PM Modi: ಮೋದಿ ಸರ್ಕಾರದ ಮಾಸ್ಟರ್ ಪ್ಲಾನ್, 6ನೇ ತಲೆಮಾರಿನ ಯುದ್ಧ ವಿಮಾನ ಪಡೆಯಲು ಭರ್ಜರಿ ತಯಾರಿ!

bengaluru diaries | August 9, 2026 - 11:41 am

ಭಾರತೀಯ ಸೇನೆ ಜಗತ್ತಿನ ಟಾಪ್-3 ಸೈನ್ಯಗಳ ಪೈಕಿ ಸ್ಥಾನ ಪಡೆಯುತ್ತದೆ, ಅಮೆರಿಕ & ಚೀನಾ ಬಿಟ್ಟರೆ ಪ್ರಪಂಚವೇ ನಡುಗುವ ಸೇನೆಗಳ ಪೈಕಿ ಭಾರತ ಕೂಡ ಒಂದಾಗಿದೆ. ಭಾರತದ ಶತ್ರು ದೇಶಗಳಿಗೆ ನಮ್ಮ ದೇಶದ ಅಸ್ತ್ರಗಳು ಹಾಗೂ ಸೇನೆಯ ಗಾತ್ರ ಕಂಡರೆ ಕನಸಿನಲ್ಲೂ ಭಯ ಎದುರಾಗುತ್ತೆ. ಹೀಗಿದ್ದಾಗಲೇ, ಭಾರತವು ತನ್ನ ಸೈನ್ಯದ ಬಲ ಇನ್ನಷ್ಟು ಹೆಚ್ಚಿಸಲು & ಭವಿಷ್ಯದ ದೃಷ್ಟಿಯಿಂದ ಹೊಸ ತಲೆಮಾರಿನ ಫೈಟರ್ ಜೆಟ್‌ಗಳ ಅಭಿವೃದ್ಧಿ ಮಾಡಲು ಮುಂದಾಗಿದೆ. ಈ ಮೂಲಕ ಭಾರತೀಯ ವಾಯುಪಡೆ ಭರ್ಜರಿ ಅಸ್ತ್ರ ಪಡೆಯಲು ಸಜ್ಜಾಗಿ, ಈ ಪೈಕಿ ಆಕಾಶದಲ್ಲಿ ಹಾರಾಡಿದರೂ ಪತ್ತೆಯೇ ಆಗದ ಸ್ಟೆಲ್ತ್ ಬಾಂಬರ್‌ಗಳ ಉತ್ಪಾದನೆಗೆ ಮೋದಿ ಅವರ ಸರ್ಕಾರ ಈಗ ಮಾಸ್ಟರ್ ಪ್ಲಾನ್ ಮಾಡಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಮುಂದೆ ಓದಿ...

ಹೌದು, ಭವಿಷ್ಯದ ಯುದ್ಧ ವಿಮಾನ ತಂತ್ರಜ್ಞಾನದಲ್ಲಿ ಮತ್ತಷ್ಟು ಬಲವಾಗಿ ಬೇರೂರಲು ಭಾರತ ಇದೀಗ ಫ್ರಾನ್ಸ್ ನೇತೃತ್ವದ ಮಹತ್ವದ ಯೋಜನೆಗೆ ಸೇರ್ಪಡೆಯಾಗಲು ಮುಂದಾಗಿದೆ. ಎಫ್‌ಸಿಎಎಸ್ (FCAS) ಯೋಜನೆಯಲ್ಲಿ ಭಾಗಿಯಾಗಲು ಈಗ ಭಾರತ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅತ್ತ ಬ್ರಿಟನ್, ಇಟಲಿ & ಜಪಾನ್ ಜಂಟಿಯಾಗಿ ಅಭಿವೃದ್ಧಿ ಮಾಡುತ್ತಿರುವ ಜಿಸಿಎಪಿ (GCAP)ಗೆ ಬದಲಾಗಿ ಫ್ರಾನ್ಸ್ ಜೊತೆಗೆ ಮಹತ್ವದ ಯುದ್ಧ ವಿಮಾನಗಳನ್ನ ಅಭಿವೃದ್ಧಿಪಡಿಸಲು ಮುಂದಾಗಿದೆ. ಭಾರತೀಯ ರಕ್ಷಣಾ ಸಚಿವಾಲಯ ಸಂಸತ್ತಿನ ರಕ್ಷಣಾ ಸ್ಥಾಯಿ ಸಮಿತಿಗೆ ಸಲ್ಲಿಕೆ ಮಾಡಿರುವ ವರದಿ ಇದೀಗ ಇಡೀ ಜಗತ್ತಿನ ಗಮನ ಸೆಳೆದಿದೆ. ಈ ಮೂಲಕ ಈಗ ಫ್ರಾನ್ಸ್ ಸರ್ಕಾರ ಮುನ್ನಡೆಸುತ್ತಿರುವ FCAS ಯೋಜನೆಗೆ ಸಮನ್ವಯ ರೀತಿ ಸಹಭಾಗಿ ಆಗಲು ಪ್ರಯತ್ನ ಆರಂಭಿಸಲಾಗಿದೆ. ಇನ್ನು ಈ ಮೂಲಕ, ಭಾರತ 6ನೇ ತಲೆಮಾರಿನ ಯುದ್ಧ ವಿಮಾನ ಯೋಜನೆಗೆ ಯಾವ ಆಯ್ಕೆ ಇಟ್ಟುಕೊಂಡಿದೆ? ಎನ್ನುವ ಪ್ರಶ್ನೆಗೆ ಬಹುತೇಕ ಉತ್ತರ ಸಿಕ್ಕಂತಾಗಿದೆ.


ಭಾರತದ ಎದುರು 2 ಆಯ್ಕೆ ಇದ್ದವು

ಪ್ರಪಂಚ ದಿನದಿಂದ ದಿನಕ್ಕೆ ಹೊಸ, ಹೊಸ ಅಸ್ತ್ರಗಳನ್ನು ಅಭಿವೃದ್ಧಿ ಮಾಡುತ್ತಿದೆ. ಹೀಗಿದ್ದಾಗ ಭಾರತ ಕೂಡ ಭವಿಷ್ಯದ ದೃಷ್ಟಿಯಿಂದ ಸಕಲ ಸಿದ್ಧತೆ ಆರಂಭ ಮಾಡಬೇಕಿತ್ತು, ಇದೇ ಕಾರಣಕ್ಕೆ ಭಾರತ ತನ್ನ ಎದುರು ಈಗ ಒಟ್ಟು 2 ಆಯ್ಕೆಗಳನ್ನು ಹೊಂದಿತ್ತು. ಮೊದಲನೇ ಆಯ್ಕೆಯಾಗಿ ಫ್ರಾನ್ಸ್ ನೇತೃತ್ವ ಹೊಂದಿರುವ ಎಫ್‌ಸಿಎಎಸ್ (FCAS) ಹಾಗೂ 2ನೇ ಆಯ್ಕೆಯಾಗಿ ಬ್ರಿಟನ್, ಇಟಲಿ & ಜಪಾನ್ ಜಂಟಿಯಾಗಿ ಅಭಿವೃದ್ಧಿ ಮಾಡುತ್ತಿರುವ ಜಿಸಿಎಪಿ (GCAP) ಮೇಲೆ ಕೂಡ ಗಮನ ಹರಿಸಲಾಗಿತ್ತು. ಆದರೆ ಇದೀಗ ಫ್ರಾನ್ಸ್ ಜೊತೆಗಿನ ಆಯ್ಕೆಯನ್ನೇ ಭಾರತ ಸೆಲೆಕ್ಟ್ ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ. ಆದರೆ ಈ ಯೋಜನೆ ಇನ್ನೂ ಅಧಿಕೃತವಾಗಿಲ್ಲ, ಇಲ್ಲಿ ಮೊದಲು ರಕ್ಷಣಾ ಸ್ಥಾಯಿ ಸಮಿತಿ ಒಪ್ಪಿಗೆ ಪಡೆದು, ಫ್ರಾನ್ಸ್ ಜೊತೆಗೆ ಇದರ ಬಗ್ಗೆ ಮಾತುಕತೆ ನಡೆಸಿದ ನಂತರ ಅಂತಿಮ ಒಪ್ಪಂದ ಹೊರ ಬೀಳಲಿದೆ. ಹಾಗಾದ್ರೆ ಈ 6ನೇ ತಲೆಮಾರಿನ ಯುದ್ಧ ವಿಮಾನಗಳು ಏಕೆ ಮುಖ್ಯ?? ಮುಂದೆ ಓದಿ.

ವಿಮಾನ ಹಾರುವುದು ಗೊತ್ತೇ ಆಗಲ್ಲ!

ಹೌದು, ಭಾರತ ಈಗಾಗಲೇ 5ನೇ ತಲೆಮಾರಿನ ಸ್ಟೆಲ್ತ್ ಎಂದರೆ ರಡಾರ್‌ಗಳಿಗೂ ಪತ್ತೆಯಾಗದ ಯುದ್ಧ ವಿಮಾನಗಳ ಅಭಿವೃದ್ಧಿಗೆ ಮುಂದಾಗಿದೆ. ಇದರ ಜೊತೆಗೆ ಭವಿಷ್ಯದ ದೃಷ್ಟಿಯಿಂದ ಈಗ, 6ನೇ ತಲೆಮಾರಿನ ಯುದ್ಧ ವಿಮಾನಗಳ ಮೇಲೆಯೂ ಭಾರತದ ಗಮನ ನೆಟ್ಟಿತ್ತು. ಈಗ ಫ್ರಾನ್ಸ್ ನೇತೃತ್ವದ 6ನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನಗಳ ಯೋಜನೆ ಆದ ಎಫ್‌ಸಿಎಎಸ್ ಜೊತೆ ಸೇರಲು ನಿರ್ಧರಿಸಿರುವುದು ಚೀನಾ & ಪಾಕಿಸ್ತಾನದ ಎದೆಯಲ್ಲಿ ಢವಢವ ಶುರು ಮಾಡಿದೆ. ಆಧುನಿಕ ಭಾರತಕ್ಕೆ 6ನೇ ತಲೆಮಾರಿನ ಯುದ್ಧ ವಿಮಾನಗಳು ಅತ್ಯಗತ್ಯ ಎನ್ನುತ್ತಿರುವ ತಜ್ಞರು, ಈ ಯುದ್ಧ ವಿಮಾನಗಳು ಭಾರತೀಯ ವಾಯು ಪ್ರದೇಶ ರಕ್ಷಣೆಗೆ ಮತ್ತಷ್ಟು ಬಲ ತುಂಬಲಿವೆ. ಆದರೆ ಈ ಯೋಜನೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರ ಬೀಳಬೇಕಿದ್ದು, ಆ ಮೂಲಕ ಯೋಜನೆಯ ಮೊತ್ತ & ಇತರ ಪ್ರಮುಖ ಮಾಹಿತಿ ತಿಳಿಯಲಿದೆ.


ಚೀನಾ ವಿರುದ್ಧ ಭಾರತದ ಮಾಸ್ಟರ್ ಪ್ಲಾನ್!

ಭಾರತೀಯ ಸೇನೆಗೆ ಈಗಾಗಲೇ ಹಲವಾರು ಆಧುನಿಕ ಅಸ್ತ್ರಗಳು ಸೇರ್ಪಡೆ ಆಗಿರುವುದು ಸಾಕಷ್ಟು ಬಲ ತುಂಬಿದೆ. ಅಂದಹಾಗೆ ಭಾರತದ ಈ ನಿರ್ಧಾರದ ಹಿಂದೆ, ಚೀನಾ ವೇಗವಾಗಿ ವಿಸ್ತರಿಸುತ್ತಿರುವ ವಾಯು ಸಾಮರ್ಥ್ಯವು ಪ್ರಮುಖ ಕಾರಣ ಎನ್ನಬಹುದು. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಏರ್ ಫೋರ್ಸ್ ಈಗಾಗಲೇ J-20, J-35 ರೀತಿ ಸ್ಟೆಲ್ತ್ ಯುದ್ಧ ವಿಮಾನಗಳನ್ನ ನಿರ್ವಹಿಸುತ್ತಿದೆ. ಜೊತೆಗೆ ಚೀನಾ ಸೇನೆ ಮಾನವ ರಹಿತ ವಾಯು ರಕ್ಷಣಾ ವ್ಯವಸ್ಥೆಗಳು, ದೂರಗಾಮಿ ಶಸ್ತ್ರಾಸ್ತ್ರ, ವಾಯು ಮಾರ್ಗದ ಸೆನ್ಸರ್ಸ್, ಎಲೆಕ್ಟ್ರಾನಿಕ್ ವಾರ್‌ಫೇರ್ ಸಾಮರ್ಥ್ಯ ಒಳಗೊಂಡ ದೊಡ್ಡ ಮಟ್ಟದ ಯುದ್ಧ ವಿಮಾನಗಳ ವ್ಯವಸ್ಥೆಯನ್ನೇ ನಿರ್ಮಿಸುತ್ತಿದೆ. ಇದಕ್ಕೆ ಠಕ್ಕರ್ ಕೊಡಲು ಭಾರತ ಕೂಡ ದೊಡ್ಡ ಮಟ್ಟದ ಯೋಜನೆಗೆ ಮುಂದಾಗಿದೆ.

ಭಾರತದ ಈ ಒಲವು ಯುದ್ಧ ವಿಮಾನಗಳ ತಂತ್ರಜ್ಞಾನಕ್ಕೆ ಸೀಮಿತವಾಗಿಲ್ಲ. ಭಾರತ & ಫ್ರಾನ್ಸ್ ನಡುವೆ ಈಗಾಗಲೇ ರಕ್ಷಣಾ ಕ್ಷೇತ್ರದಲ್ಲಿ ಹಲವು ಒಪ್ಪಂದಗಳು ಏರ್ಪಟ್ಟಿವೆ, ಹೀಗೆ ಈಗಾಗಲೇ 3.25 ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತವು ಹೆಚ್ಚುವರಿಯಾಗಿ ಒಟ್ಟು 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಸ್ತಾವನೆ ಮುಂದಿಟ್ಟಿದೆ. ಹೀಗಿದ್ದಾಗಲೇ, ಮತ್ತೊಂದು ಅಸ್ತ್ರವನ್ನ ಕೂಡ ಭಾರತ ಬತ್ತಳಿಕೆಯಲ್ಲಿ ಇಟ್ಟುಕೊಂಡಿರುವುದು ಗಮನ ಸೆಳೆದಿದೆ. ಜಾಗತಿಕ ಶಕ್ತಿಯಾಗಿ ಹೊರ ಹೊಮ್ಮುತ್ತಾ ಇರುವ ಭಾರತಕ್ಕೆ ಹಾಗೂ ಭಾರತೀಯ ಸೇನೆಗೆ ಈಗ 6ನೇ ತಲೆಮಾರಿನ ಯುದ್ಧ ವಿಮಾನಗಳು ಅತ್ಯಗತ್ಯ. ಅದರಲ್ಲೂ, ಸದಾ ಭಾರತದ ವಿಚಾರದಲ್ಲಿ ವಿಷ ಕಾರು ಪಾಪಿ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಲು ಈ ಆಧುನಿಕ ಅಸ್ತ್ರಗಳು ಇನ್ನಷ್ಟು ಬೇಕಾಗಿವೆ. ಯುರೋಪ್ ಖಂಡದ ಪ್ರಮುಖ ದೇಶವಾದ ಫ್ರಾನ್ಸ್ ಜೊತೆ ಭಾರತ ಈ ಯೋಜನೆಗೆ ಕೈಹಾಕಿರುವುದು ಅಮೆರಿಕ ಸೇರಿದಂತೆ ಜಗತ್ತಿನ ಬಲಿಷ್ಠ ದೇಶಗಳ ಗಮನ ಸೆಳೆದಿದೆ.