Ram Mandir: ರಾಮ ಮಂದಿರ ದೇಣಿಗೆ ವಿವಾದಕ್ಕೆ ಹೊಸ ತಿರುವು, ಆರೋಪಗಳ ಬಗ್ಗೆ ಚಂಪತ್ ರಾಯ್ ಹೇಳಿದ್ದೇನು?

bengaluru diaries | July 8, 2026 - 10:45 am

ಅಯೋಧ್ಯೆ: ಶತಕೋಟಿ ಹಿಂದೂ ಧರ್ಮಿಯರ ಪಾಲಿನ ಪವಿತ್ರ ಸ್ಥಳ, ಶ್ರೀರಾಮ ಜನ್ಮಭೂಮಿ ಮಂದಿರದ ದೇಣಿಗೆಯ ಹಣ & ಅಮೂಲ್ಯ ವಸ್ತುಗಳ ನಿರ್ವಹಣೆ ಬಗ್ಗೆ ಕೇಳಿ ಬಂದಿರುವ ಆರೋಪಗಳು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಈ ವಿಚಾರವನ್ನೇ ಮುಂದಿಟ್ಟುಕೊಂಡು ಬಿಜೆಪಿ ನಾಯಕರ ವಿರುದ್ಧ ವಿಪಕ್ಷಗಳ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಹಲವರ ವಿರುದ್ಧ ಕ್ರಮಕ್ಕೂ ಸರ್ಕಾರ ಮುಂದಾಗಿದೆ. ಇಂತಹ ಸಮಯದಲ್ಲೇ ದಿಢೀರ್ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮೊದಲ ಬಾರಿಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಕೈಬರಹದ ಪತ್ರದಲ್ಲಿ ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಪ್ರತಿಕ್ರಿಯೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ, ಲೆಟರ್ ಪಬ್ಲಿಷ್ ಮಾಡುವ ಮೂಲಕ ಚಂಪತ್ ರಾಯ್ ಅವರು ತಮ್ಮ ವಿರುದ್ಧದ ಆರೋಪಗಳನ್ನ ತಳ್ಳಿಹಾಕಿದ್ದು ತನಿಖೆ ಪೂರ್ಣಗೊಳ್ಳುವವರೆಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗೇ ಶ್ರೀ ರಾಮ ಮಂದಿರದ ಹುಂಡಿಗಳಲ್ಲಿದ್ದ ದೇಣಿಗೆ ಹಣದ ಎಣಿಕೆ ಹಾಗೂ ಅದರ ನಿರ್ವಹಣೆ ಕುರಿತಾಗಿ ಹಲವು ರೀತಿಯ ಆರೋಪಗಳು ಹರಿದಾಡುತ್ತಿವೆ. ಈ ಪ್ರಕರಣದಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿ ಮಾಡಲಾಗುತ್ತಿರುವ ಆರೋಪಗಳಿಗೆ ಯಾವುದೇ ವಾಸ್ತವಿಕ ಆಧಾರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


ಎಸ್‌ಐಟಿಯ ಪ್ರಾಥಮಿಕ ವರದಿ ಬಗ್ಗೆ

ಅಂದಹಾಗೆ ಶ್ರೀ ರಾಮ ಮಂದಿರದಲ್ಲಿ ಕೋಟಿ ಕೋಟಿ ದೇಣಿಗೆ ಹುಂಡಿ ಹಣ ಮತ್ತು ಚಿನ್ನಾಭರಣ ಕಳವು ಮಾಡಲಾಗಿದೆ ಎಂಬ ಗಂಭೀರ ಆರೋಪಗಳ ಬೆನ್ನಲ್ಲೇ, ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಚಂಪತ್ ರಾಯ್ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಇನ್ನು ಉತ್ತರ ಪ್ರದೇಶ ಸರ್ಕಾರ ರಚನೆ ಮಾಡಿದ್ದ ವಿಶೇಷ ತನಿಖಾ ದಳದ ಪ್ರಾಥಮಿಕ ವರದಿ ಬಗ್ಗೆ ಪ್ರಸ್ತಾಪಿಸಿರುವ ಚಂಪತ್ ರಾಯ್, ಎಸ್‌ಐಟಿಯ ಪ್ರಾಥಮಿಕ ವರದಿಯನ್ನು ಜುಲೈ 6 ರಂದು ನಡೆದ ಟ್ರಸ್ಟ್‌ನ ಮಹಾಸಭೆಗೆ ಮುನ್ನ ಸಲ್ಲಿಕೆ ಮಾಡಲಾಗಿತ್ತು. ಅತ್ಯಂತ ರಹಸ್ಯವಾಗಿ ಇಡಬೇಕಾಗಿದ್ದ ಈ ವರದಿಯನ್ನು ಈಗ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

1991ರಿಂದ ಅಯೋಧ್ಯೆಯಲ್ಲಿ ಸೇವೆ

ಹಾಗೇ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಮ್ಮ ಕೈಬರಹದ ಪತ್ರದಲ್ಲಿ, ಸಂಪೂರ್ಣ ಸತ್ಯ ಶೀಘ್ರದಲ್ಲೇ ಹೊರಬರಲಿದೆ. ಎಸ್‌ಐಟಿ ತನ್ನ ಅಂತಿಮ ವರದಿ ನೀಡಿದ ಬಳಿಕ, ನನ್ನ ವಿರುದ್ಧ ಕೇಳಿಬಂದ ಪ್ರತಿಯೊಂದು ಆರೋಪಕ್ಕೂ ನಾನು ಪಾಯಿಂಟ್ ಬೈ ಪಾಯಿಂಟ್ ಉತ್ತರಿಸುತ್ತೇನೆ, ಎಂದಿದ್ದಾರೆ ಚಂಪತ್ ರಾಯ್ ಅವರು. 1991ರಿಂದ ಅಯೋಧ್ಯೆಯಲ್ಲಿ ವಿವಿಧ ಧಾರ್ಮಿಕ & ಸಂಘಟನಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ ಎಂದಿರುವ ಅವರು, ಸುಮಾರು 45 ವರ್ಷಗಳ ಕಾಲ ಪೂರ್ಣಾವಧಿ ಪ್ರಚಾರಕರಾಗಿ ಸೇವೆ ಸಲ್ಲಿಸಿ ತಮ್ಮ ಜೀವನ & ಕಾರ್ಯವೈಖರಿ ಸದಾ ಪಾರದರ್ಶಕವಾಗಿಯೇ ನಡೆದಿವೆ ಎಂದು ಪ್ರತಿಪಾದಿಸಿದ್ದಾರೆ.