ಭಾರತ ಮತ್ತೊಂದು ಬೃಹತ್ ಯುವ ಹೋರಾಟ ಕಂಡಿದೆ, ಹಲವು ದಶಕಗಳ ನಂತರ ಯುವಕರು ದೊಡ್ಡದಾದ ಹೋರಾಟ ಸಂಘಟಿಸಿ ತಮ್ಮ ಹಕ್ಕುಗಳಿಗಾಗಿ ಹೋರಾಡಿದ್ದಾರೆ. ಕೇಂದ್ರ ಸರ್ಕಾರ ಕೂಡ ಯುವ ಸಮುದಾಯ & ಅವರ ಬೇಡಿಕೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಮನೆಗೆ ಕಳುಹಿಸಿದೆ. ಹೀಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದೇ ತಡ ದೊಡ್ಡ ಮಟ್ಟದಲ್ಲಿ ಸಂಭ್ರಮಾಚರಣೆ ನಡೆಸಿದ ವಿದ್ಯಾರ್ಥಿಗಳು, ಪ್ರತಿಭಟನೆ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿ ಇದೀಗ ಮತ್ತೊಮ್ಮೆ ಶಾಂತ ವಾತಾವರಣಕ್ಕೆ ಮರಳುತ್ತಿದೆ. ಇಂತಹ ಸಮಯದಲ್ಲೇ ದೇಶದಲ್ಲಿ ಇದೀಗ ರಾಜಕೀಯ ತಿಕ್ಕಾಟದ ರಣಕಹಳೆ ಮೊಳಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ...
ನೀಟ್ ಪ್ರಶ್ನೆಪತ್ರಿಕೆ ಜೊತೆಗೆ ಹಲವು ಸ್ಪರ್ಧಾತ್ಮಕ ಪ್ರಶ್ನೆಪತ್ರಿಕೆಗಳು ಲೀಕ್ ಆಗಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಹೊಸ ತಲೆಮಾರಿನ ಭಾರತದ ಯುವ ಸಮೂಹವಾದ ಜೆನ್-ಜಿ ಪಟ್ಟು ಹಿಡಿದು ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿತ್ತು, ಕೊನೆಗೂ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಟ್ಟೇ ಬಿಟ್ಟರು. ಹೀಗೆ ಒಂದು ಕಡೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಘೋಷಣೆ ಮಾಡಿದ ನಂತರ ಇನ್ನೊಂದು ಕಡೆ ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ, ಕಳೆದ 30 ದಿನಗಳಿಗೂ ಹೆಚ್ಚು ಕಾಲದಿಂದ ನಿರಂತರವಾಗಿ ನಡೆಯುತ್ತಿದ್ದ ಹೋರಾಟ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯ ಮೂಲಕ ಅಂತ್ಯವಾಗಿದೆ. ಇಂತಹ ಸಮಯದಲ್ಲೇ ಕಾಂಗ್ರೆಸ್ ನಾಯಕರು ಇದೇ ವಿಚಾರವನ್ನು ಬಿಜೆಪಿ ನೇತೃತ್ವದ ಮೋದಿ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದ್ದಾರೆ.
ನಿಲ್ಲದ ನೀಟ್ ಪೇಪರ್ ಫೈಟ್!
ಅಂದಹಾಗೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಸಲ್ಲಿಸಿರುವುದು ಸಾಮಾನ್ಯ ಬೆಳವಣಿಗೆ ಅಲ್ಲ ಎಂದು ಹರಿಪ್ರಸಾದ್ ಇದೀಗ ಪ್ರತಿಪಾದನೆ ಮಾಡಿದ್ದಾರೆ. 4-5 ಪುಟಗಳ ರಾಜೀನಾಮೆ ಪತ್ರ ಬರೆದಿರುವುದು ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಸುತ್ತದೆ, ಭಾರತೀಯ ಶಿಕ್ಷಣ ವ್ಯವಸ್ಥೆಯು ಇದೀಗ ಎದುರಿಸುತ್ತಿರುವ ಸಮಸ್ಯೆ ಹೊಣೆಯನ್ನು ಕೇಂದ್ರ ಸರ್ಕಾರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿರುವ ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ನಡೆದ ಪರೀಕ್ಷಾ ಅಕ್ರಮಗಳು & ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಹಿನ್ನೆಲೆ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿ, ಇದಕ್ಕೆಲ್ಲಾ ಬಿಜೆಪಿ ಸರ್ಕಾರವೇ ಹೊಣೆ ಎಂದಿದ್ದಾರೆ. ಹಾಗೇ ಈ ಸಮಯದಲ್ಲೇ ಬಿಜೆಪಿ ಸರ್ಕಾರ ಶಿಕ್ಷಣ ವ್ಯವಸ್ಥೆಗೆ ಏನು ಕೊಡುಗೆ ನೀಡಿದೆ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ ಕೆಪಿಸಿಸಿ ಅಧ್ಯಕ್ಷ.
ಎಕ್ಸಾಮ್ ಪೇಪರ್ ಲೀಕ್ ಪ್ರಸ್ತಾಪ
ಅಷ್ಟಕ್ಕೂ ಭಾರತದ ಶಿಕ್ಷಣ ಕ್ಷೇತ್ರಕ್ಕೆ ಹಿಂದಿನ ಹಲವು ಸರ್ಕಾರಗಳು ಭದ್ರ ಬುನಾದಿ ಹಾಕಿದ್ದವು, ಸ್ವತಂತ್ರ ಭಾರತದ ಮೊದಲ ಸರ್ಕಾರ ಜವಾಹರಲಾಲ್ ನೆಹರೂ ಕಾಲದಲ್ಲಿ ಐಐಟಿ, ಐಐಎಂ ಸೇರಿ ಹಲವು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬುನಾದಿ ಹಾಕಿತ್ತು. ಹಿಂದಿನ ಅನೇಕ ಶಿಕ್ಷಣ ಸಚಿವರು ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಕೆಲಸಕ್ಕೆ ಆದ್ಯತೆ ನೀಡಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗಿಂತ ಹೆಚ್ಚಾಗಿ ಬೇರೆ, ಬೇರೆ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ. ದೇಶದಲ್ಲಿ ಹಲವಾರು ಬಾರಿ ಪರೀಕ್ಷಾ ಅಕ್ರಮ ನಡೆದಿದ್ದರೂ ಅವುಗಳನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು, ಇದೇ ಕಾರಣಕ್ಕೆ ಪ್ರತಿಭಟನೆ ನಡೆಸಿ ವಿದ್ಯಾರ್ಥಿಗಳು ಗೆದ್ದಿದ್ದಾರೆ ಎಂದರು. ಅಲ್ಲದೇ ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗೆ ಬೆಂಬಲವಾಗಿ ನಡೆದ ಹೋರಾಟದ ಫಲವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.