Russia And Ukraine: ರಷ್ಯಾ ಏಟಿಗೆ ನಲುಗಿದ ಉಕ್ರೇನ್, ಪರಮಾಣು ಅಸ್ತ್ರಗಳ ಬಳಕೆ ಆಗುತ್ತಾ?

bengaluru diaries | July 22, 2026 - 10:54 pm

ರಷ್ಯಾ ಮತ್ತು ಉಕ್ರೇನ್ ಯುದ್ಧದ ಭೀತಿ ಕಾರಣಕ್ಕೆ ಈಗಾಗಲೇ ಯುರೋಪ್ ನೆಲದಲ್ಲಿ ಅಶಾಂತ ವಾತಾವರಣ ನಿರ್ಮಾಣ ಆಗಿದೆ. ಏನು ಮಾಡುವುದು ಎಂಬ ಚಿಂತೆಯಲ್ಲಿ ಇಡೀ ಯುರೋಪ್ ಒಕ್ಕೂಟ ಇದ್ದು, ಯಾವುದೇ ಕಾರಣಕ್ಕೂ ಉಕ್ರೇನ್ ಈ ಯುದ್ಧದಲ್ಲಿ ಸೋಲಬಾರದು ಅಂತಾ ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಬೆಂಬಲಕ್ಕೆ ನಿಂತಿವೆ. ಹೀಗಿದ್ದಾಗ ಇನ್ನೊಂದು ಕಡೆ ರಷ್ಯಾ ಪರವಾಗಿ ಚೀನಾ & ಉತ್ತರ ಕೊರಿಯಾ ಸೇರಿದಂತೆ ಅಮೆರಿಕದ ಶತ್ರು ದೇಶಗಳು ಬೆಂಬಲ ನೀಡುತ್ತಿವೆ. ಇಷ್ಟೆಲ್ಲದರ ನಡುವೆ ಪದೇ ಪದೇ ರಷ್ಯಾ ಮೇಲೆ ಡ್ರೋನ್ ದಾಳಿಯನ್ನ ನಡೆಸುತ್ತಿರುವ ಉಕ್ರೇನ್‌ಗೆ ರಷ್ಯಾ ಈಗ ಪಾಠ ಕಲಿಸಲು ಚಿಂತನೆ ನಡೆಸುತ್ತಿದೆ. ಅದರಲ್ಲೂ ಪರಮಾಣು ಅಸ್ತ್ರದ ಬಳಕೆ ಆಗುತ್ತಾ? ಎಂಬ ಪ್ರಶ್ನೆ ಆತಂಕ ಹೆಚ್ಚಿಸಿದೆ.

ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ಪದೇ ಪದೇ ಉಕ್ರೇನ್ ಬೆನ್ನಿಗೆ ನಿಂತು, ರಷ್ಯಾ ವಿರುದ್ಧ ಬೆಂಬಲ ನೀಡುತ್ತಿರುವ ಕಾರಣಕ್ಕೆ ಇತ್ತೀಚೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಎಚ್ಚರಿಕೆ ನೀಡಿದ್ದಾರೆ. ಅದು ಮಾತ್ರವಲ್ಲ ನಾವು ಪರಮಾಣು ಯುದ್ಧಕ್ಕೆ ಸಿದ್ಧ ಎಂಬ ಸಂದೇಶ ಕೂಡ ರವಾನಿಸಿದ್ದಾರೆ ವ್ಲಾದಿಮಿರ್ ಪುಟಿನ್ ಅವರು. ಇಷ್ಟೆಲ್ಲದರ ನಡುವೆ ಉಕ್ರೇನ್‌ಗೆ ಅಸ್ತ್ರಗಳು ಹಾಗೂ ಅಗತ್ಯ ಸಾಮಾಗ್ರಿ ನೀಡುತ್ತ ಇರುವ ಅಮೆರಿಕ & ಪಾಶ್ಚಿಮಾತ್ಯ ದೇಶಗಳು ರಷ್ಯಾ ತಾಳ್ಮೆ ಪರೀಕ್ಷೆ ಮಾಡುತ್ತಿವೆ. ಯುದ್ಧದಲ್ಲಿ ಪರಮಾಣು ಅಸ್ತ್ರದ ಬಳಕೆ ಆಗಿದ್ದ ಏಕೈಕ ಉದಾಹರಣೆ ಎಂದರೆ 1945ರಲ್ಲಿ ಅಮೆರಿಕ ಜಪಾನ್ ವಿರುದ್ಧ ನಡೆಸಿರುವ ದಾಳಿ. ಆ ನಂತರದ ದಿನಗಳಲ್ಲಿ ಎಂತಹದ್ದೇ ದೊಡ್ಡ ಯುದ್ಧ ನಡೆದರೂ ಯಾವುದೇ ದೇಶ ಪರಮಾಣು ಅಸ್ತ್ರಗಳ ಬಳಸಿರಲಿಲ್ಲ. ಆದರೆ ಈಗ, ಹೊಸ ಆತಂಕ ಶುರುವಾಗಿದ್ದು ಅದಕ್ಕೆ ಬಲವಾದ ಕಾರಣ ಕೂಡ ಇದೆ.


ಉಕ್ರೇನ್ ಗಡಿಯಲ್ಲಿ ಭಾರಿ ಶಸ್ತ್ರಾಸ್ತ್ರ

ರಷ್ಯಾ ಈಗಾಗಲೇ ತನ್ನ ಶತ್ರುಗಳ ವಿನಾಶಕ್ಕೆ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದು, ಯಾವುದೇ ಕ್ಷಣ ನಾವು ಪರಮಾಣು ಯುದ್ಧಕ್ಕೆ ಸಿದ್ಧ ಎಂಬ ಮುನ್ಸೂಚನೆ ನೀಡುತ್ತಾ ಬಂದಿದೆ. ಅದರಲ್ಲೂ ರಷ್ಯಾ ಗೆಳೆಯ & ಪಾಶ್ಚಿಮಾತ್ಯ ದೇಶಗಳ ಶತ್ರು ಬೆಲಾರಸ್ ನೆಲದಲ್ಲಿ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಪರಮಾಣು ಅಸ್ತ್ರಗಳು ಶೇಖರಣೆ ಆಗಿವೆ. ರಷ್ಯಾ ಸೇನೆ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಈ ಪರಮಾಣು ಅಸ್ತ್ರಗಳನ್ನು ಬೆಲಾರಸ್ ಗಡಿಯಲ್ಲಿ ಶೇಖರಣೆ ಮಾಡುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದೆ. ಇಷ್ಟಾದರೂ ಪದೇ ಪದೇ ರಷ್ಯಾಗೆ ವಿರುದ್ಧವಾಗಿ ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳು ನಡೆದುಕೊಳ್ಳುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.

ಪರಮಾಣು ಅಸ್ತ್ರ ಬಳಸಿದರೆ ಪರಿಸ್ಥಿತಿ?

ಭೂಮಿ ವಾತಾವರಣ ಈಗಾಗಲೇ ಹಾಳಾಗಿ ಹೋಗಿದೆ, ಅದ್ರಲ್ಲೂ ನಮಗೆ ಆಕ್ಸಿಜೆನ್ ಮೂಲವಾದ ಓಝೋನ್ ಪದರ ಕೂಡ ಹಾಳಾಗಿ ಹೋಗುತ್ತಿದೆ. ಭೂಮಿ ಮೇಲೆ ಕೈಗೊಳ್ಳುತ್ತಿರುವ ಅಭಿವೃದ್ಧಿ ಕೆಲಸಗಳು ಹಾಗೂ ಅತ್ತ ಮಾಲಿನ್ಯ ಪ್ರಮಾಣ ಹೆಚ್ಚಳ ಆಗುತ್ತಿರುವ ಕಾರಣ ಓಝೋನ್ ಪದರ ಹಾಳಾಗಿ ಹೋಗಿದೆ. ಇದರ ಪರಿಣಾಮ, ನಮ್ಮ ಮೇಲೆ ಆಗುತ್ತಾ ಮನುಷ್ಯರಿಗೆ ಸೂರ್ಯನ ಕಿರಣಗಳಿಂದ ದೊಡ್ಡ ಸಮಸ್ಯೆ ಎದುರಾಗುತ್ತಿದೆ. ಹೀಗೆಲ್ಲಾ ಇದ್ದಾಗಲೇ ಮತ್ತೊಮ್ಮೆ ಪರಮಾಣು ಅಸ್ತ್ರ ಬಳಕೆ ಮಾಡಿದರೆ ಅದು ಇಡೀ ಭೂಮಿಯ ವಿನಾಶಕ್ಕೆ ಮುನ್ನುಡಿ ಬರೆದಂತೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ತಜ್ಞರು.

ಒಟ್ನಲ್ಲಿ ಪುಟಿನ್ ಅವರು ಇದೀಗ ಕೊಟ್ಟಿರುವ ಹೇಳಿಕೆ ನೋಡಿದರೆ ಯಾವಾಗ ಬೇಕಾದರೂ ರಷ್ಯಾ ಸೇನೆಯು, ಯುರೋಪ್ ನೆಲದಲ್ಲಿ ದೊಡ್ಡ ದಾಳಿ ನಡೆಸಬಹುದು. ಪ್ರಮುಖವಾಗಿ ಉಕ್ರೇನ್ ಬೆನ್ನಿಗೆ ನಿಂತು ಶಸ್ತ್ರಾಸ್ತ್ರಗಳು ಹಾಗೂ ಸೇನಾ ಸಾಮಾಗ್ರಿ ಪೂರೈಕೆ ಮಾಡುತ್ತಿರುವ ದೇಶಗಳ ವಿರುದ್ಧ ದಾಳಿ ನಡೆಯಬಹುದು ಎನ್ನಲಾಗ್ತಿದೆ. ಅದೇ ರೀತಿಯಾಗಿ ಅಮೆರಿಕ ಕೂಡ ಎಲ್ಲಾ ಪರಿಸ್ಥಿತಿ ಎದುರಿಸಲು ಸಜ್ಜಾಗಿದ್ದು, ಏನಾಗುತ್ತೋ? ಎಂಬ ಭಯದ ವಾತಾವರಣ ಕಾಡುತ್ತಿದೆ. 2022ರ ಫೆಬ್ರವರಿ ತಿಂಗಳಲ್ಲಿ ಆರಂಭವಾಗಿದ್ದ ರಷ್ಯಾ & ಉಕ್ರೇನ್ ಯುದ್ಧ ಇನ್ನೇನು ಕೆಲವೇ ತಿಂಗಳಲ್ಲಿ ಬರೋಬ್ಬರಿ 5 ವರ್ಷ ಪೂರೈಸಲಿದೆ.