ಸಿದ್ದರಾಮಯ್ಯ ಕರ್ನಾಟಕ ರಾಜಕೀಯದಲ್ಲಿ ಮಾತ್ರವಲ್ಲ, ಬಿಜೆಪಿ ನಾಯಕರ ವಿರುದ್ಧ ಸೆಡ್ಡು ಹೊಡೆಯುವ ಮೂಲಕ ರಾಷ್ಟ್ರ ರಾಜಕೀಯದಲ್ಲೂ ಸದ್ದು ಮಾಡಿದ್ದಾರೆ. ಅದರಲ್ಲೂ 2 ಬಾರಿ ಸಿಎಂ ಆಗಿ, ಅತಿಹೆಚ್ಚು ಕಾಲ ಕರ್ನಾಟಕ ರಾಜ್ಯ ಸಿಎಂ ಆಗಿ ಸೇವೆ ಸಲ್ಲಿಸಿದ ಕೀರ್ತಿ ಕೂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲೇ ಇದೆ. ಹೀಗಿದ್ದಾಗ, ಕಳೆದ 1 ತಿಂಗಳಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನದಲ್ಲಿ ಭಾರಿ ದೊಡ್ಡ ಬದಲಾವಣೆಯೇ ಸಂಭವಿಸಿದ್ದು, ಆ ಮೂಲಕ ಕರ್ನಾಟಕ ಕಾಂಗ್ರೆಸ್‌ಗೆ ಹೊಸ ಸಾರಥಿಯ ಆಗಮನವೂ ಆಗಿದೆ. ಇಂತಹ ಸಮಯದಲ್ಲೇ, ಸಿದ್ದರಾಮಯ್ಯ ಅವರ ಬೆಂಬಲಿಗರಿಗೆ ಭರ್ಜರಿ ಸುದ್ದಿಯೊಂದು ಇಲ್ಲಿದೆ.
ಹೌದು, ಮುಖ್ಯಮಂತ್ರಿ ಹುದ್ದೆಯಿಂದ ನಿರ್ಗಮಿಸಿದ ನಂತರ ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಚಟುವಟಿಕೆಗೆ ಹೊಸ ವೇಗ ನೀಡಲು ಸಜ್ಜಾಗಿದ್ದಾರೆ ಎಂಬ ಚರ್ಚೆ ರಾಜ್ಯ ರಾಜಕೀಯ ವಲಯದಲ್ಲಿ ಜೋರಾಗಿದೆ. ಮುಂದಿನ ವಿಧಾನಸಭೆ ಚುನಾವಣೆ ಗಮನದಲ್ಲಿ ಇಟ್ಟುಕೊಂಡು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳು ಸೇರಿದಂತೆ ದಲಿತ ಸಮುದಾಯಗಳನ್ನ ಮತ್ತೊಮ್ಮೆ ಸಂಘಟಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂಬ ಸುದ್ದಿ ಈಗ ಅವರ ಬೆಂಬಲಿಗರಲ್ಲಿ ಸಂತಸ ತಂದಿದೆ. ಹಾಗಾದರೆ 2028 ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ ಅವರ ಪ್ಲಾನ್ ಏನು? ಮುಂದೆ ತಿಳಿಯೋಣ ಬನ್ನಿ.
ಗ್ರಾಮೀಣ ಮಟ್ಟದಿಂದ ಪಕ್ಷ ಸಂಘಟನೆ?
ಹೌದು, ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಜ್ಯದ ಮೂಲೆಮೂಲೆಗೆ ಭೇಟಿ ನೀಡುವ ಕಾರ್ಯಕ್ರಮಕ್ಕೆ ರೂಪುರೇಷೆ ಸಿದ್ಧವಾಗುತ್ತಿದೆ ಎನ್ನಲಾಗಿದೆ. ಖುದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ರೂಪುಗಳುತ್ತಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. ಗ್ರಾಮೀಣ ಮಟ್ಟದಿಂದ ಹಿಡಿದು ಜಿಲ್ಲಾ ಕೇಂದ್ರದ ತನಕ ಸಾರ್ವಜನಿಕರ ಜೊತೆಯಲ್ಲಿ ನೇರ ಸಂಪರ್ಕ ಬೆಳೆಸುವ ಮೂಲಕ ಪಕ್ಷದ ನೆಲೆಯನ್ನ ಗಟ್ಟಿಗೊಳಿಸುವತ್ತ ಸಿದ್ದರಾಮಯ್ಯ ಗಮನ ಹರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಂದೆ ಕೂಡ ಸಿದ್ದರಾಮಯ್ಯ ಅವರಿಗೆ ರಾಜಕೀಯ ಶಕ್ತಿ ತುಂಬಿದ್ದೇ ಅಹಿಂದ ವರ್ಗ, ಹೀಗಿದ್ದಾಗಲೇ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಸದೃಢವಾಗಿ ಹಾಗೂ ಗಟ್ಟಿಯಾಗಿ ಕಟ್ಟಿ ಬೆಳೆಸಲು ಮತ್ತೆ ಅಹಿಂದ ಮಂತ್ರ ಜಪಿಸುವ ಸಾಧ್ಯತೆ ದಟ್ಟವಾಗಿದೆ.

ಇನ್ನೇನು 2 ವರ್ಷ ಬಾಕಿ ಅಷ್ಟೇ, ಅಷ್ಟರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಬಂದು ಬಿಡುತ್ತದೆ. 2028ರ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಸಂಘಟನಾತ್ಮಕ ಸಿದ್ಧತೆ ಆರಂಭಿಸುವ ಅಗತ್ಯತೆ ಬಗ್ಗೆ ಕಾಂಗ್ರೆಸ್ ವರಿಷ್ಠರು ಅರ್ಥೈಸಿಕೊಂಡಿರುವ ರೀತಿ ಕಾಣುತ್ತಿದೆ. ಇನ್ನು ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರು ನಿರ್ಗಮಿಸಿ, ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿರುವ ಹಿನ್ನೆಲೆಯಲ್ಲಿ ಹಲವು ಬದಲಾವಣೆ ಆಗಿದೆ. ಹೀಗಿದ್ದಾಗ ತಳಮಟ್ಟದಿಂದಲೇ ಕಾರ್ಯಕರ್ತರನ್ನು ಸಕ್ರಿಯಗೊಳಿಸುವ ಕಾರ್ಯಕ್ಕೂ ಹೆಚ್ಚು ಒತ್ತು ನೀಡಲಾಗುತ್ತಿದೆ. ವಿಶೇಷವಾಗಿ ಅಹಿಂದ ಸಮುದಾಯಗಳ ಸಾಂಪ್ರದಾಯಿಕ ಬೆಂಬಲ ಉಳಿಸಿಕೊಳ್ಳುವುದರ ಜೊತೆ ಹೊಸ ಮತದಾರರನ್ನೂ ಸೆಳೆಯುವ ಗುರಿಯೂ ಅಭಿಯಾನದ ಭಾಗವಾಗಿ ಇರಬಹುದು.
ಒಟ್ನಲ್ಲಿ ಸಿಎಂ ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ನಿರ್ಗಮಿಸಿದ ನಂತರ ಅವರಿಗೆ ಹೊಸ ಹಾಗೂ ದೊಡ್ಡ ಹುದ್ದೆಗಳನ್ನೇ ಕೇಂದ್ರದ ಕಾಂಗ್ರೆಸ್ ನಾಯಕರು ನೀಡುತ್ತಿದ್ದಾರೆ. ಈ ಪೈಕಿ 2028ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೂಡ ಈಗಲೇ ತಯಾರಿ ಆರಂಭವಾದಂತೆ ಕಾಣುತ್ತಿದ್ದು, ಸಿದ್ದರಾಮಯ್ಯ ಅವರ ಬೆಂಬಲಿಗರಲ್ಲಿ ಹೊಸ ಹುಮ್ಮಸ್ಸು ಕೂಡ ಮೂಡುತ್ತಿದೆ ಎನ್ನಬಹುದು. ಆದರೆ ಇದು ಸಿದ್ದರಾಮಯ್ಯ ಅವರ ರಾಜಕೀಯ ರೀ ಎಂಟ್ರಿ ಆಗಿರುತ್ತಾ? ಅಥವಾ ಕಾಂಗ್ರೆಸ್ ಪಕ್ಷ ಕಟ್ಟುವುದಕ್ಕೆ ಮಾತ್ರ ಮೀಸಲಾಗಿ ಇರಲಿದೆಯಾ? ಎಂಬುದನ್ನ ಕಾದು ನೋಡಬೇಕಿದೆ.