅವರನ್ನು & ಕಾನೂನುಬದ್ಧ ಮಾರ್ಗದರ್ಶನಕ್ಕಾಗಿ ಕಾನೂನು ಕೋಶದ ಮುಖ್ಯಸ್ಥರನ್ನು ಇದೀಗ ಸಮನ್ವಯಾಧಿಕಾರಿ ಆಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಹಾಗೇ ಇದರ ಜೊತೆಗೇ ಆಯೋಗದ ಆಂತರಿಕ ವಿಚಾರಣಾ ಉಪ ಸಮಿತಿ ಸಂಪೂರ್ಣ ತನಿಖೆಯ ನಡೆಸಿ ವರದಿ ಸಲ್ಲಿಸುವವರೆಗೆ, ಮುಂಜಾಗ್ರತಾ ಕ್ರಮವಾಗಿ ಜುಲೈ 17, 2026 ಶುಕ್ರವಾರ ಹೊರಡಿಸಿದ್ದ ಪಶು ವೈದ್ಯಾಧಿಕಾರಿಗಳ ಅಂತಿಮ ಆಯ್ಕೆಪಟ್ಟಿ ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲಾಗಿದೆ. ಹಾಗೇ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಆಯೋಗ ಬದ್ಧ, ಆಂತರಿಕ ತನಿಖೆ ವರದಿ ಬಂದ ನಂತರ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗದ ಪ್ರಕಟಣೆ ತಿಳಿಸಿದೆ. ಈ ಮೂಲಕ ಕರ್ನಾಟಕ ರಾಜ್ಯದ ಪಶು ವೈದ್ಯಾಧಿಕಾರಿಗಳ ನೇಮಕ ವಿಚಾರ ದೊಡ್ಡ ಸದ್ದು ಮಾಡ್ತಿದೆ.