ವಿದ್ಯಾರ್ಥಿ ಬದುಕಿನಲ್ಲಿ ಪಿಯುಸಿ ಅನ್ನೋದು ಒಂದು ಪ್ರಮುಖ ಘಟ್ಟ, ಏಕೆಂದರೆ ಬದುಕಿನಲ್ಲಿ ಏನು ಆಗಬೇಕು? ಜೀವನದಲ್ಲಿ ಯಾವ ಕೆಲಸ ಹಿಡಿಯಬೇಕು? ಅನ್ನೋದನ್ನ ನಿರ್ಧಾರ ಮಾಡುವುದೇ ಪಿಯುಸಿ. ಇದೇ ಕಾರಣಕ್ಕೆ ತಮ್ಮ ಮಕ್ಕಳು ಉತ್ತಮವಾಗಿ ಪಿಯುಸಿ ಮುಗಿಸಲಿ, ಆ ಮೂಲಕ ಜೀವನದಲ್ಲಿ ಸೆಟಲ್ ಆಗಲಿ ಅಂತಾನೇ ಅಪ್ಪ & ಅಮ್ಮ ಲಕ್ಷ ಲಕ್ಷ ರೂಪಾಯಿ ಹಣ ಖರ್ಚು ಮಾಡಿ ಓದಿಸುತ್ತಾರೆ. ಆದರೆ ದುಡ್ಡು ಇದ್ದವರೇನೋ ಕಾಸು ಖರ್ಚು ಮಾಡಿ, ತಮ್ಮ ತಮ್ಮ ಮಕ್ಕಳಿಗೆ ಪಿಯುಸಿ ಜೊತೆಗೆ ಸಿಇಟಿ ಪರೀಕ್ಷೆಗೆ ಉತ್ತಮ ಕೋಚಿಂಗ್ ಕೊಡಿಸುತ್ತಾರೆ. ಹೀಗಿದ್ದಾಗ, ಬಡವರು ಏನು ಮಾಡಬೇಕು? ಅನ್ನೋ ಚರ್ಚೆಗಳ ನಡುವೆಯೇ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಸಿಇಟಿ ಕೋಚಿಂಗ್, ಕರ್ನಾಟಕ ಸರ್ಕಾರದಿಂದ ಭರ್ಜರಿ ತಯಾರಿ!
ಹೌದು, ಕರ್ನಾಟಕ ರಾಜ್ಯದಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಜ್ಞಾನ ವಿಭಾಗದ ಲಕ್ಷ ಲಕ್ಷ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಅಂದಹಾಗೆ ಉನ್ನತ ಶಿಕ್ಷಣದ ದಾರಿ ಇನ್ನಷ್ಟು ಸುಗಮಗೊಳಿಸುವ ಮಹತ್ವದ ಯೋಜನೆಯನ್ನು ಶಿಕ್ಷಣ ಇಲಾಖೆ ಜಾರಿಗೆ ತರಲು ಮುಂದಾಗಿದೆ. ಇನ್ನು ಮುಂದೆ ಪಿಯುಸಿ ಪಠ್ಯಕ್ರಮದ ಬೋಧನೆಯ ಜೊತೆಗೆ ವೈದ್ಯಕೀಯ, ಇಂಜಿನಿಯರಿಂಗ್, ಕೃಷಿ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅಗತ್ಯವಾಗಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (CET)ಗೆ ಉಚಿತ ತರಬೇತಿಯನ್ನು ಕಾಲೇಜುಗಳ ಆವರಣದಲ್ಲೇ ನೀಡಲು ಸಿದ್ಧತೆ ನಡೆಯುತ್ತಿದೆ.
ಕರ್ನಾಟಕ ಪಿಯುಸಿ ವಿದ್ಯಾರ್ಥಿಗಳಿಗೆ ಜಾಕ್‌ಪಾಟ್
ರಾಜ್ಯ ಶಿಕ್ಷಣ ಇಲಾಖೆ ಸರ್ಕಾರಿ ಕಾಲೇಜುಗಳಲ್ಲೇ ಈ ವಿಶೇಷ ತರಬೇತಿ ನೀಡಲು ಬಿರುಸಿನ ಸಿದ್ಧತೆ ನಡೆಸಿದೆ. ಅಂದಹಾಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕೋಚಿಂಗ್ ನೀಡುವ ಉದ್ದೇಶದಿಂದ ಇಲಾಖೆ ಈಗಾಗಲೇ ಭೌತಶಾಸ್ತ್ರ, ರಸಾಯನಶಾಸ್ತ್ರ & ಗಣಿತ ಸೇರಿ ಜೀವಶಾಸ್ತ್ರ ವಿಷಯಗಳ ಉಪನ್ಯಾಸಕರಿಗೆ ಒಟ್ಟಾರೆ 2 ದಿನಗಳ ಜಿಲ್ಲಾ ಮಟ್ಟದ ಸಂಯೋಜಿತ ಪಠ್ಯಕ್ರಮದ ತರಬೇತಿ ನೀಡಿದೆ. ಈ ತರಬೇತಿ ಪಡೆದ ಉಪನ್ಯಾಸಕರು ಇನ್ಮುಂದೆ ದಿನನಿತ್ಯದ ಪಾಠಗಳ ಬೋಧನೆಯ ಜೊತೆ ಜೊತೆಗೇ ವಿದ್ಯಾರ್ಥಿಗಳನ್ನ ಸ್ಪರ್ಧಾತ್ಮಕ ಸಿಇಟಿ ಪರೀಕ್ಷೆಗೂ ಸಜ್ಜುಗೊಳಿಸಲಿದ್ದಾರೆ. ಆ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಭಾರಿ ದೊಡ್ಡ ಸಹಾಯ ಆಗಲಿದೆ. ಹಾಗೇ ಪೋಷಕರ ಮೇಲೆ ಇದ್ದ ಆರ್ಥಿಕ ಹೊರೆ ಕೂಡ ಕಡಿಮೆ ಆಗುವ ನಿರೀಕ್ಷೆ ಇದೀಗ ಮೂಡಿದೆ.
ಕರ್ನಾಟಕದಲ್ಲಿ ಶಿಕ್ಷಣ ಪಡೆಯುವುದು ಇಡೀ ದೇಶದಲ್ಲೇ ಒಂದು ಪ್ರತಿಷ್ಠೆಯ ವಿಚಾರ, ಏಕೆಂದರೆ ಭಾರತದ ಇತರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಶಿಕ್ಷಣ ಅತ್ಯುತ್ತಮವಾಗಿ ಇದೆ. ಅಲ್ಲದೇ ಗುಣಮಟ್ಟದ ವಿಚಾರಕ್ಕೆ ಬಂದರೂ ನಮ್ಮ ಕರ್ನಾಟಕ ರಾಜ್ಯವೇ ಬೆಸ್ಟ್. ಹೀಗಿದ್ದಾಗ ನಮ್ಮ ರಾಜ್ಯದಲ್ಲಿ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್, ಕೃಷಿ, ಪಶುವೈದ್ಯಕೀಯ, ಫಾರ್ಮಸಿ & ಇತರೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಿಇಟಿ ಪರೀಕ್ಷೆ ಬರೆಯುತ್ತಾರೆ. ಉತ್ತಮ ಅಂಕ ಗಳಿಸಲು ಗುಣಮಟ್ಟದ ತರಬೇತಿ ಅಗತ್ಯವಾಗಿದೆ, ಈವರೆಗೆ ಖಾಸಗಿ ಕೋಚಿಂಗ್ ಸಂಸ್ಥೆಗಳೇ ಪ್ರಮುಖ ಆಯ್ಕೆ ಆಗಿದ್ದವು. ಆದರೆ ಇದೀಗ ಕಾಲ ಬದಲಾಗಲಿದ್ದು, ವಿದ್ಯಾರ್ಥಿಗಳಿಗೆ ಸಂಭ್ರಮ ತರುವ ಸುದ್ದಿ ಸಿಕ್ಕಿದೆ.
ಗ್ರಾಮೀಣ ಪ್ರದೇಶಗಳ ಪ್ರತಿಭಾವಂತರಿಗೆ ಬೆಂಬಲ
ಈ ಕಾರಣವನ್ನೇ ಮುಂದೆ ಇಟ್ಟುಕೊಂಡು ಹಲವು ಸಂಸ್ಥೆಗಳು ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶ ಸಿಗದೇ, ಅವಕಾಶದಿಂದ ವಂಚಿತರಾಗುತ್ತಿದ್ದರು ಎಂಬ ಬೇಸರ ವ್ಯಕ್ತವಾಗಿತ್ತು. ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಇದೆಲ್ಲವನ್ನೂ ಸೂಕ್ತವಾಗಿ ಗಮನಿಸಿ ಇದೀಗ ಅತ್ಯುತ್ತಮ ನಿರ್ಧಾರ ಕೈಗೊಂಡಿದೆ. ಹಾಗೇ ಮತ್ತೊಂದು ಕಡೆ ಶಿಕ್ಷಣ ತಜ್ಞರು ಈ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯದಂತೆ, ಪಿಯುಸಿ ಹಂತದಲ್ಲೇ ಸಿಇಟಿ ಸಿದ್ಧತೆ ಆರಂಭಿಸಿದರೆ ವಿದ್ಯಾರ್ಥಿಗಳಲ್ಲಿ ವಿಷಯಗಳ ಕುರಿತು ಉತ್ತಮ ಹಿಡಿತ ಮೂಡುತ್ತದೆ. ಇನ್ನೂ ವಿಶೇಷ ಎಂದರೆ ಗ್ರಾಮೀಣ ಪ್ರದೇಶಗಳ ಪ್ರತಿಭಾವಂತರಿಗೆ ಭವಿಷ್ಯದಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ದೊಡ್ಡ ಅಕವಾಶ ಕೂಡ ಸೃಷ್ಟಿಯಾಗುವ ನಿರೀಕ್ಷೆ ಇದೆ.