Rocking Star Yash: ಯಶ್ ಸಖತ್ ಹಾಟ್ ಮಗಾ, ಹೆಂಗಿದೆ ನೋಡಿ ಕನ್ನಡಿಗನ ಹವಾ...

bengaluru diaries | July 8, 2026 - 4:19 am
ಕನ್ನಡಿಗ ಯಶ್ ಹವಾ ಹಳ್ಳಿಯಿಂದ ದಿಲ್ಲಿ ತನಕ ಮುಟ್ಟಿದ್ದು ಮಾತ್ರವಲ್ಲ, ಕಲಬುರಗಿ ಟು ಕ್ಯಾಲಿಫೋರ್ನಿಯಾ ತನಕವೂ ಕಿಚ್ಚು ಹೊತ್ತಿಕೊಂಡಿದೆ. ಏನನ್ನೇ ಮಾಡಿದರೂ ತುಂಬಾ ಪರ್ಫೆಕ್ಟ್ ಆಗಿ ಮಾಡುವ, ಸಿನಿಮಾ ನಿರ್ಮಾಣ ವಿಚಾರದಲ್ಲೂ ಸಾಕಷ್ಟು ಮುಂಜಾಗ್ರತೆ ವಹಿಸುವ ನಟ ರಾಕಿಂಗ್ ಸ್ಟಾರ್ ಯಶ್ ಅವರು ಈಗ ಮತ್ತೊಂದು ಧಮಾಖ ಕೊಡಲು ಸಂಪೂರ್ಣ ಸಜ್ಜಾಗಿದ್ದಾರೆ. ಅದರಲ್ಲೂ ಜಗತ್ತಿನ ಮೂಲೆ ಮೂಲೆಗೂ ಹಬ್ಬಿರುವ ಕನ್ನಡಿಗ ಯಶ್ ಅವರ ಅಭಿಮಾನಿಗಳು ಉಸಿರನ್ನು ಬಿಗಿಹಿಡಿದು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿದೆ. ಇದೇ ಸಮಯದಲ್ಲಿ ಮತ್ತೊಂದು ಬಿಗ್ ಸರ್ಪ್ರೈಸ್ ಕೊಟ್ಟಿದ್ದಾರೆ ನಟ ಯಶ್ ಅವರು.

ಹೌದು, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ವರ್ಲ್ಡ್ ಸಿನಿಮಾ 'ಟಾಕ್ಸಿಕ್' ಕುರಿತ ನಿರೀಕ್ಷೆ ಮುಗಿಲು ಮುಟ್ಟಿದೆ. ಇದೀಗ ಚಿತ್ರತಂಡ ಮತ್ತೊಂದು ವಿಶೇಷ ಉಡುಗೊರೆ ಸಿನಿಪ್ರಿಯರಿಗೆ ನೀಡಿದ್ದು, ಅಭಿಮಾನಿಗಳಿಗೆ ಕೂಡ ಭರ್ಜರಿ ಸರ್ಪ್ರೈಸ್ ಕೊಟ್ಟಿದೆ. ಟಾಕ್ಸಿಕ್ ಸಿನಿಮಾದ ಮೊದಲ ಸಾಂಗ್ ಆದ 'ತಬಾಹಿ'ಯ ಸಂಪೂರ್ಣ ವಿಡಿಯೋವನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಇದೀಗ ರಿಲೀಸ್ ಆಗಿರುವ ತಬಾಯಿ ಸಾಂಗ್ ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹೊತ್ತಿಸಿದೆ. ಅದರಲ್ಲೂ ಪಡ್ಡೆ ಹೈಕ್ಳ ಮನಸ್ಸು ಗೆದ್ದಿದೆ ಈ ಹಾಡು. ಬೇರೆಯದ್ದೇ ರೀತಿಯ ಯಶ್ ಅವರನ್ನು ಈ ಹಾಡಿನಲ್ಲಿ ಕಂಡು ಫುಲ್ ಖುಷ್ ಆಗಿದ್ದಾರೆ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು.


ಯಶ್ ಸಖತ್ ಹಾಟ್ ಮಗಾ!
ಅಂದಹಾಗೆ ಮಲಯಾಳಂ ಮೂಲದ ನಿರ್ದೇಶಕಿ ಗೀತು ಮೋಹನ್‌ದಾಸ್ ಡೈರೆಕ್ಷನ್ ಮಾಡಿರುವ ಬಿಗ್ ಬಜೆಟ್ 'ಟಾಕ್ಸಿಕ್' ಸಿನಿಮಾದ ಪ್ರಚಾರ ಭರ್ಜರಿಯಾಗಿ ಸಾಗಿದೆ. ಇದರ ಭಾಗವಾಗಿ ಈ ಹಿಂದೆ ಕೇವಲ ಲಿರಿಕಲ್ ವಿಡಿಯೋವನ್ನ ಮಾತ್ರ ರಿಲೀಸ್ ಮಾಡಲಾಗಿತ್ತು. ಅದು ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಮಿಲಿಯನ್ ಮಿಲಿಯನ್ ವೀವ್ಸ್ ಪಡೆದಿದ್ದು, ಇಂತಹ ಸಮಯದಲ್ಲೇ ತಬಾಹಿ ಸಾಂಗ್‌ನ ಪೂರ್ತಿ ವಿಡಿಯೋ ಇದೀಗ ರಿಲೀಸ್ ಆಗಿ ಹಲ್‌ಚಲ್ ಎಬ್ಬಿಸಿದೆ. ಚಿತ್ರದಲ್ಲಿ ಯಶ್ ಅವರ ಹೊಸ ಅವತಾರವೂ ವಿಶೇಷ ಆಕರ್ಷಣೆಯಾಗಿದೆ. ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಯಶ್, ಆ್ಯಕ್ಷನ್ ಜೊತೆ ಸ್ಟೈಲಿಶ್ ಸ್ಕ್ರೀನ್ ಪ್ರೆಸೆನ್ಸ್‌ನಿಂದ ಅಭಿಮಾನಿಗಳ ಗಮನವನ್ನು ಸೆಳೆದಿದ್ದಾರೆ. ಮತ್ತೊಂದೆಡೆ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರ ಗ್ಲಾಮರಸ್ ಪಾತ್ರವೂ ಹಾಡಿನ ಪ್ರಮುಖ ಆಕರ್ಷಣೆಯಾಗಿದೆ.

ಕನ್ನಡದಲ್ಲಿ ಮಾತ್ರವಲ್ಲ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲೇ ಅತ್ಯಂತ ನಿರೀಕ್ಷಿತ ಸಿನಿಮಾ ಕನ್ನಡದ ಟಾಕ್ಸಿಕ್ ಆಗಿದೆ ಎಂಬುದು ವಿಶೇಷ. ಇಂಗ್ಲಿಷ್ ಮಂದಿ, ಅಂದ್ರೆ ಹಾಲಿವುಡ್ ಕೂಡ ಯಶ್ ಅವರ ಟಾಕ್ಸಿಕ್ ಸಿನಿಮಾಗೆ ಕಾಯುತ್ತಾ ಇದೆ. ಇದೇ ಸಮಯದಲ್ಲಿ ತಬಾಹಿ ಹಾಡಿನ ಮೂಲಕ ಸರ್ಪ್ರೈಸ್ ಕೊಟ್ಟಿದೆ ಟಾಕ್ಸಿಕ್ ಸಿನಿಮಾ ತಂಡ. 'ತಬಾಹಿ' ಹಾಡಿನ ಮತ್ತೊಂದು ವಿಶೇಷತೆ ಏನೆಂದರೆ, ತಬಾಹಿ ಸಾಂಗ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ & ನಟಿ ಕಿಯಾರಾ ನಡುವಿನ ರೊಮ್ಯಾಂಟಿಕ್ ದೃಶ್ಯಗಳು ಹಾಗೂ ಅವರಿಬ್ಬರ ನಡುವಿನ ಸ್ಕ್ರೀನ್ ಮ್ಯಾಚ್ ಫ್ಯಾನ್ಸ್ ಮನಸ್ಸನ್ನು ಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯ ಬಗ್ಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದ್ದು, ಚಿತ್ರದ ಮೇಲೆ ಇನ್ನಷ್ಟು ನಿರೀಕ್ಷೆ ಮೂಡಿದೆ ಕೂಡ.

ವಿಶಾಲ್ ಮಿಶ್ರಾ ಮ್ಯೂಸಿಕ್ ಭರ್ಜರಿ
ಅಂದಹಾಗೆ ಸಂಗೀತ ನಿರ್ದೇಶಕ ಹಾಗೂ ಗಾಯಕ ವಿಶಾಲ್ ಮಿಶ್ರಾ ಈ ಹಾಡಿಗೆ ಮ್ಯೂಸಿಕ್ ಕೊಟ್ಟು ಧ್ವನಿಯಾಗಿದ್ದರೆ, ಇದೇ ಸಮಯದಲ್ಲಿ ಹಾಡಿನ ಕನ್ನಡ ಸಾಹಿತ್ಯವನ್ನು ಯೋಗರಾಜ್ ಭಟ್ ಅವರು ರಚಿಸಿದ್ದು, ಪದ ಗುಚ್ಚ ಹಾಗೂ ಭಾವನಾತ್ಮಕ ಅಭಿವ್ಯಕ್ತಿ ಹಾಡಿನ ಕ್ವಾಲಿಟಿ ಮತ್ತಷ್ಟು ಹೆಚ್ಚಿಸಿದೆ ಎಂದು ಸಂಗೀತ ಪ್ರಿಯರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆವಿಎನ್ ಪ್ರೊಡಕ್ಷನ್ಸ್ & ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ 'ಟಾಕ್ಸಿಕ್' ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಮುಂಚೂಣಿಯಲ್ಲಿ ಇದೆ. ಈಗಾಗಲೇ ಚಿತ್ರದ ಪೋಸ್ಟರ್‌, ಟೀಸರ್ ಹಾಗೂ ಹಾಡುಗಳು ವ್ಯಾಪಕ ಗಮನ ಸೆಳೆದಿವೆ. ಸಿನಿಮಾ ನೋಡಲು ಅಭಿಮಾನಿಗಳು ಕೂಡ ಕಾತುರರಾಗಿ ಕಾಯುತ್ತಾ ಕೂತಿದ್ದಾರೆ.