Mekedatu Dam: ಮೇಕೆದಾಟು ಡ್ಯಾಂ ಕಟ್ಟೋದು ಫಿಕ್ಸ್, ಕೇಂದ್ರದ ಈ ಆದೇಶದಿಂದ ಕರ್ನಾಟಕಕ್ಕೆ ಬಂಪರ್!

bengaluru diaries | July 28, 2026 - 2:31 pm

ಕಾವೇರಿ ಕನ್ನಡ ನಾಡಿನ ಸ್ವತ್ತು, ಜೀವಕ್ಕಿಂತ ಹೆಚ್ಚಾಗಿ ಕಾವೇರಿ ನೀರನ್ನು ಕಾಪಾಡುತ್ತೇವೆ ಅಂತಾರೆ ಕರ್ನಾಟಕ ರಾಜ್ಯದ ಜನರು. ಹೀಗಿದ್ದರೂ ಪದೇ ಪದೇ ನೆರೆ ರಾಜ್ಯ ತಮಿಳುನಾಡು ಕಾವೇರಿ ನದಿ ನೀರಿನ ವಿಚಾರವಾಗಿ ಕಿರಿಕ್ ಮಾಡುತ್ತಾ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಕಳೆದ 2 ವರ್ಷ ಸತತವಾಗಿ ಉತ್ತಮ ಮಳೆಯಾದ ಕಾರಣ ಭಾರಿ ಪ್ರಮಾಣದಲ್ಲಿ ತಮಿಳುನಾಡಿಗೆ ನೀರು ಹರಿದಿತ್ತು, ಆದರೆ ಅದನ್ನು ವ್ಯರ್ಥವಾಗಿ ಸಮುದ್ರಕ್ಕೆ ಹರಿಸಿದೆ ತಮಿಳುನಾಡು ರಾಜ್ಯ. ಹೀಗಿದ್ದಾಗ ಅತ್ತ ತಾನು ಕೂಡ ಹೊಸ ಡ್ಯಾಂ ಕಟ್ಟಿಕೊಳ್ಳದೇ, ಈ ಕಡೆ ಕರ್ನಾಟಕಕ್ಕೆ ಕೂಡ ಹೊಸದಾಗಿ ಜಲಾಶಯ ಕಟ್ಟಲು ಬಿಡದೇ ತಮಿಳುನಾಡು ಆಟ ಆಡುತ್ತಿತ್ತು. ಆದರೆ ಇದೀಗ ಸಮಯ ಬದಲಾಗಿದೆ, ಕನ್ನಡಿಗರ ಪಾಲಿಗೆ ಭರ್ಜರಿ ಸುದ್ದಿಯೊಂದು ಸಿಕ್ಕಿದೆ.

ಅಂದಹಾಗೆ, ಕಾವೇರಿ ನದಿಗೆ ಯಾವುದೇ ಅಣೆಕಟ್ಟು ಅಥವಾ ನಿರ್ಮಾಣ ಕಾರ್ಯ ಕೈಗೊಳ್ಳಲು ಕರ್ನಾಟಕ ರಾಜ್ಯವು ತಮಿಳುನಾಡು ಸೇರಿದಂತೆ ಕೆಳ ಭಾಗದ ರಾಜ್ಯಗಳ ಪೂರ್ವಾನುಮತಿ ಪಡೆಯುವ ಅಗತ್ಯತೆ ಇಲ್ಲ ಎಂಬ ಸ್ಪಷ್ಟನೆ ಈಗ ಸಿಕ್ಕಿದೆ. ಈ ಬಗ್ಗೆ ಕೆಳ ಭಾಗದ ರಾಜ್ಯಗಳ ಪೂರ್ವಾನುಮತಿ ಅಥವಾ ಒಪ್ಪಿಗೆ ಪಡೆಯಬೇಕು ಎಂದು 2018ರ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿನಲ್ಲಿ ಎಲ್ಲೂ ಉಲ್ಲೇಖಿಸಿಲ್ಲ ಎಂದು ಇದೀಗ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ಕರ್ನಾಟಕ ರಾಜ್ಯಕ್ಕೆ ಇದ್ದ ಮತ್ತೊಂದು ತೊಡಕು ನಿವಾರಣೆ ಆದಂತೆ ಆಗಿದ್ದು, ಕನ್ನಡಿಗರ ಪಾಲಿಗೆ ಮಹತ್ವದ ಯೋಜನೆ ಆಗಿರುವ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ. ಅತ್ತ ತಮಿಳುನಾಡು ಸರ್ಕಾರಕ್ಕೆ ಈ ಉತ್ತರ ನುಂಗಲಾರದ ತುತ್ತಾಗಿ ಪರಿಣಮಿಸಿದೆ.


ಕಾವೇರಿ ವಿಚಾರದಲ್ಲಿ ಭರ್ಜರಿ ಸುದ್ದಿ

ತಮಿಳನಾಡು ರಾಜ್ಯದಲ್ಲಿ ರಾಜಕೀಯ ನಿಂತಿರುವುದೇ ಕಾವೇರಿ ನದಿ ನೀರಿನ ವಿಚಾರದಲ್ಲಿ, ಇಂತಹ ಸಮಯದಲ್ಲೇ ಲೋಕಸಭೆಯಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರಿಸುತ್ತಾ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವರಾದ ರಾಜಭೂಷಣ್ ಚೌಧರಿ ಅವರು ಲಿಖಿತ ರೂಪದಲ್ಲಿ ವಿವರಿಸಿದ್ದಾರೆ. ತಮಿಳುನಾಡು ಸಂಸದ ಡಾ. ಅನ್ಬುಮಣಿ ರಾಮದಾಸ್ ಅವರು ಕಾವೇರಿ ಜಲವಿವಾದ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿನ ಅರ್ಥೈಸುವಿಕೆ ಕುರಿತು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿರುವ ಸಚಿವರು 2018 ಫೆಬ್ರವರಿ 16ಕ್ಕೆ ಪ್ರಕಟವಾದ ಸುಪ್ರೀಂಕೋರ್ಟ್ ಅಂತಿಮ ತೀರ್ಪಿನಲ್ಲಿ ಯಾವ ರಾಜ್ಯ ಮತ್ತೊಂದು ರಾಜ್ಯದ ಅನುಮತಿ ಪಡೆದು ಮಾತ್ರ ಅಣೆಕಟ್ಟು ನಿರ್ಮಿಸಬೇಕು ಎಂಬ ನಿಯಮ ಉಲ್ಲೇಖಿಸಿಲ್ಲ ಎಂದು ಸ್ಪಷ್ಟಪಡಿಸಿ  ಹೇಳಿದ್ದಾರೆ. ಈ ಮೂಲಕ ತಮಿಳುನಾಡಿಗೆ ಢವಢವ ಶುರುವಾಗಿದ್ದು, ಮೇಕೆದಾಟು ಡ್ಯಾಂ ಕಟ್ಟುವುದು ಇದೀಗ ಬಹುತೇಕ ಪಕ್ಕಾ ಆಗಿದೆ.

ಅಂದಹಾಗೆ ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವರಾದ ರಾಜಭೂಷಣ್ ಚೌಧರಿ ಅವರು ಉತ್ತರಿಸಿರುವ ಪ್ರಕಾರ, ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಕಾವೇರಿ ಜಲ ವಿವಾದ ನ್ಯಾಯಮಂಡಳಿ 2007ರಲ್ಲಿ ನೀಡಿದ್ದ ಆದೇಶ ಪ್ರಮುಖ ಅಂಶಗಳನ್ನ ಪರಿಗಣಿಸಿದೆ. ವಿಶೇಷವಾಗಿ ನ್ಯಾಯಮಂಡಳಿಯ 18ನೇ ವಿಧಿಯಲ್ಲಿ ಪ್ರತಿ ರಾಜ್ಯಕ್ಕೂ ತನ್ನ ಭೌಗೋಳಿಕ ವ್ಯಾಪ್ತಿಯೊಳಗಿನ ಜಲಸಂಪನ್ಮೂಲ ಕಾನೂನುಬದ್ಧವಾಗಿ ಬಳಸಿಕೊಳ್ಳುವ ಮತ್ತು ನಿರ್ವಹಣೆಗೆ ಅಗತ್ಯ ಕ್ರಮಗಳನ್ನ ಕೈಗೊಳ್ಳುವ ಅಧಿಕಾರವಿದೆ ಎಂದು ಉಲ್ಲೇಖಿಸಲಾಗಿದೆ. ಈ ಮೂಲಕ ಮೇಕೆದಾಟು ಭಾಗದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಬೃಹತ್ ಡ್ಯಾಂ ನಿರ್ಮಾಣ ಆಗುವುದು ಬಹುತೇಕ ಪಕ್ಕಾ ಆಗುತ್ತಿದೆ.

ರೈತರಿಗೆ ಶೀಘ್ರದಲ್ಲೇ ಭರ್ಜರಿ ಸುದ್ದಿ?

ಮತ್ತೊಂದು ಕಡೆ ಮೇಕೆದಾಟು ಡ್ಯಾಂ ವಿಚಾರವಾಗಿ ಮತ್ತೊಮ್ಮೆ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆಯ ಸಲ್ಲಿಸಲು ಸಿದ್ಧತೆ ನಡೆಸಿದ್ದು, ಯೋಜನೆ ಶೀಘ್ರದಲ್ಲೇ ಶುರುವಾಗುವ ಸಾಧ್ಯತೆ ಇದೆ. ಅದರಲ್ಲೂ ಈ ಯೋಜನೆ ರೈತರಿಗೆ ಭಾರಿ ದೊಡ್ಡ ಉಡುಗೊರೆ ಆಗಲಿದ್ದು, ಕುಡಿಯುವ ನೀರು & ಕೃಷಿಗೆ ಕೂಡ ಈ ನೀರು ಪ್ರಮುಖವಾದ ಕೊಡುಗೆ ನೀಡಲಿದೆ ಅಂತಿದ್ದಾರೆ ಕನ್ನಡಿಗರು. ಆದರೆ ಪದೇ ಪದೇ ಕಿರಿಕ್ ಮಾಡುತ್ತಿರುವ ತಮಿಳುನಾಡು ಈಗ ಸೈಲೆಂಟ್ ಆಗುತ್ತಾ? ಅಥವಾ ಮತ್ತೆ ಮತ್ತೆ ಕಿರಿಕ್ ತೆಗೆದು ಮುಖಭಂಗ ಅನುಭವಿಸುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ. ತಮಿಳುನಾಡು ರಾಜ್ಯದ ರಾಜಕಾರಣಿಗಳ ಹಠದಿಂದ ಈ ವಿಚಾರ ಮತ್ತೊಮ್ಮೆ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಕಿಚ್ಚು ಹೊತ್ತಿಸುವ ಆತಂಕ ಕೂಡ ಮೂಡಿಸಿದೆ.