School Campuses: ಕರ್ನಾಟಕದ ಶಾಲಾ & ಕಾಲೇಜುಗಳ ಆವರಣದಲ್ಲಿ ಜಂಕ್ ಫುಡ್ ಮಾರಾಟಕ್ಕೆ ಬ್ರೇಕ್!

bengaluru diaries | August 2, 2026 - 5:28 am

ವಿದ್ಯಾರ್ಥಿಗಳು ನಮ್ಮ ದೇಶದ ಭವಿಷ್ಯ, ಇವತ್ತು ಶಾಲೆ ಅಥವಾ ಕಾಲೇಜಿನಲ್ಲಿ ಓದುತ್ತಾ ಇರುವ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಮುಂದೆ ನಮ್ಮ ದೇಶವನ್ನು ಕಟ್ಟುತ್ತಾರೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳ ಪಠ್ಯಪುಸ್ತಕದ ವಿಚಾರದಲ್ಲಿ ಸರ್ಕಾರ ಕೂಡ ಮಹತ್ವದ ಕ್ರಮ ಕೈಗೊಳ್ಳುತ್ತದೆ, ಹೀಗಿದ್ದಾಗ ಇತ್ತೀಚಿನ ವರ್ಷಗಳಲ್ಲಿ ಭಾರಿ ದೊಡ್ಡ ಸಮಸ್ಯೆ ಒಂದು ಕಾಡತೊಡಗಿದೆ. ಅದು ಏನೆಂದರೆ ವಿದ್ಯಾರ್ಥಿಗಳ ಜಂಕ್‌ಫುಡ್ ಹವ್ಯಾಸ ಸಾಕಷ್ಟು ಆತಂಕ ಮೂಡುವಂತೆ ಮಾಡಿತ್ತು. ಇದು ಹೀಗೆಯೇ ಮುಂದುವರಿದರೆ ಪರಿಸ್ಥಿತಿ ಕೂಡ ಕೈಮೀರುವ ಹಾಗೂ ಈ ದೇಶದ ಭವಿಷ್ಯದ ಪ್ರಜೆಗಳ ಆರೋಗ್ಯ ಈಗಲೇ ಹಾಳಾಗುವ ಆತಂಕ ಎದುರಾಗಿತ್ತು. ಹೀಗಿದ್ದಾಗಲೇ ನಮ್ಮ ಕರ್ನಾಟಕ ರಾಜ್ಯದಲ್ಲಿ ಖಡಕ್ ನಿರ್ಧಾರ ಒಂದು ಜಾರಿಗೆ ಬಂದಿದೆ.

ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಎಷ್ಟು ಉತ್ತಮವಾಗಿ ಇದೆಯೋ, ಹಾಗೇ ಶಾಲಾ & ಕಾಲೇಜು ವಿದ್ಯಾರ್ಥಿಗಳಿಗೆ ಸಾಕಷ್ಟು ಸೌಲಭ್ಯಗಳನ್ನು ಕೂಡ ಸರ್ಕಾರ ನೀಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ರಕ್ಷಣೆ & ಅವರ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಕಾಲ ಕಾಲಕ್ಕೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಾ ಇದೆ. ಹೀಗಿದ್ದಾಗಲೇ ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಆಹಾರ ಪದ್ಧತಿ ಬೆಳೆಸುವ ಉದ್ದೇಶದಿಂದಲೇ ರಾಜ್ಯ ಆರೋಗ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ.


ಭವಿಷ್ಯದ ದೃಷ್ಟಿಯಿಂದ ಗಟ್ಟಿ ನಿರ್ಧಾರ

ಶಿಕ್ಷಣ ಸಂಸ್ಥೆಗಳ ಆವರಣ & ಸುತ್ತಮುತ್ತ ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಮಾರಾಟ ನಿಯಂತ್ರಿಸಲು ಖಡಕ್ ಆದೇಶ ಜಾರಿಗೊಳಿಸಿದೆ. ಇದರ ಜೊತೆಗೇ ಈ ಹೊಸ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಜೀವನಶೈಲಿ ರೂಢಿಸಲು, ಶಾಲಾ ಆಡಳಿತ ಮಂಡಳಿಗಳಿಗೆ ಜಾಗೃತಿ ಮೂಡಿಸಲು ಸೂಚಿಸಲಾಗಿದೆ ಕೂಡ. ಈ ಆದೇಶ ಭವಿಷ್ಯದ ದೃಷ್ಟಿಯಿಂದ ಸಾಕಷ್ಟು ದೊಡ್ಡ ಪರಿಣಾಮ ಬೀರುವ ನಿರೀಕ್ಷೆ ಇದೆ.

ಜಂಕ್ ಫುಡ್ ಮಾರಾಟ ಮಾಡಂಗಿಲ್ಲ!

ಹೌದು, ಕರ್ನಾಟಕದಲ್ಲಿ ದೇಶದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳ ಆರೋಗ್ಯದ ರಕ್ಷಣೆಗಾಗಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿರುವ ಕರ್ನಾಟಕ ಆರೋಗ್ಯ ಇಲಾಖೆ, ಇನ್ನುಮುಂದೆ ಕರ್ನಾಟಕದಲ್ಲಿ ಶಾಲಾ & ಕಾಲೇಜು ಆವರಣ ಸೇರಿದಂತೆ ಸುತ್ತಮುಲು ಕೂಡ ಜಂಕ್ ಫುಡ್ ಮಾರಾಟ ಮಾಡದಂತೆ ಖಡಕ್ ಆದೇಶ ನೀಡಿದೆ. ಈ ಕಾರಣಕ್ಕೆ ರಾಜ್ಯಾದ್ಯಂತ ಆರಂಭ ಆಗಿರುವ ವಿಶೇಷ ಪರಿಶೀಲನೆ ಅಭಿಯಾನದ ಭಾಗವಾಗಿ 2026 ಜುಲೈ ತಿಂಗಳಲ್ಲಿ ಒಟ್ಟು 134 ಶಾಲಾ & ಕಾಲೇಜುಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿದೆ. ಈ ದಾಳಿ ವೇಳೆ ನಡೆಸಿದ ತಪಾಸಣೆಯಿಂದ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶಾಲಾ & ಕಾಲೇಜುಗಳ ಕಾಂಪೌಂಡ್‌ನಿಂದ ಸುಮಾರು 50 ಮೀಟರ್ ವ್ಯಾಪ್ತಿ ಒಳಗೆ ಜಂಕ್ ಫುಡ್ ಮಾರಾಟ ಮಾಡುವುದನ್ನ ಸಂಪೂರ್ಣ ನಿಷೇಧಿಸಲಾಗಿದೆ. ಇನ್ನು ಈ ಆದೇಶ ಜುಲೈ 21 ಶುಕ್ರವಾರದಿಂದಲೇ ಜಾರಿಗೆ ಬಂದಿದೆ.

ಆಹಾರ ಸುರಕ್ಷತೆ & ಗುಣಮಟ್ಟ ಕಾಯ್ದೆ...

ಈ ಮೂಲಕ ಕರ್ನಾಟಕದಲ್ಲಿ ಇದೀಗ FSSAI ಮಾರ್ಗಸೂಚಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು, ಶಾಲಾ ಆವರಣದ ಮಳಿಗೆಗಳಲ್ಲಿ ಆಹಾರ ಗುಣಮಟ್ಟ, ಸ್ವಚ್ಛತೆ, ನೈರ್ಮಲ್ಯ, ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟ, ಲೇಬಲಿಂಗ್ & ಪರವಾನಗಿ ದಾಖಲೆಗಳ ಬಗ್ಗೆ ನಿಗಾ ವಹಿಸಲಾಗಿದೆ. ಹಾಗೇ ಆಹಾರ ತಪಾಸಣೆ ವೇಳೆ ಅಧಿಕಾರಿಗಳು ಸಂಶಯ ಮೂಡಿದ್ದ ಒಟ್ಟು 53 ಆಹಾರ ಮಾದರಿಗಳನ್ನು ಸಂಗ್ರಹಿಸಿದ್ದು, ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಆಹಾರ ಪರೀಕ್ಷೆಯ ವರದಿ ಬಂದ ನಂತರ ಇಲ್ಲಿ ನಿಯಮ ಉಲ್ಲಂಘನೆ ಮಾಡಿರುವ ವ್ಯಾಪಾರಿಗಳ ವಿರುದ್ಧ ಆಹಾರ ಸುರಕ್ಷತೆ & ಗುಣಮಟ್ಟ ಕಾಯ್ದೆ 2006 ಅನ್ವಯ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.