Mother Promise: ಮದರ್ ಪ್ರಾಮಿಸ್ ಹಿಟ್, ಕನ್ನಡಿಗರ ಮನಸ್ಸು ಗೆದ್ದ ನಟ ರಾಕ್ಷಸನ ಸಿನಿಮಾ!

bengaluru diaries | July 9, 2026 - 10:30 pm

ಕನ್ನಡಿಗ ಡಾಲಿ ಧನಂಜಯ್ ಈಗ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯನ್ನು ಸೆಳೆಯುತ್ತಾ ಇದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಇನ್ನೇನು ಒಂದೂವರೆ ದಶಕ ಅಂದ್ರೆ ಭರ್ಜರಿ 15 ವರ್ಷಗಳನ್ನ ಯಶಸ್ವಿಯಾಗಿ ಪೂರೈಸುವ ಸಮೀಪದಲ್ಲಿ ಇರುವ, ನಟ ರಾಕ್ಷಸ ಬಿರುದಾಂಕಿತ ಡಾಲಿ ಧನಂಜಯ್ ಕನ್ನಡಿಗರಿಗೆ ಇದೀಗ ಮತ್ತೊಂದು ಭರ್ಜರಿ ಹಿಟ್ ಸಿನಿಮಾ ನೀಡಿದ್ದಾರೆ. ಹೌದು, ಅಧಿಕೃತವಾಗಿ ನಾಳೆ ರಿಲೀಸ್ ಆಗುತ್ತಿರುವ ಡಾಲಿ ಧನಂಜಯ್ ಅವರ ಬಹುನಿರೀಕ್ಷಿತ ‘ಮದರ್ ಪ್ರಾಮಿಸ್’ ಸಿನಿಮಾ ಈಗಾಗಲೇ ಸೂಪರ್ ಹಿಟ್ ಆಗಿದೆ ಅನ್ನೋದು ಕನ್ನಡಿಗರ ಮಾತು. ಹೇಗೆ? ಏನು? ಎತ್ತ? ಬನ್ನಿ ತಿಳಿಯೋಣ ಕನ್ನಡಿಗರೇ...

100 ವರ್ಷಗಳ ಸಂಭ್ರಮಕ್ಕೆ ಕಾದು ಕೂತಿರುವ ಕನ್ನಡ ಸಿನಿಮಾ ರಂಗ ಇದೀಗ ಜಗದಗಲ ಬೆಳೆದು ನಿಂತಿದ್ದು, ವರ್ಲ್ಡ್‌ವೈಡ್ ಕನ್ನಡ ಸಿನಿಮಾಗಳು ಅಬ್ಬರಿಸುತ್ತಿವೆ. ಅದರಲ್ಲೂ ಜುಲೈ 10 ಶುಕ್ರವಾರ ‘ಮದರ್ ಪ್ರಾಮಿಸ್’ ಸಿನಿಮಾ ಕೂಡ ರಿಲೀಸ್ ಆಗುತ್ತಿದ್ದು, ಹೊಸ ಕಥಾಹಂದರ, ಭಾವನಾತ್ಮಕ ನಿರೂಪಣೆ ಹಾಗೂ ಮನರಂಜನೆಯ ಮಿಶ್ರಣ ಹೊಂದಿರುವ ಈ ಸಿನಿಮಾ ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಇಂತಹ ಮಹತ್ವದ ಸಮಯದಲ್ಲೇ ಪ್ರೀಮಿಯರ್ ಶೋಗಳ ಮೂಲಕ ಕೂಡ ಕನ್ನಡಿಗರನ್ನು ತಲುಪುವ ಪ್ರಯತ್ನ ಮಾಡಿತ್ತು ಸಿನಿಮಾ ತಂಡ. ಹೀಗಿದ್ದಾಗ ಅಧಿಕೃತವಾಗಿ ‘ಮದರ್ ಪ್ರಾಮಿಸ್’ ಸಿನಿಮಾ ರಿಲೀಸ್ ಆಗುವ ಮೊದಲೇ ಸೂಪರ್ ಹಿಟ್ ಅಂತಿದ್ದಾರೆ ಕನ್ನಡಿಗರು.


ಮದರ್ ಪ್ರಾಮಿಸ್ ಸೂಪರ್ ಹಿಟ್!

ಹೌದು, ‘ಮದರ್ ಪ್ರಾಮಿಸ್’ ಸಿನಿಮಾದ ವಿಶೇಷ ಪ್ರದರ್ಶನ ಅಂದ್ರೆ ಪ್ರೀಮಿಯರ್ ಶೋ ವೀಕ್ಷಿಸಿದ ಕನ್ನಡಿಗರು ಹೊಟ್ಟೆ ಉಣ್ಣಾಗುವಂತೆ ನಕ್ಕಿದ್ದಾರೆ. ‘ಮದರ್ ಪ್ರಾಮಿಸ್’ ಸಿನಿಮಾಗೆ ಈ ಮೂಲಕ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ಮನರಂಜನೆಯ ಜೊತೆಗೆ ಭಾವನಾತ್ಮಕ ಅನುಭವ ನೀಡುತ್ತದೆ ಎಂಬ ವಿವರಣೆ ಪ್ರೇಕ್ಷಕರಿಂದ ಇದೀಗ ಕೇಳಿ ಬಂದಿದೆ. ಹಾಸ್ಯ, ಆ್ಯಕ್ಷನ್, ಕುಟುಂಬದ ಮೌಲ್ಯಗಳು & ತಾಯಿ ಹಾಗೂ ಮಗನ ಬಾಂಧವ್ಯ ಒಂದೇ ಕಥೆಯಲ್ಲಿ ಬೆಸೆದಿರುವ ಹೊಸ ಪ್ರಯತ್ನವು ಕನ್ನಡಿಗರಿಗೆ ಸಖತ್ ಇಷ್ಟವಾಗಿದೆ.

ಭರ್ಜರಿ ಸ್ಟಾರ್‌ಗಳನ್ನು ಹೊಂದಿದೆ ಸಿನಿಮಾ

ಅಂದಹಾಗೆ ‘ಮದರ್ ಪ್ರಾಮಿಸ್’ ಸಿನಿಮಾ ಟ್ರೇಲರ್ ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಭರ್ಜರಿ ರೆಸ್ಪಾನ್ಸ್ ಕೂಡ ಪಡೆದಿತ್ತು. ಸ್ನೇಹದ ಮೌಲ್ಯ, ಗ್ಯಾಂಗ್ ವಾರ್, ಬೆಟ್ಟಿಂಗ್, ಸಂಬಂಧಗಳ ಮೌಲ್ಯಗಳನ್ನು ಟ್ರೇಲರ್ ಕುತೂಹಲಕಾರಿಯಾಗಿ ಪರಿಚಯಿಸಿತ್ತು. ಇದೀಗ ಸಿನಿಮಾದ ಪ್ರೀಮಿಯರ್ ಶೋ ಭರ್ಜರಿ ರೆಸ್ಪಾನ್ಸ್ ಪಡೆದಿದ್ದು, ಹೌಸ್‌ಫುಲ್ ಪ್ರದರ್ಶನವನ್ನ ಕೂಡ ಕಂಡಿದೆ. ಹೀಗಾಗಿ ಪ್ರೇಕ್ಷಕರ ನಿರೀಕ್ಷೆಯನ್ನು ‘ಮದರ್ ಪ್ರಾಮಿಸ್’ ಸಿನಿಮಾ ತಲುಪಿದ್ದು, ಈ ವರ್ಷದ ಸೂಪರ್ ಹಿಟ್ ಸಿನಿಮಾ ಅಂತಿದ್ದಾರೆ ಪ್ರೇಕ್ಷಕರು. ಸಿನಿಮಾದಲ್ಲಿ ನಾಗಭೂಷಣ್, ವಿನಯ ಪ್ರಸಾದ್, ಗೀತಾ ಹಾಗೂ ಗುರುದತ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕರಾಗಿ ಕನ್ನಡ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಪೂರ್ಣಚಂದ್ರ ಮೈಸೂರು ನಿರ್ದೇಶನ ಈ ಚಿತ್ರಕ್ಕೆ ಇದೆ.