ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ದೊಡ್ಡ ಬಿರುಗಾಳಿ ಎಬ್ಬಿಸಿತ್ತು, ಹತ್ತಾರು ವರ್ಷಗಳ ಕಾಲ ಡಾಕ್ಟರ್ ಆಗುವ ಕನಸು ಕಟ್ಟಿಕೊಂಡು ಓದಿದ್ದ ವಿದ್ಯಾರ್ಥಿಗಳಿಗೆ ಮೋಸ ಆಗಿದೆ ಎಂಬ ಆರೋಪ ಕೇಳಿಬಂದಿತ್ತು. ಅದರಲ್ಲೂ ಈ ಪ್ರಕರಣದಲ್ಲಿ ದೊಡ್ಡ ದೊಡ್ಡವರ ಕೈವಾಡ ಕೂಡ ಇದೆ ಎಂಬ ಆರೋಪಗಳು ಕೇಂದ್ರ ಸರ್ಕಾರಕ್ಕೆ ತಲೆನೋವು ತರಿಸಿತ್ತು. ಮುಂದೆ ಏನು ಮಾಡೋದು? ಎಂಬ ಚಿಂತೆಯಲ್ಲಿ ಮೋದಿ ಅವರ ಸರ್ಕಾರ ಸಾಲು ಸಾಲು ಮೀಟಿಂಗ್ ಕೂಡ ಮಾಡಿತ್ತು. ಹೀಗಿದ್ದಾಗ ಭಾರತದ ಮೂಲೆ ಮೂಲೆಯಿಂದ ಬಂದಿದ್ದ ವಿದ್ಯಾರ್ಥಿಗಳ ಸಮೂಹ ದೆಹಲಿಯ ಜಂತರ್ ಮಂತರ್ ಭಾಗದಲ್ಲಿ ಹೋರಾಟ ಆರಂಭಿಸಿತ್ತು. ಅಂತಿಮವಾಗಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ಮೂಲಕ ವಿದ್ಯಾರ್ಥಿಗಳ ಪ್ರತಿಭಟನೆ ಗೆದ್ದು ಬೀಗಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ತಲ್ಲಣ ಎಬ್ಬಿಸಿದ್ದು, ಯಾವಾಗ ಈ ವಿಚಾರವನ್ನು ಗಂಭೀರವಾಗಿ ಪರಿಗಣನೆ ಮಾಡದೆ ಅಧಿಕಾರಿಗಳು ಉಡಾಫೆ ಮಾಡಿದರೋ ಆ ನಂತರ ಅದು ಸರ್ಕಾರದ ಬುಡಕ್ಕೆ ಬಂದಿತ್ತು. ಹೇಗಾದರೂ ಮಾಡಿ ಈ ಬಾರಿ ತಕ್ಕಪಾಠ ಕಲಿಸಬೇಕು ಎಂದು ರೊಚ್ಚಿಗೆದ್ದ ವಿದ್ಯಾರ್ಥಿಗಳು ಕಠಿಣ ಹೋರಾಟ ಆರಂಭಿಸಿಯೇ ಬಿಟ್ಟರು. ಎಲ್ಲವೂ ದೊಡ್ಡದಾಗುತ್ತಾ ಸಾಗಿ, ಕೊನೆಗೆ ನೀಟ್ ವಿದ್ಯಾರ್ಥಿ ಹೋರಾಟ ಕರ್ನಾಟಕ ಸೇರಿ ಭಾರತದ ಮೂಲೆ ಮೂಲೆಗೂ ಹಬ್ಬಿತ್ತು. ಎಲ್ಲವನ್ನೂ ಸರಿಪಡಿಸಲು ಸರ್ಕಾರ ಮುಂದಾಗಬೇಕು, ಪ್ರಮುಖವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂಬ ಬೇಡಿಕೆ ವಿದ್ಯಾರ್ಥಿಗಳಿಂದ ಕೇಳಿಬಂತು. ಆದರೆ ಕೇಂದ್ರ ಸರ್ಕಾರ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೇಳಲು ಮೊದಲಿಗೆ ಹಿಂದೇಟು ಹಾಕಿತ್ತು.
ಧರ್ಮೇಂದ್ರ ಪ್ರಧಾನ್ ಕೊನೆಗೂ ರಾಜೀನಾಮೆ!
20ಕ್ಕೂ ಹೆಚ್ಚು ವಿದ್ಯಾರ್ಥಿಗಳ ದುಡುಕಿನ ನಿರ್ಧಾರ ಹಾಗೂ ಪದೇ ಪದೇ ಸಂಭವಿಸುತ್ತಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಇತ್ತೀಚೆಗೆ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಹೇಗಾದರೂ ಆಗಲಿ ಈ ಬಾರಿ ಎಲ್ಲಾ ಸಮಸ್ಯೆ ಬಗೆಹರಿಯಲಿ ಎಂದು ಹೊರಾಟ ಆರಂಭಿಸಿದ್ದರು ವಿದ್ಯಾರ್ಥಿಗಳು. ಅಂತಿಮವಾಗಿ ವಿದ್ಯಾರ್ಥಿಗಳು ಶನಿವಾರದ ಮಧ್ಯಾಹ್ನ ತನಕ ಗಡುವು ನೀಡಿದ್ದರು. ಕೇಂದ್ರ ಸರ್ಕಾರ ಎಷ್ಟೇ ಮನವೊಲಿಕೆ ಮಾಡಿದರೂ ಅದನ್ನು ಕೇಳುವ ಹಾಗೂ ಅದಕ್ಕೆ ತಲೆಬಾಗುವ ಸ್ಥಿತಿಯಲ್ಲಿ ವಿದ್ಯಾರ್ಥಿ ಸಮೂಹ ಇರಲೇ ಇಲ್ಲ. ಅಂತಿಮವಾಗಿ ಹೋರಾಟ ಕೂಡ ಇನ್ನಷ್ಟು ಕಠಿಣ ರೂಪ ತಾಳುವ ಹೊತ್ತಲ್ಲೇ ಧರ್ಮೇಂದ್ರ ಪ್ರಧಾನ್ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಇದು ಕೋಟಿ ಕೋಟಿ ವಿದ್ಯಾರ್ಥಿಗಳಿಗೆ ಸಖತ್ ಖುಷಿ ಕೊಟ್ಟಿದೆ.
ಜಂತರ್ ಮಂತರ್ ಹೋರಾಟ ಮುಕ್ತಾಯ
ಒಂದು ಕಡೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಣೆ ಮಾಡಿದ ನಂತರ ಇನ್ನೊಂದು ಕಡೆ ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ, ಕಳೆದ 30 ದಿನಗಳಿಗೂ ಹೆಚ್ಚು ಕಾಲದಿಂದ ನಿರಂತರವಾಗಿ ನಡೆಯುತ್ತಿದ್ದ ಹೋರಾಟ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಮೂಲಕ ಅಂತ್ಯವಾಗಿದೆ. ಈ ಬಗ್ಗೆ ಸಿಜೆಪಿ ಹಾಗೂ ವಿದ್ಯಾರ್ಥಿ ಹೋರಾಟಗಾರರು ಅಧಿಕೃತ ಮಾಹಿತಿಯ ಕೂಡ ನೀಡಿದ್ದಾರೆ. ಅಂತಿಮವಾಗಿ ದೇಶದ ಯುವ ಸಮೂಹದ ಎದುರು ಕೇಂದ್ರ ಸರ್ಕಾರ ಕೂಡ ತಲೆಬಾಗಿದೆ ಎಂಬ ಚರ್ಚೆ ಶುರುವಾಗಿದೆ. ಹಾಗೇ ಇನ್ನುಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ವಹಿಸಲು ವಿದ್ಯಾರ್ಥಿಗಳ ಸಮೂಹ ಆಗ್ರಹಿಸಿದೆ.
ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆ ಫಿಕ್ಸ್
ಅಂದಹಾಗೆ ಮುಂದಿನ ದಿನಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಅಕ್ರಮದಲ್ಲಿ ಭಾಗಿಯಾದವರಿಗೆ ಅಸ್ತಿತ್ವದಲ್ಲಿರುವ 3 ರಿಂದ 5 ವರ್ಷದ ಜೈಲು ಶಿಕ್ಷೆಯನ್ನು 10 ವರ್ಷಗಳಿಗೆ ಹೆಚ್ಚಿಸಲಾಗಿದೆ. ಹಾಗೆಯೇ, ಗರಿಷ್ಠ ದಂಡದ ಮೊತ್ತವನ್ನು ₹10 ಲಕ್ಷದಿಂದ ಬ್ರಹ್ಮಾಂಡ ಮೊತ್ತವಾದ ₹10 ಕೋಟಿಗೆ ಏರಿಕೆ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಮಾಹಿತಿ ಮುಂಚಿತವಾಗಿ ಗೊತ್ತಿದ್ದರೂ ಸಹ ಅದನ್ನು ಮುಚ್ಚಿಟ್ಟುಕೊಂಡು ಮೌನವಾಗಿರುವವರಿಗೆ ₹1 ಕೋಟಿವರೆಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ಕೃತ್ಯದಲ್ಲಿ ಸಂಘಟಿತ ಅಪರಾಧ ಜಾಲವು ಭಾಗಿಯಾಗಿರುವುದು ಸಾಬೀತಾದರೆ, 5 ರಿಂದ 10 ವರ್ಷ ಕಠಿಣ ಜೈಲು ಶಿಕ್ಷೆಯೊಂದಿಗೆ ಕನಿಷ್ಠ ₹1 ಕೋಟಿ ರೂ. ದಂಡ ವಿಧಿಸಲಾಗುತ್ತದೆ. ಈ ಹೊಸ ತಿದ್ದುಪಡಿ ಸೋಮವಾರವೇ ಸಂಸತ್‌ನಲ್ಲಿ ಮಂಡನೆ ಆಗುವ ನಿರೀಕ್ಷೆ ಮೂಡಿದ್ದು, ಇಡೀ ದೇಶವೇ ಈ ತಿದ್ದುಪಡಿಗಾಗಿ ಕಾಯುತ್ತಿದೆ.
ಒಟ್ನಲ್ಲಿ ಭಾರತದಲ್ಲಿ ನಡೆದ ಪ್ರತಿಭಟನೆ ಇಡೀ ಜಗತ್ತಿನಾದ್ಯಂತ ಸದ್ದು ಮಾಡಿದ್ದು, ಹೊಸ ತಲೆಮಾರಿನ ಈ ಹೋರಾಟ ಜಗತ್ತಿನ ಇತರ ದೇಶಗಳಿಗೆ ಕೂಡ ಮಾದರಿ ಆಗಿದೆ. ಅದರಲ್ಲೂ ನೇಪಾಳ, ಶ್ರೀಲಂಕಾ, ಬಾಂಗ್ಲಾದ ಪ್ರತಿಭಟನೆಗಳ ನಂತರ ಭಾರತದಲ್ಲೂ ಹೊಸ ತಲೆಮಾರಿನ ಯುವಕರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿ ಗೆದ್ದು ಬೀಗಿದ್ದಾರೆ. ಹಾಗೇ ಭಾರತದ ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕು ಎಂಬ ಆಗ್ರಹ ಹೊಸ ತಲೆಮಾರಿನ ಯುವ ಸಮೂಹದ್ದಾಗಿದ್ದು, ಪರಿಸ್ಥಿತಿ ಸರಿ ಹೋಗುತ್ತಾ? ಅಥವಾ ಅದೇ ರಾಗ & ಅದೇ ಹಾಡು ಎನ್ನುವಂತೆ ಮತ್ತದೇ ಹಳೆಯ ಪರಿಸ್ಥಿತಿ ಮುಂದುವರಿಯುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.