ಮನುಷ್ಯರು ಅಂದ್ರೆ ತಪ್ಪು ಮಾಡೇ ಮಾಡುತ್ತಾರೆ, ಆದರೆ ಕೆಲವರು ದೊಡ್ಡ ದೊಡ್ಡ ತಪ್ಪನ್ನೇ ಮಾಡಿ ಜೈಲಿಗೆ ಹೋಗಿ ಕಷ್ಟ ಅನುಭವಿಸುತ್ತಾರೆ. ಹೀಗಿದ್ದಾಗ ತಪ್ಪು ಮಾಡಿದ ಪ್ರತೀ ವ್ಯಕ್ತಿಗೂ ತಿದ್ದಿಕೊಳ್ಳುವುದಕ್ಕೆ ಅವಕಾಶ ಇರುತ್ತೆ, ಒಂದು ಜಾಗ ಇರುತ್ತೆ. ಹೊರಗಿನ ಪ್ರಪಂಚದಲ್ಲಿ ಎಷ್ಟೇ ದೊಡ್ಡ ಹೆಸರು ಮಾಡಿರಲಿ, ಕ್ರಿಮಿನಲ್ ಹಿನ್ನೆಲೆ ಹೊಂದಿರಲಿ, ಜೈಲಿನ ಒಳಗಡೆ ಎಂಟ್ರಿ ಕೊಟ್ಟ ನಂತರ ಕಾನೂನಿನ ಮುಂದೆ ಎಲ್ಲರೂ ಒಂದೇ. ಆದರೆ ಪೊಲೀಸರು ಕ್ರಿಮಿನಲ್‌ಗಳನ್ನ ಶಿಕ್ಷಿಸುವ ಕೆಲಸವಷ್ಟೇ ಮಾಡುವುದಿಲ್ಲ, ಬದಲಾಗಿ ತಪ್ಪು ಮಾಡಿದವರಿಗೂ ಒಂದು ಮೌಲ್ಯಯುತವಾದ ಜೀವನ ರೂಪಿಸಿಕೊಳ್ಳಲು ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತಾರೆ.
ಕ್ಷಣಿಕ ಕೋಪ ಅಥವಾ ಕ್ಷುಲ್ಲಕ ಕಾರಣಕ್ಕೆ ನಡೆದು ಹೋದ ತಪ್ಪುಗಳು ಮನುಷ್ಯನನ್ನ ಕುಟುಂಬದಿಂದ ಮತ್ತು ಸಮಾಜದಿಂದ ದೂರವಾಗಿಸಿ ಜೈಲಿನ ಕಂಬಿ ಎಣಿಸುವಂತೆ ಮಾಡುತ್ತದೆ. ಆದರೆ ಕಳೆದುಹೋದ ಜೀವನ ಮತ್ತೆ ಕಟ್ಟಿಕೊಳ್ಳಲು, ಜೈಲಿನಲ್ಲೇ ಎಲ್ಲಾ ರೀತಿಯ ಸೌಲಭ್ಯ ಹಾಗೂ ವ್ಯವಸ್ಥೆಗಳನ್ನು ಕಾರಾಗೃಹ ಇಲಾಖೆ ಮಾಡಿಕೊಡುತ್ತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ. ಈ ಬಗ್ಗೆ ಪರಿಪೂರ್ಣ ಹಾಗೂ ಆಸಕ್ತಿದಾಯ ಮಾಹಿತಿಯ ತಿಳಿಯಲು ಮುಂದೆ ಓದಿ.
ತಾಜಾ ತಾಜಾ ತರಕಾರಿ ಬೇಕಾ... ತರಕಾರಿ...
ಅಂದಹಾಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಂದ ಬೆಳೆಸಲಾಗುತ್ತಿರುವ ಸಾವಯವ ತರಕಾರಿಗಳು ಇದೀಗ ಜನರ ಗಮನ ಸೆಳೆಯುತ್ತಿವೆ. ಜೈಲಿನ ಆವರಣದಲ್ಲೇ ಬೆಳೆಯಲಾದ ತಾಜಾ & ರಾಸಾಯನಿಕ ಮುಕ್ತ ತರಕಾರಿಗಳ ಮಾರಾಟಕ್ಕೆ ಕಾರಾಗೃಹ ಇಲಾಖೆಯ ಕಚೇರಿ ಎದುರು ವಿಶೇಷ ಮಳಿಗೆ ತೆರೆಯಲಾಗಿದ್ದು, ಉತ್ತಮ ಸ್ಪಂದನೆ ಇದೀಗ ಸಿಗುತ್ತಿದೆ ಜನರಿಂದ. ಅಧಿಕಾರಿಗಳು, ಸಿಬ್ಬಂದಿ ಸೇರಿ ಹಲವು ಮಂದಿ ಈ ತರಕಾರಿ ಖರೀದಿಸಲು ಆಸಕ್ತಿ ತೋರಿಸಿದ್ದಾರೆ. ಕೈದಿಗಳ ಶ್ರಮದಿಂದ ಬೆಳೆದ ತರಕಾರಿಗಳ ಗುಣಮಟ್ಟ ಮತ್ತು ತಾಜಾತನವೇ ಗ್ರಾಹಕರನ್ನು ಸೆಳೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೈದಿಗಳಿಗೆ ಕೃಷಿ ಚಟುವಟಿಕೆಗಳ ಮೂಲಕ ಉದ್ಯೋಗ ಕೌಶಲ್ಯ ಬೆಳೆಸುವುದರ ಜೊತೆ ಪುನರ್ವಸತಿಗೆ ಉತ್ತೇಜನವನ್ನ ನೀಡುವ ಉದ್ದೇಶದಿಂದ ಈ ಯೋಜನೆಯು ಜಾರಿಯಲ್ಲಿದೆ. ಇದರ ಫಲವಾಗಿ ಆರೋಗ್ಯಕರ ಆಹಾರ ಉತ್ಪಾದನೆಯೊಂದಿಗೆ ಕೈದಿಗಳಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆ ಹೆಚ್ಚಿಸಲು ಸಹಕಾರಿಯಾಗುತ್ತಿದೆ. ಕಾರಾಗೃಹ ಇಲಾಖೆ ಡಿಜಿ ಅಲೋಕ್ ಕುಮಾರ್ ಅವರ ಈ ವಿನೂತನ ಪ್ರಯತ್ನಕ್ಕೆ ಈಗ ವ್ಯಾಪಕ ಶ್ಲಾಘನೆಯೂ ವ್ಯಕ್ತವಾಗುತ್ತಿದೆ. ಕೈದಿಗಳಲ್ಲಿರುವ ಅಪರಾಧಿ ಮನೋಭಾವನೆ ದೂರ ಮಾಡಿ, ಅವರಲ್ಲಿ ಸೃಜನಶೀಲತೆ ಹಾಗೂ ಕಾಯಕ ನಿಷ್ಠೆಯನ್ನು ಮೂಡಿಸುವಲ್ಲಿ ಈ ಯೋಜನೆ ಯಶಸ್ವಿಯಾಗಿದೆ.
ಗೃಹೋಪಯೋಗಿ ವಸ್ತುಗಳೂ ಲಭ್ಯ ಇದೆ!
ಕೈದಿಗಳು ಹೀಗೆ ಬೆಳೆಸುತ್ತಿರುವ ಕೃಷಿ ಉತ್ಪನ್ನಗಳನ್ನು ಕಾರಾಗೃಹ ಇಲಾಖೆ ಸಿಬ್ಬಂದಿಗಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಈ ತರಕಾರಿಗಳನ್ನು ಸಾರ್ವಜನಿಕ ಸಂತೆ ಹಾಗೂ ಮಾರುಕಟ್ಟೆಗಳಲ್ಲೂ ಮಾರಾಟ ಮಾಡಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂಬ ಮಾಹಿತಿಯು ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಕೇವಲ ತರಕಾರಿ ಅಲ್ಲದೆ ಗೃಹೋಪಯೋಗಿ ವಸ್ತುಗಳೂ ಲಭ್ಯವಿದ್ದು, ಜೈಲಿನ ಕೈದಿಗಳು ಕೇವಲ ಕೃಷಿಯಷ್ಟೇ ಅಲ್ಲದೆ ಇಲಾಖೆಯ ಮಾರ್ಗದರ್ಶನದಲ್ಲಿ ವಿವಿಧ ಕೌಶಲ್ಯಗಳನ್ನು ಕಲಿಯುತ್ತಿದ್ದಾರೆ. ಉತ್ತಮ ಗುಣಮಟ್ಟದ ಬಟ್ಟೆಗಳು, ಗೃಹೋಪಯೋಗಿ ವಸ್ತುಗಳು ಹಾಗೂ ಕರಕುಶಲ ವಸ್ತುಗಳು ಕೂಡ ಅಲ್ಲಿ ಸಿದ್ಧವಾಗುತ್ತಿವೆ.
ಸಮಾಜದ ಮುಖ್ಯವಾಹಿನಿಗೆ ಮರಳುವ ವಿಶ್ವಾಸ
ಕೈದಿಗಳು ತಯಾರಿಸಿದ ಈ ಎಲ್ಲಾ ವಸ್ತುಗಳಿಗು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಕಾರಾಗೃಹವನ್ನ ಕೇವಲ ಶಿಕ್ಷೆ ನೀಡುವ ಸ್ಥಳವಾಗಿ ನೋಡುವ ಬದಲು, ವ್ಯಕ್ತಿತ್ವ ಪರಿವರ್ತನೆ ಮತ್ತು ಕೌಶಲ್ಯಾಭಿವೃದ್ಧಿಯ ಕೇಂದ್ರವನ್ನಾಗಿ ರೂಪಿಸುವ ಪ್ರಯತ್ನ ಯಶಸ್ವಿಯಾಗುತ್ತಿದೆ. ಇಲ್ಲಿ ಕೈದಿಗಳಿಗೆ ವಿವಿಧ ಉದ್ಯೋಗಾಧಾರಿತ ಚಟುವಟಿಕೆಗಳಲ್ಲಿ ತರಬೇತಿ ನೀಡುವ ಮೂಲಕ ಬಿಡುಗಡೆಯಾದ ಬಳಿಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಯೋಜನೆಯಿಂದ ಕೈದಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುವುದರ ಜೊತೆಗೆ ಸಮಾಜದ ಮುಖ್ಯವಾಹಿನಿಗೆ ಮರಳುವ ವಿಶ್ವಾಸವೂ ಮೂಡುತ್ತಿದೆ. ಕಾರಾಗೃಹ ಸಿಬ್ಬಂದಿ ಮತ್ತು ಕೈದಿಗಳ ಸಮನ್ವಯದ ಕಾರ್ಯವು ಸಮಾಜಮುಖಿ ಪುನರ್ವಸತಿಗೆ ಉತ್ತಮ ಉದಾಹರಣೆಯಾಗಿ ಗುರುತಿಸಿಕೊಂಡಿದೆ.