ದೊಡ್ಮನೆ ಅಂದ್ರೆ ಡಾ. ರಾಜ್‌ಕುಮಾರ್ ಕುಟುಂಬ, ಹೀಗೆ ಕನ್ನಡ ಸಿನಿಮಾ ರಂಗದಲ್ಲಿ ಡಾ. ರಾಜ್‌ಕುಮಾರ್ ಕುಟುಂಬ ಅಂದ್ರೆ ಕೋಟ್ಯಂತರ ಅಭಿಮಾನಿಗಳಿಗೆ ಅಪಾರ ಪ್ರೀತಿ & ಗೌರವ. ಏಕೆಂದರೆ ಕನ್ನಡ ಸಿನಿಮಾ ರಂಗಕ್ಕೆ ಮಾತ್ರವಲ್ಲದೆ ಈ ನಾಡಿಗೆ ದಿವಂಗತ ಡಾ. ರಾಜ್‌ಕುಮಾರ್ ಅವರು ಸಲ್ಲಿಸಿದ ಸೇವೆ ಅಪಾರ. ಅದರಲ್ಲೂ ಕನ್ನಡ ನಾಡು & ನುಡಿ ಉಳಿವಿಗೆ ಹಲವು ಹೋರಾಟಗಳನ್ನು ಮಾಡಿ, ಇಡೀ ಜಗತ್ತಿನಲ್ಲಿ ಹೆಸರು ಗಳಿಸಿದ ನಟ ಡಾ. ರಾಜ್‌ಕುಮಾರ್. ಇಂತಿಪ್ಪ ಅಣ್ಣಾವ್ರ ಹಿರಿಮಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಇದೇ ಸಮಯದಲ್ಲಿ ಅಭಿಮಾನಿಗಳು ಕೂಡ ವಿಶೇಷ ತಯಾರಿ ಮಾಡಿಕೊಂಡಿದ್ದಾರೆ.
ಅಪ್ಪನಂತೆ ಮಕ್ಕಳು ಎಂಬಂತೆ, ಡಾ. ರಾಜ್‌ಕುಮಾರ್ ಅವರ ಪುತ್ರರು ಸಾಧನೆ ಶಿಖರ ಏರಿ ಅಭಿಮಾನಿಗಳ ಹೃದಯ ಗೆದ್ದರು. ಕನ್ನಡ ಚಿತ್ರರಂಗದ ಹಿರಿಯ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಜನ್ಮದಿನವನ್ನು ಈ ಬಾರಿ ಅಭಿಮಾನಿಗಳು ತುಂಬಾ ಸ್ಪೆಷಲ್ ಆಗಿ ಆಚರಿಸಲು ಸಜ್ಜಾಗಿದ್ದಾರೆ. ಈ ವರ್ಷದ ಸಂಭ್ರಮಕ್ಕೆ ಮತ್ತೊಂದು ವಿಶೇಷ ಅರ್ಥವೂ ಇದೆ. ಏಕೆಂದರೆ ನಟ ಶಿವರಾಜ್‌ಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟು 4 ದಶಕ ಯಶಸ್ವಿಯಾಗಿ ಪೂರೈಸಿರುವ ಅಪರೂಪದ ಮೈಲಿಗಲ್ಲು ಇದಾಗಿದೆ. ಇದೇ ಕಾರಣಕ್ಕೆ ಅವರ ಬರ್ತ್ ಡೇ ಸಂಭ್ರಮವನ್ನ ರಾಜ್ಯದಾದ್ಯಂತ ಹಬ್ಬದ ರೀತಿಯಲ್ಲಿ ಆಚರಿಸಲು ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ.
ಅಭಿಮಾನಿಗಳಿಂದ 'ಶಕ್ತಿಧಾಮ'ಕ್ಕೆ ಮತ್ತಷ್ಟು ಶಕ್ತಿ
ಜುಲೈ 12, ಅಂದ್ರೆ ನಾಳೆ ಇಡೀ ಕರುನಾಡು ಹಬ್ಬದ ವಾತಾವರಣದಲ್ಲಿ ಮಿಂದೇಳಲಿದೆ. ಚಂದನವನದ ಎನರ್ಜಿ ಕಿಂಗ್ ಅಂತಾನೇ ಅಭಿಮಾನಿಗಳ ಬಾಯಿಂದ ಪ್ರೀತಿಯಿಂದ ಕರೆಸಿಕೊಳ್ಳುವ ನಟ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬದ ಸಂಭ್ರಮ ಎಲ್ಲೆಡೆ ಮೇಳೈಸುತ್ತಿದೆ. ಈ ಬಾರಿಯ ಬರ್ತ್ ಡೇ ಕೇವಲ ಹುಟ್ಟುಹಬ್ಬ ಅಲ್ಲ, ಶಿವಣ್ಣ ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿ 40 ವರ್ಷ ಪೂರೈಸಿರುವ ಐತಿಹಾಸಿಕ ಕ್ಷಣ. ಹೀಗಾಗಿಯೇ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ತಮ್ಮ ನೆಚ್ಚಿನ ಹೀರೋ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಲು ಸಜ್ಜಾಗಿದ್ದಾರೆ ಕೋಟಿ ಕೋಟಿ ಫ್ಯಾನ್ಸ್. ಅದರಲ್ಲೂ ಪ್ರಮುಖವಾಗಿ ನಟ ಶಿವಣ್ಣ ಹುಟ್ಟುಹಬ್ಬ ಸಂಭ್ರಮ ಹಿನ್ನೆಲೆ 'ಶಕ್ತಿಧಾಮ'ಕ್ಕೆ ಮತ್ತಷ್ಟು ಶಕ್ತಿ ತುಂಬಲಿರುವ ಅಭಿಮಾನಿಗಳು!
ಅಭಿಮಾನಿಗಳಿಗೆ ನಟ ಶಿವಣ್ಣ ವಿಶೇಷ ಸಂದೇಶ
ಶಿವಣ್ಣ ಬರ್ತ್ ಡೇ ಹಿನ್ನೆಲೆಯಲ್ಲಿ ಇದೀಗ ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭಿಮಾನಿ ಸಂಘಗಳು ಹಲವು ವಿಶೇಷ ಕಾರ್ಯಕ್ರಮ ಆಯೋಜಿಸಿವೆ. ಬೃಹತ್ ಕಟೌಟ್‌ಗಳನ್ನು ಸ್ಥಾಪಿಸುವುದು, ಹಾಲಿನ ಅಭಿಷೇಕ & ಅನ್ನಸಂತರ್ಪಣೆ, ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಹಾಗೂ ಇನ್ನಿತರ ಸಮಾಜಮುಖಿ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ. ತಮ್ಮ ನೆಚ್ಚಿನ ನಟನ ಜನ್ಮದಿನ ಸೇವಾ ಚಟುವಟಿಕೆಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸೋದಕ್ಕೆ ಕೋಟಿ ಕೋಟಿ ಫ್ಯಾನ್ಸ್ ಇದೀಗ ಮುಂದಾಗಿದ್ದಾರೆ. ಆದರೆ ಈಗಾಗಲೇ ನಟ ಶಿವಣ್ಣ ಅವರು ಮನವಿ ಮಾಡಿರುವಂತೆ, ತಮ್ಮ ಹುಟ್ಟುಹಬ್ಬಕ್ಕೆ ಕೇಕ್ & ಹೂಗುಚ್ಛಗಳ ಬದಲಾಗಿ ಪ್ರೀತಿ ಹೊತ್ತು ಬನ್ನಿ ಎಂದು ಅಭಿಮಾನಿಗಳಿಗೆ ಸಂದೇಶವನ್ನು ನೀಡಿದ್ದಾರೆ.
ನಟ ಶಿವಣ್ಣಗೆ 64 ವರ್ಷ ತುಂಬಿದ್ದರೂ ಈಗಲೂ ಚಿರ ಯುವಕನಂತೆ ಅಂತಾ ಅವರ ಅಭಿಮಾನಿಗಳು ಹೆಮ್ಮೆಯಿಂದಲೇ ಮಾತನಾಡುತ್ತಾರೆ. ಕನ್ನಡಿಗ ಹಾಗೂ ವರನಟ ಡಾ. ರಾಜ್‌ಕುಮಾರ್ ಅವರ ಹಿರಿಯ ಪುತ್ರನಾಗಿ ಸಿನಿಮಾ ರಂಗ ಪ್ರವೇಶಿಸಿದ ಶಿವರಾಜ್‌ಕುಮಾರ್ ಅವರು, ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ದೊಡ್ಡ ಅಭಿಮಾನಿ ಬಳಗವನ್ನ ಸಂಪಾದಿಸಿದ್ದಾರೆ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು, ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಮ್ಮ ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. 4 ದಶಕಗಳ ಈ ಯಶಸ್ವಿ ಪಯಣದಲ್ಲಿ ಅವರು ಗಳಿಸಿರುವ ಜನಪ್ರಿಯತೆ ಇಂದಿಗೂ ಅಷ್ಟೇ ಗಟ್ಟಿಯಾಗಿ ಉಳಿದಿದೆ ಎನ್ನುವುದು ಸೂಕ್ತ.