Krishna Byre Gowda: ಬೆಂಗಳೂರು ಜನರಿಗೆ ಭರ್ಜರಿ ಸುದ್ದಿ ಕೊಟ್ಟರು ಸಚಿವ ಕೃಷ್ಣ ಬೈರೇಗೌಡ!

New Admin | July 3, 2026 - 11:07 pm

ಬೆಂಗಳೂರು ಇಡೀ ಜಗತ್ತಿಗೇ ಬೇಕಾದ ನಗರ, ಸಿಲಿಕಾನ್ ಸಿಟಿ ಬೆಂಗಳೂರು ಇಲ್ಲದೆ ಐಟಿ ಜಗತ್ತು ಉಸಿರಾಡುವುದಕ್ಕೂ ಸಾಧ್ಯ ಇಲ್ಲ. ಇದೇ ಕಾರಣಕ್ಕೆ ನಮ್ಮ ಬೆಂಗಳೂರು ದಿನದಿಂದ ದಿನಕ್ಕೆ ಬೃಹತ್ ಆಗಿ ಬೆಳೆಯುತ್ತಿದ್ದು, ಅಭಿವೃದ್ಧಿಯೂ ಅತ್ಯಗತ್ಯವಾಗಿದೆ. ಆದರೆ ಅನೇಕ ಸಮಸ್ಯೆಗಳು ಸೃಷ್ಟಿ ಆಗುತ್ತಿರುವುದೇ ಅಧಿಕಾರಿಗಳ ಸಮನ್ವಯತೆ ಕೊರತೆಯಿಂದ, ಈ ಕಾರಣಕ್ಕೆ ಅಲ್ಲೋಲ ಕಲ್ಲೋಲ ಆಗುತ್ತಿದೆ ಎಂಬ ಆರೋಪ ಜನರದ್ದು. ಇಂತಹ ಸಮಯದಲ್ಲೇ ಬೆಂಗಳೂರು ಜನರಿಗೆ ಭರ್ಜರಿ ಸುದ್ದಿ ಕೊಟ್ಟಿದ್ದಾರೆ ಸಚಿವ ಕೃಷ್ಣ ಬೈರೇಗೌಡ!

ಈಗಾಗಲೇ 2 ಕೋಟಿ ಸಮೀಪಕ್ಕೆ ಬೆಂಗಳೂರು ನಗರದ ಜನಸಂಖ್ಯೆ ಸಾಗುತ್ತಿದ್ದು, ಭವಿಷ್ಯದಲ್ಲಿ ಜನಸಂಖ್ಯೆ ಹೆಚ್ಚಳವೂ ಸಾಕಷ್ಟು ಸಮಸ್ಯೆ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಇಂತಹ ಸಮಯದಲ್ಲೇ ಸರ್ಕಾರ ಬೆಂಗಳೂರು ಅಭಿವೃದ್ಧಿ ಬಗ್ಗೆ ಹಲವು ಕ್ರಮ ಕೈಗೊಳ್ಳಲು ಮುಂದಾಗಿದೆ. ಬೆಂಗಳೂರು ನಗರದಲ್ಲಿ ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಕೊರತೆಯಿಂದ ಸಾರ್ವಜನಿಕರು ಎದುರಿಸುತ್ತಿರುವ ನಾನಾ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.


ಸಮನ್ವಯತೆಗಾಗಿ ಕಾರ್ಯಕಾರಿ ಸಮಿತಿ ರಚನೆ

ಬೆಂಗಳೂರಲ್ಲಿ ಮಾತನಾಡಿದ ಸಚಿವರು, ರಸ್ತೆ ಕಾಮಗಾರಿ ಮತ್ತು ಕುಡಿಯುವ ನೀರು, ವಿದ್ಯುತ್, ಕೇಬಲ್ ಹಾಗೂ ಇತರೆ ಮೂಲಸೌಕರ್ಯ ಕಾಮಗಾರಿ ವಿವಿಧ ಇಲಾಖೆಗಳು ಪ್ರತ್ಯೇಕವಾಗಿ ಕೈಗೊಳ್ಳುವುದರಿಂದ ರಸ್ತೆಗಳು ಹಾಳಾಗುತ್ತಿವೆ ಮತ್ತು ಜನರು ಅನಗತ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಪ್ರತಿಯೊಂದು ಇಲಾಖೆಯು ಪೂರ್ವ ಯೋಜನೆ ಜೊತೆಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಕಾರ್ಯಕಾರಿ ಸಮಿತಿ ರಚಿಸಲಾಗಿದೆ ಎಂದಿದ್ದಾರೆ. ಈ ಮೂಲಕ ವಿವಿಧ ಇಲಾಖೆಗಳ ಅಧಿಕಾರಿಗಳು ಸಮಯನ್ವಯ ಸಾಧಿಸಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.

ಸಿಎಂ ನೇತೃತ್ವದಲ್ಲಿ ಅಗತ್ಯ ಸಂದರ್ಭದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಶಾಸಕರು, ಸಂಸದರು & ಮೇಯರ್ ಸೇರಿದಂತೆ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ನಗರಾಭಿವೃದ್ಧಿಗೆ ಸಂಬಂಧಿಸಿದ ನೀತಿ ನಿರ್ಧಾರಗಳನ್ನು ಈ ವೇದಿಕೆಯಲ್ಲೇ ಕೈಗೊಳ್ಳಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಕಾಮಗಾರಿಗಳ ಮಾಹಿತಿ ಮೊದಲೇ ಹಂಚಿಕೊಳ್ಳಬೇಕು

ಸಂಚಾರ ದಟ್ಟಣೆ ನಿಯಂತ್ರಣ, ಬಸ್ ಸೇವೆಗಳ ಸುಧಾರಣೆ ಹಾಗೂ ರಸ್ತೆ ಕಾಮಗಾರಿಗಳ ಮಾಹಿತಿಯನ್ನು ಜಿಐಎಸ್ ಆಧಾರಿತ ಡ್ಯಾಶ್‌ಬೋರ್ಡ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಸೂಚನೆ ನೀಡಲಾಗಿದೆ. ಬೆಸ್ಕಾಂ, ಬಿಡಬ್ಲ್ಯೂಎಸ್‌ಎಸ್‌ಬಿ, ಕೆ-ರೈಡ್ ಸೇರಿದಂತೆ ಎಲ್ಲ ಇಲಾಖೆಗಳು ತಮ್ಮ ಕಾಮಗಾರಿಗಳ ಮಾಹಿತಿಯನ್ನು ಮುಂಚಿತವಾಗಿಯೇ ಹಂಚಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಫುಟ್‌ಪಾತ್ ತೆರವು ಕ್ರಮಕ್ಕೆ ಸಮರ್ಥನೆ

ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆಯ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು, ಬೆಂಗಳೂರು ನಗರದ ಕೇವಲ ಶೇಕಡಾ 20ರಷ್ಟು ಪ್ರಮುಖ ರಸ್ತೆಗಳಲ್ಲಿ ಮಾತ್ರ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ವೃದ್ಧರು, ಮಕ್ಕಳು ಹಾಗೂ ಪಾದಚಾರಿಗಳು ಸುರಕ್ಷಿತವಾಗಿ ಸಂಚರಿಸಲು ಗುಣಮಟ್ಟದ ಫುಟ್‌ಪಾತ್ ಅಗತ್ಯ. ಗುಂಡಿಗಳಿರುವ ರಸ್ತೆಗಳು ಹಾಗೂ ಅತಿಕ್ರಮಿತ ಪಾದಚಾರಿ ಮಾರ್ಗಗಳು ಬೆಂಗಳೂರಿನ ಪ್ರಮುಖ ಸಮಸ್ಯೆಗಳಾಗಿದ್ದು, ಅವುಗಳನ್ನು ಪರಿಹರಿಸಲು ಸಾರ್ವಜನಿಕರ ಸಹಕಾರವೂ ದೊರೆಯುತ್ತಿದೆ ಎಂದಿದ್ದಾರೆ.