Siddaramaiah Retirement: ಸಿದ್ದರಾಮಯ್ಯ ಖಡಕ್ ನಿರ್ಧಾರಕ್ಕೆ ಬೆಚ್ಚಿಬಿದ್ದ ಕರ್ನಾಟಕ ಕಾಂಗ್ರೆಸ್

bengaluru diaries | July 27, 2026 - 1:44 pm

ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಅವರೇ ದೊಡ್ಡ ಶಕ್ತಿಯಾಗಿದ್ದು, ಚುನಾವಣಾ ರಾಜಕೀಯ ವಿಚಾರದಲ್ಲಿ ಮಾಜಿ ಸಿಎಂ ಸಿದ್ದು ಇಲ್ಲದೆ ಏನೂ ಮಾಡಲು ಆಗಲ್ಲ ಎಂಬ ಪರಿಸ್ಥಿತಿ ಇದೆ. ಹೀಗಾಗಿ ಎಲ್ಲರೂ ಸಿದ್ದರಾಮಯ್ಯ ಮೇಲೆ ಭಾರ ಹಾಕಿ 2028 ಕರ್ನಾಟಕ ವಿಧಾನಸಭೆ ಚುನಾವಣೆ ಗೆಲ್ಲಲು ಕಾಯುತ್ತಿದ್ದರು. ಇದೇ ಸಮಯದಲ್ಲೇ ಸಿದ್ದರಾಮಯ್ಯ ಅವರ ಅದೊಂದು ಘೋಷಣೆ ದೊಡ್ಡ ತಲ್ಲಣ ಎಬ್ಬಿಸಿದೆ. ಕರ್ನಾಟಕ ರಾಜ್ಯದ ಬಹುದೊಡ್ಡ ಸಮುದಾಯ ಎಂದು ಗುರುತಿಸಿಕೊಂಡ ಕುರುಬ ಸಮುದಾಯದ ಪ್ರಶ್ನಾತೀತ ನಾಯಕ & ಅಹಿಂದ ಹೋರಾಟದ ಮೂಲಕ ಕರ್ನಾಟಕ ರಾಜ್ಯದಲ್ಲಿ ಸಾಮ್ರಾಜ್ಯ ಕಟ್ಟಿದ್ದ ಸಿದ್ದರಾಮಯ್ಯ ರಾಜಕೀಯದಿಂದ ದೂರ ಆಗುತ್ತಿದ್ದಾರೆ. ಅದರಲ್ಲೂ ಇನ್ನುಮುಂದೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂಬ ಅವರ ಹೇಳಿಕೆಯೇ ಹಲ್‌ಚಲ್ ಎಬ್ಬಿಸಿದೆ.

ಹೌದು, ಕರ್ನಾಟಕ ರಾಜಕಾರಣದ ಪ್ರಭಾವಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ರಾಜಕೀಯದಿಂದ ಅಂತರ ಕಾಯ್ದುಕೊಳ್ಳುವ ಬಗ್ಗೆ ನೀಡಿರುವ ದಿಢೀರ್ ಹೇಳಿಕೆ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಯಸ್ಸಿನ ಕಾರಣ ನೀಡಿ ಸಿದ್ದು ಅವರು ಕೊಟ್ಟ ಹೇಳಿಕೆ ಈಗ ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಅಚ್ಚರಿ ಜೊತೆಗೆ ಆತಂಕವನ್ನೂ ಮೂಡಿಸಿದೆ. ಇಷ್ಟು ದಿನಗಳ ಕಾಲ ಸಕ್ರಿಯ ಚುನಾವಣಾ ರಾಜಕೀಯದಲ್ಲೇ ಇದ್ದುಕೊಂಡು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುತ್ತಿದ್ದ ಸಿದ್ದರಾಮಯ್ಯ ಅವರು ಇದ್ದಕ್ಕಿದ್ದಂತೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುವ ಅಥವಾ ಅಂತರ ಕಾಯ್ದುಕೊಳ್ಳುವ ಮಾತಾಡಿದ್ದು ಕೈ ಕಲಿಗಳಿಗೆ ನುಂಗಲಾರದ ತುತ್ತಾಗಿದೆ ಈಗ. ಅತ್ತ ಸಿದ್ದರಾಮಯ್ಯ ಅವರ ಬೆಂಬಲಿಗರು ಬೇರೆ ಪಕ್ಷಗಳ ದಾರಿ ಹಿಡಿಯುತ್ತಾರೆ ಎಂಬ ಗುಸುಗುಸು ಕೂಡ ಶುರುವಾಗಿದೆ.


ಚಿಂತೆಯಲ್ಲಿ ಮುಳುಗಿದ ಕರ್ನಾಟಕ ಕಾಂಗ್ರೆಸ್

22 ತಿಂಗಳು ಅಷ್ಟೇ ಬಾಕಿ, ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ ಎದುರಾಗಲಿದೆ. 2028ರ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಮಯದಲ್ಲೇ, ಸಿದ್ದರಾಮಯ್ಯ ಅವರು ಚುನಾವಣಾ ಕಣದಿಂದ ದೂರವಿದ್ದರೆ ಅಥವಾ ಸಕ್ರಿಯವಾಗಿ ತೊಡಗಿಸಿಕೊಳ್ಳದೇ ಇದ್ದರೆ ಪಕ್ಷದ ಮೇಲಾಗುವ ಪರಿಣಾಮಗಳು ಏನೇನು? ಎಂಬ ಚರ್ಚೆಗಳ ಗೊಂಚಲು ಕಾಂಗ್ರೆಸ್ ನಾಯಕರ ತಲೆಯಲ್ಲಿ ತಳಮಳ ಎಬ್ಬಿಸಿದೆ.

ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಅಹಿಂದ ವರ್ಗದ ಮತಗಳನ್ನ ಸೆಳೆಯಬಲ್ಲ ಪ್ರಮುಖ ಶಕ್ತಿ ಎಂದರೆ ಸಿದ್ದರಾಮಯ್ಯ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಇನ್ನೂ ಹಲವು ಕ್ಷೇತ್ರಗಳಲ್ಲಿ ಹಿಂದುಳಿದ, ದಲಿತ & ಅಲ್ಪಸಂಖ್ಯಾತರ ಮತ ಚುನಾವಣೆ ಫಲಿತಾಂಶ ನಿರ್ಣಯಿಸುವ ಪ್ರಮುಖ ಪಾತ್ರ ವಹಿಸುತ್ತವೆ. ಹೀಗಿದ್ದಾಗ ಕರ್ನಾಟಕ ಕಾಂಗ್ರೆಸ್ ನಾಯಕರು ಚಿಂತೆಯಲ್ಲಿ ಮುಳುಗಿದ್ದಾರೆ. ಹಾಗಾದರೆ ಈ ಸಮಯದಲ್ಲಿ ಕಾಂಗ್ರೆಸ್ ಶಾಸಕರ ಆತಂಕ ಏನು? ಬನ್ನಿ ತಿಳಿಯೋಣ.

ಕಾಂಗ್ರೆಸ್ ಶಾಸಕರಿಗೆ ಸಿಕ್ಕಾಪಟ್ಟೆ ಟೆನ್ಷನ್:

* ಸಿದ್ದರಾಮಯ್ಯ ಪ್ರಚಾರಕ್ಕೆ ಬರದಿದ್ದರೆ ಅಹಿಂದ ಮತಗಳು ಕೈತಪ್ಪಿ ಹೋಗುವ ಆತಂಕ

* ಮಾಜಿ ಸಿಎಂ ಸಿದ್ದು ತಟಸ್ಥರಾದರೆ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ

* ಸಿದ್ದರಾಮಯ್ಯ ಪ್ರಚಾರಕ್ಕೆ ಬರದೇ ಇದ್ದರೆ ಹಲವು ವಿಧಾನಸಭೆ ಕ್ಷೇತ್ರಗಳು ಕೈತಪ್ಪಲಿವೆ

* 2028ರ ವಿಧಾನಸಭೆ ಚುನಾವಣೆ ಸೋತರೆ 2029 ಲೋಕಸಭೆ ಚುನಾವಣೆಗೆ ಸಂಕಷ್ಟ

* ಕಾಂಗ್ರೆಸ್ ಮತ್ತೊಮ್ಮೆ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವುದು ಕೂಡ ಕಷ್ಟವಾಗಲಿದೆ

ಕಾಂಗ್ರೆಸ್‌ನ ಕೆಲ ಮೂಲಗಳ ಪ್ರಕಾರ ಸಿದ್ದರಾಮಯ್ಯ ಅವರ ಈ ಹೇಳಿಕೆಯನ್ನು ಕೇವಲ ನಿವೃತ್ತಿಯಾಗಿ ನೋಡದೆ, ಇದೊಂದು ರಾಜಕೀಯ ಚದುರಂಗದಾಟದ ಭಾಗ ಎಂದು ವಿಶ್ಲೇಷಿಸಲಾಗುತ್ತಿದೆ. ಪಕ್ಷದಲ್ಲಿ ಒಂದು ವೇಳೆ ತಮ್ಮನ್ನು ಕಡೆಗಣಿಸಿದರೆ ಅಥವಾ ತಮ್ಮ ಪ್ರಾಮುಖ್ಯತೆಗೆ ಚ್ಯುತಿ ಬಂದರೆ ತಾವೆಷ್ಟು ಪ್ರಮುಖರು ಎಂಬುದನ್ನು ಹೈಕಮಾಂಡ್‌ಗೆ ತಿಳಿಸಲು & ರಾಜಕೀಯವಾಗಿ ಒಂದು ತಂತ್ರವಾಗಿ ದಾಳವನ್ನ ಉರುಳಿಸಿದ್ದಾರೆ, ಎಂಬ ಗುಸುಗುಸು ಕೂಡ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಒಟ್ಟಾರೆ ಹೇಳುವುದಾದ್ರೆ ಸಿದ್ದರಾಮಯ್ಯ ಅವರು ನೀಡಿದ ಈ ಹೇಳಿಕೆ ಕರ್ನಾಟಕದ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ದೊಡ್ಡ ಬದಲಾವಣೆಯ ಮುನ್ಸೂಚನೆ ಕೂಡ ನೀಡುತ್ತಿದೆ.