Priyank Kharge: ಪ್ರಿಯಾಂಕ್ ಖರ್ಗೆ ವಿರುದ್ಧ ಅಹಿಂದ ಅಸ್ತ್ರ ಪ್ರಯೋಗಕ್ಕೆ ಬಿಜೆಪಿ ಸಿದ್ಧತೆ!

bengaluru diaries | July 16, 2026 - 10:29 pm
ಕರ್ನಾಟಕದಲ್ಲಿ ಬರ ಎದುರಾಗಿದ್ದು, ಮಳೆ ಇಲ್ಲದೆ & ಬೆಳೆ ಬೆಳೆಯಲು ಆಗದೆ ಕನಿಷ್ಠ ಕುಡಿಯುವ ನೀರಿಗೂ ಈಗ ಜನರು ಒದ್ದಾಡುವ ಪರಿಸ್ಥಿತಿ ಇದೆ. ಇಂತಹ ಸಮಯದಲ್ಲಿ ರಾಜ್ಯ ರಾಜಕೀಯದಲ್ಲಿ ಹಲವು ತಲ್ಲಣ ಏರ್ಪಟ್ಟಿದ್ದು, ಇದೇ ಹೊತ್ತಿಗೆ ಸರಿಯಾಗಿ ಮುಂಗಾರು ಅಧಿವೇಶನ ಕೂಡ ಶುರುವಾಗಲಿದೆ. ಹೀಗಿದ್ದಾಗ ಕಾಂಗ್ರೆಸ್ ನಾಯಕರ ವಿರುದ್ಧ ಹೊಸ ಹೊಸ ಅಸ್ತ್ರಗಳನ್ನು ಪ್ರಯೋಗ ಮಾಡಲು ಬಿಜೆಪಿ ನಾಯಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ, ಕಳೆದ ಕೆಲವು ದಿನಗಳಿಂದ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ನಾಯಕರ ನಡುವೆ ಭಾರಿ ದೊಡ್ಡ ತಿಕ್ಕಾಟವೇ ನಡೆದಿತ್ತು. ಆರ್‌ಎಸ್‌ಎಸ್ ನೋಂದಣಿ ವಿಚಾರದಲ್ಲಿ ದೊಡ್ಡ ಚರ್ಚೆ ಆಗಿತ್ತು, ಹೀಗಿದ್ದಾಗಲೇ ಅಧಿವೇಶನ ಆರಂಭಕ್ಕೂ ಮೊದಲೇ ಪ್ರಿಯಾಂಕ್ ಖರ್ಗೆ ವಿರುದ್ಧ ಅಹಿಂದ ಅಸ್ತ್ರ ಪ್ರಯೋಗಕ್ಕೆ ಬಿಜೆಪಿ ಸಿದ್ಧತೆಯನ್ನ ಮಾಡಿಕೊಂಡಿದೆ.

ಹೌದು, ರಾಜ್ಯ ರಾಜಕೀಯದಲ್ಲಿ ಆರ್‌ಎಸ್‌ಎಸ್ & ಅಹಿಂದ ವಿಚಾರ ಮತ್ತೆ ಚರ್ಚೆಯ ಕೇಂದ್ರ ಬಿಂದುವಾಗುವ ಸಾಧ್ಯತೆ ದಟ್ಟವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಪದೇ ಪದೇ ನೀಡುತ್ತಿದ್ದ ಹೇಳಿಕೆಗಳು ರಾಷ್ಟ್ರ ಮಟ್ಟದಲ್ಲೂ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿತ್ತು. ಇದೀಗ ಖರ್ಗೆ ಅವರ ಹೇಳಿಕೆಗಳಿಗೆಲ್ಲಾ ತಕ್ಕ ಪ್ರತ್ಯುತ್ತರ ನೀಡಲು ವಿಧಾನಮಂಡಲ ಮುಂಗಾರು ಅಧಿವೇಶನವನ್ನೇ ವೇದಿಕೆ ಮಾಡಿಕೊಳ್ಳಲು ಸಜ್ಜಾಗಿದ್ದಾರೆ ಕರ್ನಾಟಕ ಬಿಜೆಪಿ ಲೀಡರ್ಸ್. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಈ ವಿಚಾರ ಪ್ರಮುಖ ಅಸ್ತ್ರವನ್ನಾಗಿ ಬಳಸಲು ಬಿಜೆಪಿ ಸಜ್ಜಾಗಿದೆ ಎನ್ನಲಾಗಿದೆ. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆಗಳು ಸಾಗಿವೆ ಈಗ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಬನ್ನಿ...



ಅಹಿಂದ ಒಕ್ಕೂಟ ನೋಂದಣಿ ಆಗಿದೆಯೇ?
ಅಷ್ಟಕ್ಕೂ ಆರ್‌ಎಸ್‌ಎಸ್ ಒಂದು ನೋಂದಣಿಯಾಗದ ಸಂಸ್ಥೆ, ಎಂದು ಮೇಲಿಂದ ಮೇಲೆ ಪ್ರಶ್ನಿಸುತ್ತಿರುವ ಕರ್ನಾಟಕದ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರನ್ನೇ ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ರಣತಂತ್ರ ರೂಪಿಸಿದೆ. ಆರ್‌ಎಸ್‌ಎಸ್ ನೋಂದಣಿ ಆಗಿಲ್ಲ ಎಂದು ಪ್ರಶ್ನಿಸುವ ಸಚಿವರೇ, ಮೊದಲು ಇದಕ್ಕೆ ಉತ್ತರಿಸಿ. ಕಾಂಗ್ರೆಸ್ ರಾಜಕೀಯದ ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವ ಅಹಿಂದ ಒಕ್ಕೂಟ ನೋಂದಣಿ ಆಗಿದೆಯೇ? ಅದಕ್ಕೆ ಅಧಿಕೃತ ಕಾನೂನಿನ ಚೌಕಟ್ಟು ಇದೆಯೇ? ಎಂದು ಪ್ರಶ್ನಿಸಲು ಕರ್ನಾಟಕ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಈ ಮೂಲಕ ಕರ್ನಾಟಕದ ವಿಧಾನಸಭೆ ಮುಂಗಾರು ಅಧಿವೇಶನದಲ್ಲೂ ಆರ್‌ಎಸ್‌ಎಸ್ ನೋಂದಣಿ ವಿಚಾರ ದೊಡ್ಡ ಚರ್ಚೆಗೆ ದಾರಿ ಮಾಡಿಕೊಡುವ ಸಾಧ್ಯತೆ ಮೂಡಿದೆ.

ಅಧಿವೇಶನದಲ್ಲಿ ಭರ್ಜರಿ ತಿಕ್ಕಾಟ ಗ್ಯಾರಂಟಿ?
ಅಂದಹಾಗೆ ಆರ್‌ಎಸ್‌ಎಸ್ ಈ ದೇಶದ ಅತ್ಯಂತ ದೊಡ್ಡ ಸಾಮಾಜಿಕ ಸಂಘಟನೆಗಳಲ್ಲಿ ಒಂದಾಗಿದೆ, ಎಂದು ಬಿಜೆಪಿಯ ನಾಯಕರು ಪ್ರತಿಪಾದಿಸುತ್ತಿದ್ದಾರೆ. ಹಾಗೇ ಈ ಬಗ್ಗೆ ಪದೇ ಪದೇ ಟೀಕೆ ಮಾಡುವುದು ರಾಜಕೀಯ ಲಾಭಕ್ಕಾಗಿ ಮಾಡ್ತಾ ಇರುವ ಕುತಂತ್ರ ಎಂದು ಕೂಡ ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಕರ್ನಾಟಕ ವಿಧಾನಸಭೆ ಅಧಿವೇಶನ ಆರಂಭಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ತೀವ್ರ ಕುತೂಹಲ ಮೂಡಿದೆ. ಹಾಗೇ ದೊಡ್ಡ ಮಟ್ಟದಲ್ಲಿ ತಿಕ್ಕಾಟ ನಡೆಯುವುದು ಗ್ಯಾರಂಟಿ ಎಂಬ ಹಿಂಟ್ ಕೂಡ ಇದೀಗ ಸಿಗುತ್ತಿದೆ. ಬಿಜೆಪಿ ನಾಯಕರು ಇದೀಗ ಪ್ರಸ್ತಾಪಿಸಲು ಉದ್ದೇಶಿಸಿರುವ ಪ್ರಶ್ನೆಗಳು & ಕಾಂಗ್ರೆಸ್ ನೀಡಲಿರುವ ಪ್ರತಿಕ್ರಿಯೆ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಈ ವಿಷಯ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕೂಡ ನಾಂದಿ ಹಾಡುವ ಸಾಧ್ಯತೆ ದಟ್ಟವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಪ್ರತಿಪಾದಿಸಿದ್ದಾರೆ.