KPSC Recruitment: ನೀಟ್ ಅಲ್ಲ ಕರ್ನಾಟಕದಲ್ಲೂ ಸಾಲು ಸಾಲು ಪರೀಕ್ಷಾ ಅಕ್ರಮ ಬಯಲು?

bengaluru diaries | July 28, 2026 - 6:27 pm
ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆದು ಹಲವು ವರ್ಷಗಳೇ ಕಳೆದು ಹೋಗಿದ್ದು, ಈ ಕಾರಣಕ್ಕೆ ಪದೇ ಪದೇ ಆಕಾಂಕ್ಷಿಗಳು ನೇಮಕಾತಿ ಮಾಡಿಕೊಳ್ಳಿ ಎಂದು ಆಗ್ರಹ ಮಾಡುತ್ತಿದ್ದಾರೆ. ಅದರಲ್ಲೂ, ಕೇಂದ್ರ ಸರ್ಕಾರದ ವಿರುದ್ಧ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ದೊಡ್ಡ ಪ್ರತಿಭಟನೆ ನಡೆದ ಬಳಿಕ ಈಗ ಕರ್ನಾಟಕದಲ್ಲೂ ತಲ್ಲಣ ಎದ್ದಿದೆ. ನೀಟ್ ವಿಚಾರಕ್ಕೆ ಕಾಂಗ್ರೆಸ್ ಪಕ್ಷವೂ ಹೋರಾಟದಲ್ಲಿ ಭಾಗಿಯಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಖುದ್ದು ಬೆಂಬಲ ನೀಡಿತ್ತು. ಆದರೆ ಖುದ್ದು ಕಾಂಗ್ರೆಸ್ ಆಡಳಿತ ಇರುವ ರಾಜ್ಯದಲ್ಲೇ ಈಗ ಗಂಭೀರ ಆರೋಪ ಕೇಳಿ ಬರುತ್ತಿದೆ. ಇತ್ತೀಚೆಗಷ್ಟೇ ಪಶು ವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮಾಡಲಾಗಿತ್ತು, ಇದು ಮಾಸುವ ಮೊದಲೇ ಪಿಡಿಒ ಪರೀಕ್ಷೆಯಲ್ಲೂ ಅಕ್ರಮ?

ಹೌದು, ಕರ್ನಾಟಕ ಲೋಕಸೇವಾ ಆಯೋಗ ಅಂದ್ರೆ ನಮ್ಮ ರಾಜ್ಯದ ಕೆಪಿಎಸ್‌ಸಿ ವಿರುದ್ಧ ಸಾಲು ಸಾಲು ಆರೋಪ ಕೇಳಿಬರುತ್ತಲೇ ಇದೆ. ಕೆಲವು ದಿನಗಳ ಹಿಂದಷ್ಟೇ ಪಶು ವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ, ಪಶು ವೈದ್ಯಾಧಿಕಾರಿಗಳ ನೇಮಕಾತಿಯನ್ನೇ ತಡೆಹಿಡಿದಿತ್ತು. ಇಷ್ಟೆಲ್ಲವೂ ನಡೆಯುವಾಗಲೇ ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಇದೀಗ ಮತ್ತೊಮ್ಮೆ ವಿವಾದದ ಕೇಂದ್ರಬಿಂದು ಆಗಿದೆ. ಅಂದಹಾಗೆ ಪಿಡಿಒ ಪರೀಕ್ಷೆ ವಿಚಾರ ಕೂಡ ಅಕ್ರಮಕ್ಕೆ ತುತ್ತಾಗಿದೆ ಎಂಬ ಆರೋಪ ಇದೀಗ ಕೇಳಿಬಂದಿದೆ. ಈ ಆರೋಪದ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಓದಿ.



ಪಿಡಿಒ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ?
ಅಂದಹಾಗೆ 2024 ಡಿಸೆಂಬರ್ ತಿಂಗಳಲ್ಲಿ ಪಿಡಿಒ ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು, ಇದರ ಅಂತಿಮ ಆಯ್ಕೆ ಪಟ್ಟಿಯ  ಇತ್ತೀಚೆಗೆ ಅಂದರೆ 2026ರ ಜುಲೈ 18ಕ್ಕೆ ಬಿಡುಗಡೆ ಮಾಡಲಾಗಿದೆ. ಆದ್ರೆ ಅಂತಿಮ ಪಟ್ಟಿ ಹೊರಗೆ ಬರುತ್ತಿದ್ದಂತೆಯೇ ಪರೀಕ್ಷಾರ್ಥಿಗಳಲ್ಲಿ ತೀವ್ರ ಅನುಮಾನ & ಆಕ್ರೋಶ ಭುಗಿಲೆದ್ದಿದೆ. ಅದರಲ್ಲೂ ಪಿಡಿಒ ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆ ಲೀಕ್ ಮಾಡಲಾಗಿತ್ತು ಎಂದು ಅಭ್ಯರ್ಥಿಗಳು ದೂರು ಹೇಳಿದ್ದು, ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳಿಗೆ ನಾನಾ ಆಮಿಷ ಒಡ್ಡಿ ನೇಮಕಾತಿಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ಗಂಭೀರ ಆರೋಪ ಇದೀಗ ಕೇಳಿಬರ್ತಾ ಇದೆ. ಅಲ್ಲದೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ಪರೀಕ್ಷೆಗಳಲ್ಲಿ ಅತ್ಯಂತ ಕಡಿಮೆ ಅಂಕ ಪಡೆದ ಅನೇಕರು ಕೆಪಿಎಸ್‌ಸಿ ನಡೆಸಿದ ಈ ಪರೀಕ್ಷೆಯಲ್ಲಿ ಮಾತ್ರ ಟಾಪ್ ರ‍್ಯಾಂಕಿಂಗ್ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಕಾರಣಕ್ಕೆ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ತನಿಖೆಗೆ ಒತ್ತಾಯ ಕೇಳಿಬರುತ್ತಿದೆ.

ಪಶು ವೈದ್ಯಾಧಿಕಾರಿಗಳ ಆಯ್ಕೆಗೂ ಬ್ರೇಕ್
ಈಗಾಗಲೇ ಪಶು ವೈದ್ಯಾಧಿಕಾರಿಗಳ ನೇಮಕಾತಿ ವಿಚಾರದಲ್ಲಿ ತನಿಖೆಯನ್ನ ಕೂಡ ಆರಂಭ ಮಾಡಲಾಗುತ್ತಿದೆ. ಕೆಪಿಎಸ್‌ಸಿ ಆಂತರಿಕ ವಿಚಾರಣಾ ಉಪಸಮಿತಿ ಸಂಪೂರ್ಣ ತನಿಖೆ ನಡೆಸಿ ವರದಿ ಸಲ್ಲಿಸುವವರೆಗೂ, ಮುಂಜಾಗ್ರತಾ ಕ್ರಮವಾಗಿ ಜುಲೈ 17, 2026 ಶುಕ್ರವಾರ ಹೊರಡಿಸಿದ್ದ ಪಶು ವೈದ್ಯಾಧಿಕಾರಿಗಳ ಅಂತಿಮ ಆಯ್ಕೆಪಟ್ಟಿ ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲಾಗಿತ್ತು. ಈ ಘಟನೆ ಮರೆಯಾಗುವ ಮೊದಲೇ ಪಿಡಿಒ ನೇಮಕಾತಿ ವಿಚಾರದಲ್ಲಿ ಕೂಡ ಇದೇ ರೀತಿಯ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. ಒಂದು ಕಡೆ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್, ತಾನು ಅಧಿಕಾರ ನಡೆಸುತ್ತಿರುವ ರಾಜ್ಯದಲ್ಲೇ ಹಿಂಗೆಲ್ಲಾ ಮಾಡಿಕೊಂಡಿದೆ ಎಂದು ವಿಪಕ್ಷ ನಾಯಕರು ಆರೋಪಿಸುತ್ತಿದ್ದಾರೆ. ಹೀಗಾಗಿ ಕೆಪಿಎಸ್‌ಸಿ ವಿರುದ್ಧದ ಹೋರಾಟಕ್ಕೆ ಬಿಜೆಪಿ & ಜೆಡಿಎಸ್ ನಾಯಕರು ಬೆಂಬಲ ನೀಡಿದ್ದು, ಹೋರಾಟ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.