PM Modi: ಪ್ರಧಾನಿ ಮೋದಿ ಮಹತ್ವದ ಸಂದೇಶ, ತಪ್ಪಾಗಿ ಮಾತನಾಡಿದ್ದವರ ಬಗ್ಗೆ ಹೇಳಿದ್ದೇನು?

bengaluru diaries | August 1, 2026 - 1:13 pm

ಪ್ರಧಾನಿ ಮೋದಿ ಅವರು ಮತ್ತೊಂದು ಮಹತ್ವದ ಸಂದೇಶ ನೀಡಿದ್ದಾರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಬೃಹತ್ ಹೋರಾಟ ಇಡೀ ಜಗತ್ತಿನಲ್ಲಿ ಸದ್ದು ಮಾಡಿತ್ತು. ಆದರೆ ಈ ಹೋರಾಟದ ಹಿಂದೆ ಭಾರತ ವಿರೋಧಿ ಶಕ್ತಿಗಳ ಕೈವಾಡ ಇದೆ ಎಂಬ ಆರೋಪಗಳ ನಡುವೆ, ಜೆನ್-ಜಿ ಹೋರಾಟದ ಬಗ್ಗೆಯೇ ಹಲವು ಅನುಮಾನ ಮೂಡಿತ್ತು. ಅದ್ರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋರಾಟಗಾರರ ಪೈಕಿ ಕೆಲವರು ಅಸಂವಿಧಾನಿಕ ಪದ ಬಳಸಿ ನಿಂದಿಸಿದ್ದ ಆರೋಪ ಕೇಳಿ ಬಂದಿತ್ತು. ಈ ವಿಡಿಯೋಗಳು ಇದೀಗ ದೇಶಾದ್ಯಂತ ದೊಡ್ಡ ಚರ್ಚೆ ಹುಟ್ಟು ಹಾಕಿದ್ದು, ಪ್ರಧಾನಿ ಮೋದಿ ಅವರ ಬಗ್ಗೆ ತಪ್ಪಾಗಿ ಮಾತನಾಡಿದ್ದವರಿಗೆ ಕಠಿಣವಾದ ಶಿಕ್ಷೆ ಆಗಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಇಂತಹ ಸಮಯದಲ್ಲೇ ಪ್ರಧಾನಿ ಮೋದಿ ಅವರು ಮಹತ್ವದ ಸಂದೇಶ ನೀಡಿದ್ದಾರೆ.

ಹೌದು, ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ನಡೆದಿರುವ ಪ್ರತಿಭಟನೆ ಈಗಲೂ ಚರ್ಚೆಯ ಕೇಂದ್ರಬಿಂದು. ಹೀಗಿದ್ದಾಗ, ಸಿಜೆಪಿ ಪ್ರತಿಭಟನೆಯ ವೇಳೆ ಆನ್‌ಲೈನ್ ಹಾಗೂ ಆಫ್‌ಲೈನ್‌ನಲ್ಲಿ ತಮ್ಮನ್ನ & ದಿವಂಗತ ತಾಯಿ ಅವರ ಬಗ್ಗೆ ಕೂಡ ಕೀಳು ಭಾಷೆಯಲ್ಲಿ ನಿಂದಿಸಿರುವ ಯುವ ಸಮೂಹವನ್ನು ತಾವು ಸಂಪೂರ್ಣವಾಗಿ ಕ್ಷಮಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಈ ಸಂದೇಶ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ಜೊತೆಗೆ, ಪ್ರಧಾನಿ ಮೋದಿ ಅವರ ಈ ಗುಣದ ಬಗ್ಗೆ ಜನ ಕೊಂಡಾಡುತ್ತಿದ್ದಾರೆ. ಶುಕ್ರವಾರ ತಡರಾತ್ರಿ ಇನ್‌ಸ್ಟಾಗ್ರಾಂನಲ್ಲಿ ಹೊಸ ರೀಲ್ಸ್ ವಿಡಿಯೋ ಪೋಸ್ಟ್ ಮಾಡಿದ ಪ್ರಧಾನಿ ಅವರು, ಭಾವನಾತ್ಮಕ ಸಂದೇಶವನ್ನು ದೇಶದ ಪ್ರಜೆಗಳಿಗೆ ನೀಡಿದ್ದಾರೆ.


ಪ್ರಧಾನಿ ಮೋದಿ ಅವರು ಹೇಳಿದ್ದೇನು?

ಅಷ್ಟಕ್ಕೂ ದೆಹಲಿ ಜಂತರ್ ಮಂತರ್ನಲ್ಲಿ ಕೆಲ ಮಕ್ಕಳು ಕೆಟ್ಟ ಮಾತುಗಳ ಆಡಿದರು. ಅದು ನನಗೆ ಮಾತ್ರವಲ್ಲ ಇಹಲೋಕ ತ್ಯಜಿಸಿದ ನನ್ನ ತಾಯಿಯನ್ನೂ ನಿಂದಿಸುವಂತೆ ಇತ್ತು. ಈ ಘಟನೆ ಅತ್ಯಂತ ನೋವಿನ ಸಂಗತಿ ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ವಯಸ್ಸಿಗೆ ಸಹಜವಾಗಿ ಬಾಲ್ಯದಲ್ಲಿ, ಯೌವನದಲ್ಲಿ ತಪ್ಪು ಸಂಭವಿಸುತ್ತವೆ. ಆದರೆ ಆ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ಕೂಡ ಇರುತ್ತದೆ. ನಮ್ಮ ದೇಶದ ಯುವತಿಯರು ಇಂತಹ ಭಾಷೆ ಬಳಸಿದ್ದು ಕಂಡು ಬಂದಾಗ ತಮಗೆ ಸಾಂಸ್ಕೃತಿಕ ಆಘಾತವಾಯಿತು ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೇ ತಪ್ಪು ಮಾಡಿದ್ದ ಮಕ್ಕಳನ್ನು ಕ್ಷಮಿಸುವ ಮೂಲಕ ಈ ವಿಚಾರವನ್ನ ಅಂತ್ಯ ಮಾಡಲು ಪ್ರಧಾನಿ ಮೋದಿ ಅವರು ಮುಂದಾಗಿರುವುದು ಭಾರತೀಯ ಪ್ರಜೆಗಳಿಗೆ ಹೆಮ್ಮೆ ಮೂಡಿಸಿದೆ.

ಹಾಗೇ ತಮ್ಮ ಸಂದೇಶದಲ್ಲಿ ಪ್ರಧಾನಿ ಮೋದಿ ಅವರು, ನಾವೆಲ್ಲರೂ ತಪ್ಪುಗಳಿಂದ ಪಾಠವನ್ನು ಕಲಿಯಬೇಕು. ಈ ಮಕ್ಕಳು ಕೂಡ ನಮ್ಮವರೇ ಆಗಿದ್ದು ಅವರನ್ನ ಶಿಕ್ಷಿಸುವುದಕ್ಕಿಂತ ಸೂಕ್ತ ಮಾರ್ಗದಲ್ಲಿ ನಡೆಸುವುದು ನಮ್ಮ ಜವಾಬ್ದಾರಿ. ನಾನು ಅವರೆಲ್ಲರನ್ನೂ ಕ್ಷಮಿಸುತ್ತೇನೆ. ಬನ್ನಿ, ಎಲ್ಲರೂ ಭಿನ್ನಾಭಿಪ್ರಾಯ ಮರೆತು ಒಟ್ಟಾಗಿ ದೇಶ ಕಟ್ಟೋಣ ಎಂದು ಯುವ ಸಮೂಹಕ್ಕೆ ಕರೆ ನೀಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು. ಇನ್ನು ಇದೇ ಜಂತರ್ ಮಂತರ್ ಹೋರಾಟದ ನಂತರ, ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನಿ ಅವರು ರಾಜೀನಾಮೆ ನೀಡಿದ್ದರು.

ಪ್ರಧಾನಿ ಮೋದಿ ಸಂದೇಶಕ್ಕೆ ಭಾರಿ ಬೆಂಬಲ

ಹಾಗೇ ವಿದ್ಯಾರ್ಥಿಗಳ ಹೋರಾಟದ ಹಿಂದೆ ರಾಜಕೀಯ ಪಿತೂರಿ ಇದೆ ಎನ್ನುವ ಆರೋಪ ಕೇಳಿ ಬಂದಿತ್ತು, ಇಷ್ಟೆಲ್ಲದರ ನಡುವೆ ದೇಶದ ಪ್ರಧಾನಿ ಅವರ ಬಗ್ಗೆ ಕೂಡ ಕೆಲವು ಪ್ರತಿಭಟನಾಕಾರರು ಜಂತರ್ ಮಂತರ್‌ನ ಹೋರಾಟದಲ್ಲಿ ಅವಾಚ್ಯ ಪದ ಬಳಕೆ ಮಾಡಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಅಂತಹವರ ವಿರುದ್ಧ ಕ್ರಮಕ್ಕೂ ಭಾರತೀಯರು ಆಗ್ರಹಿಸಿದ್ದರು. ಆದರೆ ಇದೀಗ ತಪ್ಪು ಮಾಡಿದ್ದವರನ್ನು ಕ್ಷಮಿಸಿರುವುದಾಗಿ ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೋದಿ ಅವರ ಸಂದೇಶಕ್ಕೆ ವ್ಯಾಪಕ ಬೆಂಬಲ ಇದೀಗ ವ್ಯಕ್ತವಾಗಿದ್ದು, ಇದೇ ವಿಡಿಯೋ ಸುಮಾರು 11 ಮಿಲಿಯನ್‌ಗೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.