Leopard In Bengaluru: ಚಿರತೆ ಬಂದ್ರೂ ಭಾರತ್ ನಗರ ನಿವಾಸಿಗಳು ಫುಲ್ ಖುಷ್, ಕಾರಣ ತಿಳಿಯಿರಿ...

bengaluru diaries | July 11, 2026 - 1:30 pm

ಬೆಂಗಳೂರಿಗೆ ಚಿರತೆ ಎಂಟ್ರಿ ಕೊಟ್ಟು, ಹೊರವಲಯ ಭಾಗದಲ್ಲಿ ವಾಸ ಇರುವ ಜನರಿಗೆ ಸಿಕ್ಕಾಪಟ್ಟೆ ಟೆನ್ಷನ್ ಶುರುವಾಗಿದೆ ಈಗ. ನೋಡ ನೋಡುತ್ತಲೇ ಎಂಟ್ರಿ ಕೊಟ್ಟು ಪಾರ್ಕ್ ಒಳಗೆ ಸೇರಿಕೊಂಡು ಜನರಿಗೆ ಕೂಡ ಭಯ ಹುಟ್ಟಿಸಿರುವ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಹಾಕಿ ಕಾಯುತ್ತಿದ್ದಾರೆ. ಹಗಲು & ರಾತ್ರಿ ಎನ್ನದೆ ಊಟ, ನಿದ್ದೆ ಬಿಟ್ಟು ಜನರ ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾಯುತ್ತಿದ್ದಾರೆ. ಇಂತಹ ಸಮಯದಲ್ಲೇ, ಚಿರತೆ ಬಂದ್ರೂ ಭಾರತ್ ನಗರ ನಿವಾಸಿಗಳು ಫುಲ್ ಖುಷ್, ಕಾರಣ ತಿಳಿಯಿರಿ...

ಅಂದಹಾಗೆ ನಮ್ಮ ಬೆಂಗಳೂರಿನ, ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಭಾರತ್ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆಯ ಓಡಾಟ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹೀಗಿದ್ದರೂ ಇದೀಗ ಇದೇ ಘಟನೆ ವರ್ಷಗಳಿಂದ ಬಗೆಹರಿಯದೇ ಕಾಡಿದ್ದ ದೊಡ್ಡ ಸಮಸ್ಯೆಗೆ ಪರಿಹಾರ ಸಿಗುವಂತೆ ಮಾಡಿದೆ. ಅಪಾಯಕಾರಿ ಪ್ರಾಣಿ ಭಯ ಒಂದೆಡೆಯಾದರೆ, ಮತ್ತೊಂದು ಕಡೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೊನೆಗೂ ಅಂತ್ಯ ಬಿದ್ದಿರುವುದು ಸ್ಥಳೀಯರಿಗೆ ಸಂತಸ ತರಿಸಿದೆ. ಒಂದು ಕಡೆ ಮನೆ ಪಕ್ಕದಲ್ಲೇ ಚಿರತೆ ನುಗ್ಗಿದ್ದರೂ ಈ ರೀತಿ ಸ್ಥಳೀಯ ನಿವಾಸಿಗಳು ಈಗ ಫುಲ್ ಖುಷಿ ಖುಷಿಯಾಗಿ ಇರಲು ಕಾರಣ ಏನು ಗೊತ್ತೆ?? ಗೊತ್ತಾದರೆ ನೀವು ಕೂಡ ನಗ್ತೀರ, ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ ತಿಳಿಯೋಣ ಬನ್ನಿ.


ಚಿರತೆ ಬಂದರೂ ಜನ ಖುಷ್!

ಬೆಂಗಳೂರಿನ ಹೊರವಲಯ ಭಾರತ್ ನಗರ ಮಧ್ಯಭಾಗದ ಸುಮಾರು ಒಂದೂವರೆ ಎಕರೆ ವಿಸ್ತೀರ್ಣದ ಉದ್ಯಾನವನ ಹಲವು ವರ್ಷಗಳಿಂದ ನಿರ್ವಹಣೆಯ ಕೊರತೆಯಿಂದ ಸಂಪೂರ್ಣ ಹಾಳಾಗಿತ್ತು. ಎಲ್ಲೆಲ್ಲೂ ಗಿಡಗಂಟಿ, ದಟ್ಟ ಪೊದೆಗಳು ಹಾಗೂ ಕಸದ ರಾಶಿ ತುಂಬಿಕೊಂಡಿದ್ದರಿಂದ ಪಾರ್ಕ್ ಜನರಿಗೆ ಉಪಯೋಗವಾಗದೇ, ಕಾಡಿನಂತೆ ಕಾಣಿಸುತ್ತಿತ್ತು. ಹಲವು ಬಾರಿ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮವು ಕೈಗೊಳ್ಳಲಾಗಿರಲಿಲ್ಲ ಎಂಬುದು ಜನರ ಆರೋಪ. ಆದರೆ ಈಗ ಇದೇ ಸ್ಥಳದಲ್ಲಿ ಚಿರತೆ ಕಾಣಿಸಿಕೊಂಡ ಕಾರಣ ಪಾರ್ಕ್ ಸುತ್ತಮುತ್ತ ಹುಡುಕಾಟ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಅಧಿಕಾರಿಗಳು ಸ್ಥಳವನ್ನು ಸ್ವಚ್ಛ ಮಾಡಿದ್ದಾರೆ. ಜೆಸಿಬಿ ಸಹಾಯದಿಂದ ಗಿಡಗಂಟಿ ತೆರವುಗೊಳಿಸಿ, ಪಾರ್ಕ್ ಸಂಪೂರ್ಣ ಸ್ವಚ್ಛಗೊಳಿಸುವ ಕೆಲಸ ಭರದಿಂದ ಸಾಗುತ್ತಿದೆ.

ಅಷ್ಟಕ್ಕೂ ಇದೀಗ ಬೆಂಗಳೂರಿನ ಭಾರತ್ ನಗರಕ್ಕೆ ನುಗ್ಗಿರುವ ಚಿರತೆ ಸಂಚರಿಸುತ್ತಿರುವ ಸ್ಥಳದ ಸಮೀಪವೇ ಶಾಲೆಯೊಂದು ಇರುವುದರಿಂದ ಪೋಷಕರು ಆತಂಕದಲ್ಲೇ ದಿನದೂಡುತ್ತಿದ್ದರು. ಪ್ರತಿದಿನ ನೂರಾರು ಮಕ್ಕಳು ಇದೇ ಮಾರ್ಗವಾಗಿ ಶಾಲೆಗೆ ಸಂಚರಿಸುತ್ತಿರುವ ಹಿನ್ನೆಲೆ ಸುರಕ್ಷತೆ ಕುರಿತು ಪ್ರಶ್ನೆಗಳು ಎದುರಾಗಿವೆ. ಇದೇ ಕಾರಣಕ್ಕೆ ಹಲವಾರು ಆಟೋ ಚಾಲಕರು ಕೂಡ ಆ ಪ್ರದೇಶಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟೆಲ್ಲದರ ಮಧ್ಯೆ ಸ್ಥಳ ಸ್ವಚ್ಛ ಮಾಡಿ, ಬಲೆ ಹಾಕಿ ಚಿರತೆ ಸೆರೆಗೋಸ್ಕರ ಇದೀಗ ಕಾದು ಕುಳಿತಿದ್ದಾರೆ ಅರಣ್ಯ ಇಲಾಖೆ & ಜಿಬಿಎ ಅಧಿಕಾರಿಗಳು. ಇಷ್ಟಾದ್ರೂ ಈವರೆಗೆ ಚಿರತೆ ಎಲ್ಲಿ ಹೋಯ್ತು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಮತ್ತೊಂದು ಕಡೆ ದಿನದಿಂದ ದಿನಕ್ಕೆ ಆತಂಕ ಕೂಡ ಹೆಚ್ಚಾಗುತ್ತಲೇ ಇದೆ.

ಚಿರತೆ ಸೆರೆಹಿಡಿದು ಕಾಡಿಗೆ ಬಿಡಲು ಚಿಂತನೆ

ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಸ್ಥಳಾಂತರಿಸುವುದು ಪ್ರಮುಖ ಗುರಿಯಾಗಿದೆ. ಇದಕ್ಕಾಗಿ ವಿಶೇಷ ತಜ್ಞರ ಸಹಾಯವನ್ನ ಪಡೆಯಲಾಗುತ್ತಿದೆ. ಯಾವುದೇ ಆತಂಕಕ್ಕೆ ಒಳಗಾಗದೇ ಅಧಿಕಾರಿಗಳ ಸೂಚನೆ ಪಾಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಹೊರವಲಯ ಹಾಗೂ ಹಸಿರು ಪ್ರದೇಶಗಳಿಗೆ ಹೊಂದಿಕೊಂಡಿರುವ ವಸತಿ ಪ್ರದೇಶಗಳಲ್ಲಿ ಚಿರತೆಗಳ ಸಂಚಾರದ ಘಟನೆಗಳು ಹೆಚ್ಚುತ್ತಿರುವುದು ಭಯ ಹೆಚ್ಚು ಮಾಡಿದೆ. ಅರಣ್ಯ ಪ್ರದೇಶಗಳ ವ್ಯಾಪ್ತಿ ಕುಗ್ಗುತ್ತಿರುವುದು, ಮಾನವ & ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವುದು ಇಂತಹ ಘಟನೆಗಳಿಗೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.