ರಾಷ್ಟ್ರ ರಾಜಕಾರಣ ಅಂತಾ ಬಂದ್ರೆ ಅಲ್ಲಿ ಒನ್ ಆಂಡ್ ಓನ್ಲಿ ಬಿಜೆಪಿ ಹವಾ ಎನ್ನಬಹುದು, ಯಾಕಂದ್ರೆ ಈಗ ಕೇಸರಿ ಪಕ್ಷದ ಬಾವುಟ ಭಾರತದ ಬಹುತೇಕ ರಾಜ್ಯಗಳಲ್ಲಿ ಹಾರಾಡುತ್ತಿದೆ. ಹಲವು ರಾಜ್ಯಗಳಲ್ಲಿ ಅಧಿಕಾರವನ್ನು ಹಿಡಿದಿರುವ ಬಿಜೆಪಿ ಪಕ್ಷ ಕೇಂದ್ರದಲ್ಲಿ ಕೂಡ ಪ್ರಬಲವಾಗಿದೆ. ಹೀಗಿದ್ದಾಗ ಸಾಲು ಸಾಲಾಗಿ ವಿರೋಧ ಪಕ್ಷಗಳು ಮತ್ತು ವಿರೋಧ ಪಕ್ಷಗಳ ಸಂಸದರು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಸಾಥ್ ಕೊಡುತ್ತಿದ್ದಾರೆ. ಇಂತಹ ಸಮಯದಲ್ಲೇ ಹಲವು ಮಹತ್ವದ ಮಸೂದೆಗಳನ್ನು ಮಂಡನೆ ಮಾಡಲು ಬಿಜೆಪಿ ನೇತೃತ್ವದ ಎನ್‌ಡಿಎ ಇದೀಗ ಸಜ್ಜಾಗಿದೆ. ಈ ಹೊತ್ತಲ್ಲೇ ಮಹತ್ವದ ಮೀಟಿಂಗ್ ಒಂದನ್ನ ಮಾಡಿರುವ ಪ್ರಧಾನಿ ಮೋದಿ ಅವರು, ಈ ಮೂಲಕ ವಿರೋಧ ಪಕ್ಷಗಳಿಗೆ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ಏನದು? ಬನ್ನಿ ತಿಳಿಯೋಣ...
ರಾಜಧಾನಿ ನವದೆಹಲಿಯಲ್ಲಿ ನಡೆದ ವಿಶೇಷ ಉಪಹಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಇತ್ತೀಚೆಗೆ ಎನ್‌ಡಿಎ ಸೇರಿದ ಬಂಡಾಯ ಸಂಸದರಿಗೆ ಆತ್ಮವಿಶ್ವಾಸ ತುಂಬುವ ಸಂದೇಶವನ್ನ ಈಗ ನೀಡಿದ್ದಾರೆ. ಹೀಗಿದ್ದಾಗಲೇ, ಟೀಕೆಗಳು ಅಥವಾ ಅನರ್ಹತೆ ಆತಂಕದ ಬಗ್ಗೆ ಯಾವುದೇ ಚಿಂತೆ ಮಾಡಬೇಕಿಲ್ಲ ಎಂದು ಕೂಡ ಪ್ರಧಾನಿ ಮೋದಿ ಅವರು ಧೈರ್ಯ ತುಂಬಿದ್ದಾರೆ. ನಿಮ್ಮ ಬಗ್ಗೆ ಏನೇ ಮಾತನಾಡಿದರೂ ಆತಂಕ ಬೇಡ, ನಾನು ನಿಮ್ಮ ಜೊತೆ ಇದ್ದೇನೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಈ ಸಭೆಯ ಬಗ್ಗೆ ಉನ್ನತ ಮೂಲಗಳು ಮಾಹಿತಿ ನೀಡಿವೆ, ಈ ಮೂಲಕ ವಿರೋಧ ಪಕ್ಷಗಳಿಂದ ರೆಬೆಲ್ ಆಗಿ ಹೊರಗಡೆ ಬಂದಿರುವ ಸಂಸದರ ಬೆನ್ನಿಗೆ ಹೊಸ ಬಲ ಬಂದಂತೆಯೂ ಆಗಿದೆ. ಹಾಗಿದ್ರೆ ಒಟ್ಟು ಎಷ್ಟು ಸಂಸದರು ಈ ವಿಶೇಷ ಸಭೆಯಲ್ಲಿ ಭಾಗವಹಿಸಿದ್ದರು? ಮಾಹಿತಿ ಇಲ್ಲಿದೆ ಮುಂದೆ ಓದಿ.
ವಿಶೇಷ ಸಭೆಯಲ್ಲಿ 45 ಸಂಸದರು ಭಾಗಿ
ಪ್ರಧಾನಿ ಮೋದಿ ಅವರ ಜೊತೆಗೆ ನಡೆದ ಈ ಸ್ಪೆಷಲ್ ಮೀಟಿಂಗ್‌ನಲ್ಲಿ ಒಟ್ಟು 45 ಸಂಸದರು ಹಾಜರು ಇದ್ದರು ಎನ್ನಲಾಗಿದೆ. ಈ ಪೈಕಿ ಎನ್‌ಸಿಪಿಐಗೆ ಸೇರ್ಪಡೆ ಆದ 20 ಟಿಎಂಸಿ ಬಂಡಾಯ ಸಂಸದರು ಸೇರಿದಂತೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಆಗಿರುವ ಯುಬಿಟಿ ತೊರೆದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆ ಆಗಿದ್ದ ಒಟ್ಟು 7 ಸಂಸದರು, ಎನ್‌ಪಿಪಿ 20 ಸಂಸದರು & ಅಜಿತ್ ಪವಾರ್ ಬಣದ 2 ಎನ್‌ಸಿಪಿ ಸಂಸದರು ಉಪಸ್ಥಿತರಿದ್ದರು ಎಂಬ ಮಾಹಿತಿ ಸಿಕ್ಕಿದೆ. ಅಂದಹಾಗೆ ಪ್ರಧಾನಿ ಮೋದಿ ಅವರು ಭಾಗವಹಿಸಿದ್ದ ಈ ವಿಶೇಷ ಸಭೆಯ ಉದ್ದೇಶವೆಂದರೆ, ಸಂಸತ್ತಿನ ಮಳೆಗಾಲ ಅಧಿವೇಶನದ ನಡುವೆಯೇ ವಿವಿಧ ಪಕ್ಷಗಳಿಂದ ಬೇರ್ಪಟ್ಟು ಎನ್‌ಡಿಎ ಬೆಂಬಲಕ್ಕೆ ಬಂದಿರುವ ಸಂಸದರನ್ನು ಅಧಿಕೃತವಾಗಿ ಸ್ವಾಗತಿಸುವ & ಮೈತ್ರಿಕೂಟದಲ್ಲಿ ಅವರ ಪಾತ್ರವನ್ನ ಬಲಪಡಿಸುವ ಉದ್ದೇಶದಿಂದ ಈ ಉಪಹಾರ ಸಭೆಯನ್ನ ಆಯೋಜಿಸಲಾಗಿತ್ತು.
ನೇರ ಜನಸಂಪರ್ಕ ಹೆಚ್ಚಿಸಿಕೊಳ್ಳಲು ಸಲಹೆ
ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಈಗಾಗಲೇ ರಾಜ್ಯಸಭೆಯಲ್ಲಿ ಭಾರಿ ಬೆಂಬಲ ಇದೆ, ಆದರೆ ಲೋಕಸಭೆ ಅಖಾಡದಲ್ಲಿ ಮತ್ತಷ್ಟು ಬಲ ಬೇಕಾಗಿದೆ. ಹೀಗಿದ್ದಾಗ ಪಶ್ಚಿಮ ಬಂಗಾಳದ ಸಂಸದರ ಬೆಂಬಲ ಅತ್ಯಂತ ಅಗತ್ಯ ಎನ್ನಬಹುದು. ಇದೇ ಕಾರಣಕ್ಕೆ ಈ ವಿಶೇಷ ಸಭೆಯಲ್ಲಿ ಪಶ್ಚಿಮ ಬಂಗಾಳದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಜನರ ಜೊತೆಗೆ ನೇರವಾಗಿ ಸಂಪರ್ಕವನ್ನ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಆ ಮೂಲಕ ಟಿಎಂಸಿ ಸಂಸದರ ಬಗ್ಗೆ ಜನರಿಗೆ ಅಥವಾ ಮತದಾರರಿಗೆ ಇನ್ನಷ್ಟು ನಂಬಿಕೆ ಬರಲು ಸಾಧ್ಯ. ಪಕ್ಷದ ಹೊರತು ವ್ಯಕ್ತಿ ಮುಖ್ಯ, ಜನನಾಯಕ ಮುಖ್ಯ ಎಂಬ ಅಭಿಪ್ರಾಯ ಮೂಡಲು ಸಾಧ್ಯ ಎಂಬುದು ಈ ಸಲಹೆಯ ಉದ್ದೇಶ ಆಗಿರಬಹುದು. ಒಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಮೂಲಕ ಮತ್ತೊಮ್ಮೆ ವಿಪಕ್ಷಗಳಿಗೆ ಶಾಕ್ ಕೊಟ್ಟಿದ್ದು, ಮುಂದಿನ ಗೆಲುವಿಗೆ ರಣಕಹಳೆ ಮೊಳಗಿಸಿದ್ದಾರೆ.