ಚಿರತೆ ಬಂತು ಓಡಿ.. ಓಡಿ.. ಬೆಳ್ಳಂಬೆಳಗ್ಗೆ ಈ ರೀತಿಯ ಧ್ವನಿ ದಿಢೀರ್ ಕೇಳಿ ಬಂದರೆ ಹೇಗೆ ಇರಬೇಡ ಹೇಳಿ ಪರಿಸ್ಥಿತಿ? ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಅದರಲ್ಲೂ ನಗರ ಬೆಳೆಯುತ್ತಿದ್ದರೆ ಅಕ್ಕಪಕ್ಕ ಇರುವ ಕಾಡು ಕಡಿದು ಹಾಕಿ ಕಾಂಕ್ರಿಟ್ ನಗರ ನಿರ್ಮಾಣ ಮಾಡಲು ಮುಂದಾಗುತ್ತಿರುವ ಕಾರಣಕ್ಕೆ ನಾನಾ ಸಮಸ್ಯೆಗಳು ಎದುರಾಗುತ್ತಿವೆ. ಪದೇ ಪದೇ ಚಿರತೆಗಳ ಹಾವಳಿ ಕೂಡ ಹೆಚ್ಚಾಗುತ್ತಿದ್ದು, ಇದೀಗ ಮತ್ತೊಮ್ಮೆ ನಗರದ ಹೃದಯ ಭಾಗಕ್ಕೆ ಚಿರತೆ ಎಂಟ್ರಿ ಕೊಟ್ಟು ಆಘಾತ ನೀಡಿದೆ. ಈ ಘಟನೆ ಬಗ್ಗೆ ಫುಲ್ ಡೀಟೇಲ್ಸ್ ಇಲ್ಲಿದೆ ಮುಂದೆ ಓದಿ ತಿಳಿಯೋಣ ಬನ್ನಿ.
ಬೆಂಗಳೂರು ನಗರದ ಪಶ್ಚಿಮ ಭಾಗದ ವಸತಿ ಪ್ರದೇಶ ಒಂದರಲ್ಲಿ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬೆಳಗಿನ ವೇಳೆ ವಾಕಿಂಗ್ & ವ್ಯಾಯಾಮಕ್ಕೆ ಎಂದು ಪಾರ್ಕ್‌ಗೆ ಬಂದ ಜನ ಕಾಡುಪ್ರಾಣಿಯನ್ನ ಗಮನಿಸಿದ ಕೂಡಲೇ ಸ್ಥಳದಿಂದ ಓಡಿ ಹೋಗಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿ ಸಮೀಪದ ಭಾರತ್ ನಗರದ ಪಾರ್ಕ್ ಒಳಗೆ ಚಿರತೆ ಪ್ರವೇಶಿಸುತ್ತಿರುವ ಸೀನ್ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. 3 ಎಕರೆ ವಿಸ್ತೀರ್ಣ ಹೊಂದಿರುವ ಪಾರ್ಕ್‌ನಲ್ಲಿ ಚಿರತೆ ನಿರ್ಭಯವಾಗಿ ಸಂಚಾರ ಮಾಡುತ್ತಿರುವ ದೃಶ್ಯಗಳು ಸೆರೆ ಸಿಕ್ಕಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ ಚಿರತೆ ಓಡಾಟದ ದೃಶ್ಯಗಳು. ಹಗಲಿನ ಸಮಯದಲ್ಲೇ ಹೀಗೆಲ್ಲಾ ಕಾಡುಪ್ರಾಣಿ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿರುವುದು ನಿವಾಸಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಪಾರ್ಕ್ ಸುತ್ತಲೂ ಬಲೆ ಹಾಕಿದ ಅಧಿಕಾರಿಗಳು
ಚಿರತೆ ಪಾರ್ಕ್ ಒಳಗೆ ಇರುವುದು ಗ್ಯಾರಂಟಿ ಆದ ನಂತರ ತಕ್ಷಣ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿಯನ್ನ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಅಲರ್ಟ್ ಆಗಿರುವ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಪಾರ್ಕ್ ಒಳಗಡೆ ಚಿರತೆ ಎಲ್ಲಿ ಅಡಗಿದೆ ಎಂಬುದನ್ನ ಪತ್ತೆ ಹಚ್ಚಲಾಗುತ್ತಿದ್ದು, ಸುರಕ್ಷಿತವಾಗಿ ಸೆರೆಹಿಡಿಯಲು ಸುತ್ತಲೂ ಬಲೆಗಳನ್ನ ಹಾಕಿದ್ದಾರೆ ಅಧಿಕಾರಿಗಳು. ಕಾರ್ಯಾಚರಣೆ ಮುಗಿಯುವವರೆಗೂ ಸಾರ್ವಜನಿಕರು ಪಾರ್ಕ್ ಬಳಿ ಸುಳಿಯದಂತೆ ಹಾಗೂ ಅಲರ್ಟ್ ಆಗಿ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಖಡಕ್ ಸೂಚನೆ ನೀಡಿದ್ದಾರೆ. ಅಲ್ಲದೇ ಮಕ್ಕಳನ್ನು ಒಂಟಿ ಒಂಟಿಯಾಗಿ ಹೊರಗಡೆ ಕಳುಹಿಸದಂತೆ ಮತ್ತು ಅನಗತ್ಯವಾಗಿ ಪಾರ್ಕ್ ಅಥವಾ ಪೊದೆಗಳಿರುವ ಪ್ರದೇಶಗಳಲ್ಲಿ ಓಡಾಡದಂತೆ ಎಚ್ಚರಿಕೆ ಕೂಡ ನೀಡಲಾಗಿದೆ.
ಚಿರತೆ ಸೆರೆಹಿಡಿದು ಕಾಡಿಗೆ ಬಿಡಲು ಚಿಂತನೆ
ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಸ್ಥಳಾಂತರಿಸುವುದು ಪ್ರಮುಖ ಗುರಿಯಾಗಿದೆ. ಇದಕ್ಕಾಗಿ ವಿಶೇಷ ತಜ್ಞರ ಸಹಾಯವನ್ನ ಪಡೆಯಲಾಗುತ್ತಿದೆ. ಯಾವುದೇ ಆತಂಕಕ್ಕೆ ಒಳಗಾಗದೇ ಅಧಿಕಾರಿಗಳ ಸೂಚನೆ ಪಾಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹೊರವಲಯ ಹಾಗೂ ಹಸಿರು ಪ್ರದೇಶಗಳಿಗೆ ಹೊಂದಿಕೊಂಡಿರುವ ವಸತಿ ಪ್ರದೇಶಗಳಲ್ಲಿ ಚಿರತೆಗಳ ಸಂಚಾರದ ಘಟನೆಗಳು ಹೆಚ್ಚುತ್ತಿರುವುದು ಭಯ ಹೆಚ್ಚು ಮಾಡಿದೆ. ಅರಣ್ಯ ಪ್ರದೇಶಗಳ ವ್ಯಾಪ್ತಿ ಕುಗ್ಗುತ್ತಿರುವುದು, ಮಾನವ & ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವುದು ಇಂತಹ ಘಟನೆಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಟ್ನಲ್ಲಿ ಸದ್ಯ ಚಿರತೆ ಪತ್ತೆಗೆ ಶೋಧ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ, ಹೀಗಿದ್ದಾಗ ಸುತ್ತಮುತ್ತಲ ನಿವಾಸಿಗಳೆಲ್ಲಾ ಆತಂಕದಲ್ಲೇ ಸಮಯ ಕಳೆಯುತ್ತಿದ್ದಾರೆ. ಕಾಡು ನಾಶವಾಗಿ ನಾಡು ಹೆಚ್ಚಾಗುತ್ತಿರುವ ಕಾರಣಕ್ಕೆ ಇದೀಗ ದೊಡ್ಡ ಸಮಸ್ಯೆ ಸೃಷ್ಟಿಯಾಗುತ್ತಿದೆ. ಕೆಲವು ವರ್ಷಗಳ ಹಿಂದಷ್ಟೇ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೂಡ ಚಿರತೆ ಓಡಾಡಿ ಆತಂಕ ಮೂಡಿಸಿತ್ತು. ಹೀಗಾಗಿ ಕಾಡು ಪ್ರಾಣಿಗಳ ಸಮಸ್ಯೆಗೆ ಮುಕ್ತಿ ಕೊಡಿಸುವ ಜೊತೆಗೆ, ಕಾಡು ಪ್ರಾಣಿಗಳಿಗೂ ಸೂಕ್ತ ವ್ಯವಸ್ಥೆಯನ್ನ ಕಲ್ಪಿಸಿ ಎಂದು ಬೆಂಗಳೂರು ನಗರದ ನಿವಾಸಿಗಳು ಇದೀಗ ಆಗ್ರಹಿಸುತ್ತಿದ್ದಾರೆ.