ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು... ಹೀಗಂತಾ ಕನ್ನಡಿಗ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ರಣಧೀರ ಸಿನಿಮಾದಲ್ಲಿ ಹಾಡು ಒಂದು ಮೂಡಿಬಂದಿತ್ತು. ಈ ಸಾಂಗ್ ಈಗಲೂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದು, ಅಭಿಮಾನಿಗಳು ಖುಷಿ ಖುಷಿಯಾಗಿ ಕೇಳುತ್ತಾರೆ & ಪ್ರೇಮಿಗಳಿಗೂ ಇದು ಆಸ್ಮಸ್ತೈರ್ಯ ತುಂಬುತ್ತದೆ. ಈ ಉದಾಹರಣೆಗೆ ಈಗ ಯಾಕಪ್ಪ ಅಂದ್ರೆ ಬರೋಬ್ಬರಿ 5 ವರ್ಷ ಪರಸ್ಪರ ಪ್ರೀತಿಸಿ ಜೀವನ ಸಂಗಾತಿಗಳಾಗಲು ನಿರ್ಧರಿಸಿದ ಯುವ ಜೋಡಿಗೆ ಕಂಟಕ ಎದುರಾಗಿದೆ. ಅದ್ರಲ್ಲಿ ಕನ್ನಡಿಗನಿಗೆ ಈಗ ಗೋವಾ ಮೂಲದ ಯುವತಿ ಕುಟುಂಬ ಸಮಸ್ಯೆ ಮಾಡ್ತಿರುವ ಆರೋಪ ಕೇಳಿಬಂದಿದೆ. ಈ ಕಾರಣಕ್ಕೆ ಕನ್ನಡಿಗ ಮಾಡಿದ್ದೇನು? ಪ್ರೇಮಿಗಳಿಗೆ ಈಗ ತೊಂದರೆ ಕೊಡುತ್ತಿರುವುದು ಯಾರು? ಬನ್ನಿ ತಿಳಿಯೋಣ.
ಪ್ರೀತಿ ಮಾಡಿದವರು ಬದುಕುತ್ತೀವಿ ಅಂತಾ ಹೇಳಿದರೆ ಅವರಿಗೆ ತೊಂದರೆ ಕೊಡ್ತಾರೆ, ಅದೇ ಒಪ್ಪಿಗೆ ಇಲ್ಲದಿದ್ದ ಸಂಬಂಧಕ್ಕೆ ಒಪ್ಪಿ ಮದುವೆ ಮಾಡುತ್ತಾರೆ. ಹೀಗಾದ್ರೆ ಸಂಸಾರ ಉಳಿಯಲ್ಲ ಅಂತಾರೆ ಈಗಿನ ಯುವಕ ಹಾಗೂ ಯುವತಿಯರು. ಅದರಲ್ಲೂ, ಡಿವೋರ್ಸ್ ಕೇಸ್‌ಗಳು ಹೆಚ್ಚಾಗಿರುವ ಸಮಯದಲ್ಲೇ ಚರ್ಚೆಗಳೂ ಜೋರಾಗ್ತಿದೆ. ಅಷ್ಟಕ್ಕೂ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ, ಸುಲದಾಳ ಗ್ರಾಮದ ನಿವಾಸಿ ಆದ ರೋಹನ್ ಪೂಜಾರಿ ಎಂಬ ಯುವಕನ ಕುಟುಂಬ ಕಳೆದ ಹಲವು ವರ್ಷಗಳಿಂದ ಗೋವಾದಲ್ಲಿ ನೆಲೆಸಿದೆ. ಪಣಜಿ ಸೇಂಟ್ ಮೈಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ರೋಹನ್ & ಗೋವಾ ಇಶಾ ಸೇಟ್ಕರ್ ನಡುವೆ ಪರಿಚಯವಾಗಿ, ಕಳೆದ 5 ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ಮದುವೆಗೆ ಯುವತಿಯ ಕುಟುಂಬವೇ ಈಗ ಅಡ್ಡಿಯಾಗಿದೆ...
ದೇವಸ್ಥಾನದಲ್ಲಿ ಮದುವೆ ಆದ ಜೋಡಿ
5 ವರ್ಷಗಳ ಪ್ರೀತಿಗೆ ಯಾವಾಗ ಗೋವಾ ಮೂಲದ ಯುವತಿ ಕುಟುಂಬ ವಿರೋಧ ಮಾಡಿತ್ತೋ, ಆಗ ಕನ್ನಡ ನಾಡಿನ ಹುಡುಗ ರೋಹನ್ ಪೂಜಾರಿ ನೇರವಾಗಿ ಯುವತಿ ಜೊತೆ ಹೋಗಿ ದೇವಸ್ಥಾನದಲ್ಲಿ ಮದುವೆ ಆಗಿದ್ದು ಜೀವನ ಶುರು ಮಾಡಿದ್ದಾರೆ. ಹೀಗಿದ್ದರೂ ಗೋವಾ ಮೂಲದ ಯುವತಿ ಮನೆಯ ಕಡೆಯವರು ಈಗಲೂ ಅತ್ತ ಯುವತಿ ಹಾಗೂ ಯುವಕನಿಗೆ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಈಗ ಸುರಕ್ಷತೆ ಕೋರಿ ಇಬ್ಬರೂ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆ ಹೋಗಿದ್ದಾರೆ. ಇನ್ನು ತಮ್ಮ ವೈವಾಹಿಕ ಜೀವನಕ್ಕೆ ಅಡ್ಡಿ ಆಗುತ್ತಿರುವ ಬಗ್ಗೆ ಹಾಗೂ ಕಿರುಕುಳದಿಂದ ಮುಕ್ತಿ ನೀಡುವಂತೆ ಯುವ ಜೋಡಿ ಪೊಲೀಸರಿಗೆ ಈಗ ಮನವಿ ಸಲ್ಲಿಸಿದ್ದಾರೆ. ಈ ನಡುವೆ ಮತ್ತೊಂದು ಸಮಸ್ಯೆ ಕೂಡ ಎದುರಾಗಿದೆ.
ಮದುವೆ ನೋಂದಣಿಗೆ ಎದುರಾಯ್ತು ಸಮಸ್ಯೆ
ಮತ್ತೊಂದು ಕಡೆ ಯುವ ಜೋಡಿ ಬಳಿ ಗೋವಾ ರಾಜ್ಯದ ವಿಳಾಸ ಇರುವ ಅಧಿಕೃತ ದಾಖಲೆ ಇದೆ, ಆದರೆ ಇವರ ಬಳಿ ಕರ್ನಾಟಕದ ಯಾವುದೇ ದಾಖಲೆಗಳು ಇಲ್ಲ. ಹೀಗಾಗಿ ಮದುವೆ ನೋಂದಣಿ ಸಾಧ್ಯವಾಗುತ್ತಿಲ್ಲ, ಸದ್ಯಕ್ಕೆ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಮದುವೆ ನೋಂದಣಿ ಮಾಡಲು ಬರೋದಿಲ್ಲ ಅಂತ ನೋಂದಣಿ ಅಧಿಕಾರಿಗಳು ತಿಳಿಸಿದ್ದಾರೆ. ತಾಂತ್ರಿಕ ಕಾರಣಗಳಿಂದ ಮದುವೆ ನೋಂದಣಿಯಾಗದ ಹಿನ್ನೆಲೆಯಲ್ಲಿ ರೋಹನ್ ಇದೀಗ ತನ್ನ ಪತ್ನಿ ಇಶಾಳನ್ನ ಬೆಳಗಾವಿಗೆ ಕರೆದುಕೊಂಡು ಬಂದಿದ್ದಾನೆ. ಇಂತಹ ಸಮಯವನ್ನ ಬಳಸಿಕೊಂಡು ಯುವತಿ ಕುಟುಂಬ ಇದೀಗ ರೋಹನ್ ಮನೆಗೆ ಹೋಗಿ ಯುವತಿಯನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿದೆ. ಇದೇ ಕಾರಣ, ಪೋಷಕರ ಕಿರುಕುಳದ ವಿರುದ್ಧ ಇದೀಗ ಯುವತಿ ಹಾಗೂ ಆಕೆಯ ಪತಿ ರೋಹನ್ ಪೊಲೀಸರ ಬಳಿ ಹೋಗಿ ಸಮಸ್ಯೆ ಬಗೆಹರಿಸಲು ಕೋರಿದ್ದಾರೆ.
ಯುವ ಜೊಡಿಗೆ ಪೊಲೀಸರ ಬೆಂಬಲ?
ಯುವತಿ ಹಾಗೂ ಆಕೆಯ ಪತಿ ರೋಹನ್ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರನ್ನು ಭೇಟಿ ಮಾಡಿ ರಕ್ಷಣೆಗೆ ಮನವಿ ಸಲ್ಲಿಸಿದ್ದಾರೆ. ತಾವು ಸ್ವಇಚ್ಛೆಯಿಂದ ವಿವಾಹವಾಗಿದ್ದು, ಯಾರ ಒತ್ತಾಯವೂ ಇಲ್ಲದೆ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಅರ್ಜಿಯನ್ನು ಸ್ವೀಕರಿಸಿ, ಪ್ರಕರಣದ ಕಾನೂನು ಅಂಶ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇಬ್ಬರೂ ವಯಸ್ಕರಾಗಿರುವ ಹಿನ್ನೆಲೆ ಅವರ ಸುರಕ್ಷತೆಗೆ ಆದ್ಯತೆ ನೀಡುವ ಜೊತೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಒಟ್ನಲ್ಲಿ ಈಗ ಸೋಷಿಯಲ್ ಮೀಡಿಯಾ ಮೂಲಕ ಕೂಡ ಕನ್ನಡಿಗ ಯುವಕ ರೋಹನ್ ಬೆಂಬಲಕ್ಕೆ ನಿಂತಿದ್ದಾರೆ ಕನ್ನಡಿಗರು.