PM Modi: ಭಾರತಕ್ಕೆ ರಷ್ಯಾ ಅಧ್ಯಕ್ಷ & ಚೀನಾ ಅಧ್ಯಕ್ಷ ಮಹತ್ವದ ಭೇಟಿ ಗ್ಯಾರಂಟಿ?

bengaluru diaries | July 30, 2026 - 10:14 pm

ಭಾರತ ಇದೀಗ ಜಾಗತಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿದ್ದು, ಜಗತ್ತಿನ ದೊಡ್ಡ ದೊಡ್ಡ ದೇಶಗಳಿಗೂ ನಮ್ಮ ದೇಶ ಅತಿಮುಖ್ಯ. ಅದರಲ್ಲೂ, ಏಷ್ಯಾ ಖಂಡದ ಬಹುದೊಡ್ಡ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಭಾರತ ಮುಂಚೂಣಿಯಲ್ಲಿ ಇದೆ. ಹೀಗಾಗಿ ಆಫ್ರಿಕಾ ಟು ಅಮೆರಿಕ, ರಷ್ಯಾ ಟು ಚೀನಾ ಎಲ್ಲಾ ದೇಶಗಳ ನಾಯಕರು ಭಾರತದ ಜೊತೆಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಲು ನೋಡುತ್ತಾರೆ. ಪರಿಸ್ಥಿತಿ ಹೀಗಿದ್ದಾಗ ಚೀನಾ & ಭಾರತದ ನಡುವೆ ಗಡಿ ವಿವಾದ ಪದೇ ಪದೇ ಭುಗಿಲೇಳುತ್ತಿದ್ದು, ಎರಡೂ ದೇಶಗಳ ಸಂಬಂಧ ಹಳಸಿ ಹೋಗುತ್ತಾ? ಎಂಬ ಪ್ರಶ್ನೆಗಳ ನಡುವೆ ಭಾರತಕ್ಕೆ ರಷ್ಯಾ ಅಧ್ಯಕ್ಷ & ಚೀನಾ ಅಧ್ಯಕ್ಷ ಮಹತ್ವದ ಭೇಟಿ ಗ್ಯಾರಂಟಿ?

ಹೌದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2026 ಸೆಪ್ಟೆಂಬರ್ 12 & 13ಕ್ಕೆ ನಡೆಯುವ ಮಹತ್ವದ ಬ್ರಿಕ್ಸ್ ಶೃಂಗಸಭೆಗೆ ಹಾಜರಾಗಲು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ. ಉನ್ನತ ಮಟ್ಟದ ಭೇಟಿ ಹಿನ್ನೆಲೆ ಭಾರತ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ, ಹೀಗಾಗಿ ಭಾರಿ ಕುತೂಹಲ ಕೆರಳಿದೆ. ಎರಡೂ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಮಟ್ಟದಲ್ಲಿ ನಿರಂತರ ಸಮಾಲೋಚನೆ ಸಭೆ ನಡೆಯುತ್ತಾ ಇವೆ ಎನ್ನಲಾಗಿದೆ. ಇಂತಹ ಸಮಯದಲ್ಲೇ ಭಾರತದ ವಿದೇಶಾಂಗ ಕಾರ್ಯದರ್ಶಿಗಳಾದ ವಿಕ್ರಂ ಮಿಸ್ರಿ ಅವರು ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಹಲವು ಮಹತ್ವದ ಸಭೆಗಳ ನಡೆಸಿದ್ದಾರೆ. ಈ ಮೂಲಕ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಭಾರತಕ್ಕೆ ಬಂದು ಮಹತ್ವದ ಸಭೆಯಲ್ಲಿ ಭಾಗಿ ಆಗುವುದು ಬಹುತೇಕ ಗ್ಯಾರಂಟಿ ಆಗುತ್ತಿದೆ. ಇನ್ನೂ ಇದೇ ಕಾರಣಕ್ಕೆ ಇಡೀ ಜಗತ್ತಿನ ಕಣ್ಣು ಇದೀಗ ಭಾರತದ ಮೇಲೆ ನೆಟ್ಟಿದೆ. 


ಭಾರತ & ಚೀನಾ ಗಡಿ ಸಮಸ್ಯೆ

ಗಡಿಯಲ್ಲಿ ಪರಿಸ್ಥಿತಿ ಪದೇ ಪದೇ ಸೂಕ್ಷ್ಮವಾಗುತ್ತಿದೆ ಎಂಬ ಆರೋಪಗಳ ನಡುವೆ ಕಳೆದ ಕೆಲವು ವರ್ಷಗಳಿಂದ ಭಾರತ & ಚೀನಾ ನಿರಂತರ ಮಾತುಕತೆ ಆರಂಭಿಸಿವೆ. ಈ ಮೂಲಕ ಗಡಿ ಸಮಸ್ಯೆ ಇತ್ಯರ್ಥಕ್ಕೆ ಮಹತ್ವದ ಪ್ರಯತ್ನ ಸಾಗಿದೆ. ಕೆಲವು ತಿಂಗಳ ಹಿಂದಷ್ಟೇ ಭಾರತದ ಪ್ರಧಾನಿ ಮೋದಿ ಅವರು ಚೀನಾಗೆ ಭೇಟಿ ನೀಡಿದ್ದರು, ಈ ಭೇಟಿ ಪಾಶ್ಚಿಮಾತ್ಯ ದೇಶಗಳಿಗೆ ಎಚ್ಚರಿಕೆಯ ಗಂಟೆಯಾಗಿತ್ತು. ಹಾಗೇ ಏಷ್ಯಾದ ದೇಶಗಳ ನಡುವಿನ ಒಗ್ಗಟ್ಟು ಜಗತ್ತಿಗೆ ಒಮ್ಮೆ ಮನವರಿಕೆ ಮಾಡಿಕೊಡುವಂತೆ ಇತ್ತು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇದೀಗ ಚೀನಾ ಅಧ್ಯಕ್ಷರು ಖುದ್ದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬುದು ಕುತೂಹಲ ಡಬಲ್ ಮಾಡಿದೆ. ಅದರಲ್ಲೂ ಪಾಶ್ಚಿಮಾತ್ಯ ದೇಶಗಳು ಈ ಬೆಳವಣಿಗೆ ಬಗ್ಗೆ ಕ್ಷಣಕ್ಷಣದ ಮಾಹಿತಿ ಕಲೆಹಾಕುತ್ತಿವೆ.

ಭಾರತದ ಜೊತೆಗೆ ಹಲವು ಒಪ್ಪಂದ?

ಈಗಾಗಲೇ ಭಾರತ ಮತ್ತು ಚೀನಾ ನಾಯಕರ ನಡುವೆ ಹಲವು ಮಾತುಕತೆ ಹಾಗೂ ಒಪ್ಪಂದಗಳು ಆಗಿವೆ. ಇದೇ ಒಪ್ಪಂದಗಳನ್ನ ಸೂಕ್ತವಾಗಿ ಜಾರಿಗೆ ತರುವ ಚರ್ಚೆ ನಡೆಯುತ್ತಿದೆ. ಉಭಯ ದೇಶಗಳ ನಾಯಕರು ಹಿಂದೆ ತಲುಪಿದ್ದ ಪರಸ್ಪರ ಒಪ್ಪಂದಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಬದ್ಧತೆ ಪುನರುಚ್ಚರಿಸಿದ್ದಾರೆ. ಚೀನಾ ಕಮ್ಯುನಿಸ್ಟ್ ಪಕ್ಷದ ಅಂತಾರಾಷ್ಟ್ರೀಯ ವಿಭಾಗದ ಉಪ ಸಚಿವರಾದ ಸನ್ ಹೈಯಾನ್ ಜೊತೆಗೆ, ವಿಕ್ರಂ ಮಿಸ್ರಿ ಅವರು ಮಹತ್ವದ ಚರ್ಚೆ ನಡೆಸಿದ್ದಾರೆ. ಈ ಸಭೆ ವೇಳೆ ಎರಡೂ ರಾಷ್ಟ್ರಗಳು ಭಿನ್ನಾಭಿಪ್ರಾಯವನ್ನು ಸಮರ್ಪಕವಾಗಿ ನಿರ್ವಹಿಸುವುದು & ಉನ್ನತ ಮಟ್ಟದ ರಾಜತಾಂತ್ರಿಕ ಸಂಪರ್ಕ ವಿಸ್ತರಣೆಯು ಸೇರಿ ದ್ವಿಪಕ್ಷೀಯ ಸಂಬಂಧ ಸ್ಥಿರವಾಗಿ ಅಭಿವೃದ್ಧಿಪಡಿಸಿ ಮುಂದೆ ಸಾಗುವ ಬಗ್ಗೆ ಒಮ್ಮತ ವ್ಯಕ್ತವಾಗಿದೆಯಂತೆ. ಇದೇ ಕಾರಣಕ್ಕೆ ಜಿನ್‌ಪಿಂಗ್ ಅವರ ಭಾರತ ಭೇಟಿ ಕೂಡ ಬಹುತೇಕ ಗ್ಯಾರಂಟಿ ಎನ್ನಲಾಗುತ್ತಿದೆ.