ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಅಂದ್ರೆ ಎಸ್‌ಐಆರ್ ಪ್ರಕ್ರಿಯೆಯು ರಾಜಕೀಯವಾಗಿ ಹೊಸ ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಇಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ನಿಯಮ ಉಲ್ಲಂಘನೆ ಆರೋಪಗಳು ಕೇಳಿಬಂದ ಹಿನ್ನೆಲೆ ಈ ಮಹತ್ವದ ವಿಷಯ ಇದೀಗ ಕೇಂದ್ರ ಚುನಾವಣಾ ಆಯೋಗದ ಗಮನ ಸೆಳೆಯುವ ಹಂತಕ್ಕೆ ತಲುಪಿದೆ. ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಮತದಾರರ ಪಟ್ಟಿ ಪರಿಷ್ಕರಣೆಗೆ, ಅಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಬೇಕು. ಆದರೆ ಸದ್ಯ ರಾಜ್ಯದಲ್ಲಿ ಮೂಲ ನಿಯಮಗಳನ್ನೇ ಗಾಳಿಗೆ ತೂರಿ ಕಾಲಕಸ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇಂತಹ ಸಮಯದಲ್ಲೇ ದಿಢೀರ್ ಜೆಡಿಎಸ್ ಮಹತ್ವದ ಹೆಜ್ಜೆ ಇಟ್ಟಿದೆ.
ಹೌದು, ಅಧಿಕಾರಿಗಳು ಮನೆ ಮನೆಗೆ ಹೋಗುವ ಬದಲು ಮಂದಿರ, ಮಸೀದಿ, ಮದುವೆ ಮಂಟಪ ಅಥವಾ ಅಂಗನವಾಡಿಯ ಕೇಂದ್ರಗಳಲ್ಲಿ ಠಿಕಾಣಿ ಹೂಡಿದ್ದಾರೆ. ಅಲ್ಲಿಯೇ ಸಾಮೂಹಿಕವಾಗಿ ಪಾಂಪ್ಲೆಟ್ ಹಂಚಿ, ರಾಜಾರೋಷವಾಗಿ ಹೆಸರು ಸೇರ್ಪಡೆ ಹಾಗೂ ಟ್ಯಾಂಪರಿಂಗ್ ಮಾಡುವ ಕೆಲಸ ನಡೆಯುತ್ತಿದೆ ಎಂಬ ಆರೋಪ ಮಾಡಲಾಗಿದೆ. ಈ ರೀತಿಯ ವರ್ತನೆಯ ಪರಿಣಾಮ ಮತದಾರರ ಹೆಸರು ಸೇರ್ಪಡೆ & ತಿದ್ದುಪಡಿಗಳಲ್ಲಿ ಪಾರದರ್ಶಕತೆ ಕೊರತೆಯಾಗಿದೆ ಎಂದು ಪ್ರತಿಪಕ್ಷಗಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಿದ್ದಾಗಲೇ ಕರ್ನಾಟಕದಲ್ಲಿ ನಡೆಯುತ್ತಿರುವ 'SIR' ಪ್ರಕ್ರಿಯೆಯಲ್ಲಿನ ಲೋಪದೋಷಗಳನ್ನ ದೆಹಲಿ ದರ್ಬಾರ್ ಮೆಟ್ಟಿಲೇರಿಸಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರಿಗೆ ದೂರು?
ಮತ್ತೊಂದು ಕಡೆ ಈಗಾಗಲೇ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ರಾಜ್ಯ ಚುನಾವಣಾ ಆಯೋಗಕ್ಕೆ ಭೇಟಿಯನ್ನು ನೀಡಿ ಅಧಿಕೃತ ದೂರು ಸಲ್ಲಿಸಿದ್ದಾರೆ. ಅಧಿಕಾರಿಗಳು ಮನೆ ಮನೆಗೆ ಹೋಗದೆ ಅಕ್ರಮ ಎಸಗುವ ಮೂಲಕ ಬಾಂಗ್ಲಾ ವಲಸಿಗರ ರಕ್ಷಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ನಿಖಿಲ್ ಗಂಭೀರ ಆರೋಪ ಮಾಡಿದ್ದಾರೆ. ಇದರ ಮುಂದುವರಿದ ಭಾಗವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ, ವಿವಿಧ ಜಿಲ್ಲೆಗಳಲ್ಲಿ ನಡೆದ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ದಾಖಲೆಗಳು ಮತ್ತು ವಿಡಿಯೊಗಳನ್ನ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಅಗತ್ಯವಿದ್ದರೆ ಸಂಪೂರ್ಣ ಪರಿಷ್ಕರಣೆ ಪ್ರಕ್ರಿಯೆಯನ್ನು ಮರುಪರಿಶೀಲಿಸುವಂತೆ ಮನವಿ ಮಾಡುವ ಸಾಧ್ಯತೆಯೂ ಇದೆ. ಈ ಬೆಳವಣಿಗೆ ಇದೀಗ ಕರ್ನಾಟಕ ರಾಜಕೀಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ?
ಇದರ ಮುಂದುವರಿದ ಭಾಗವಾಗಿ ಸೋಮವಾರವೇ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯುಕ್ತರನ್ನು ಖುದ್ದಾಗಿ ಭೇಟಿ ಮಾಡಿ ದಾಖಲೆ ಸಮೇತ ದೂರು ನೀಡಲಿದ್ದಾರೆ ಎನ್ನಲಾಗಿದೆ. ಯಶವಂತಪುರ ಹಾಗೂ ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಡೆದಿರುವ ನಿಯಮ ಉಲ್ಲಂಘನೆ ವಿಡಿಯೋ ಸಾಕ್ಷ್ಯಗಳನ್ನು ಆಯೋಗದ ಮುಂದೆ ಒಪ್ಪಿಸಲಿರುವ ಎಚ್‌ಡಿಕೆ, ಈವರೆಗೆ ನಡೆದಿರುವ ಇಡೀ 'SIR' ಪ್ರಕ್ರಿಯೆಯನ್ನೇ ರದ್ದುಗೊಳಿಸುವಂತೆ ಮನವಿ ಕೂಡ ಮಾಡಲಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೂ ಎಚ್‌ಡಿಕೆ ಚರ್ಚೆ ನಡೆಸಲಿದ್ದಾರೆ.
ಬಿರುಗಾಳಿ ಎಬ್ಬಿಸಿರುವ ಎಸ್ಐಆರ್ ಪ್ರಕ್ರಿಯೆ
ಈ ಹಿಂದೆ ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ, ಎಸ್ಐಆರ್ ಪ್ರಕ್ರಿಯೆ ಪರಿಣಾಮ ಆಡಳಿತ ಪಕ್ಷಗಳು ಭಾರಿ ಹಿನ್ನಡೆ ಅನುಭವಿಸಿವೆ ಎಂಬ ಚರ್ಚೆ ಜೋರಾಗಿದೆ. ಈ ಹಿನ್ನೆಲೆ ಕರ್ನಾಟಕದಲ್ಲಿ ಆ ಇತಿಹಾಸ ಮರುಕಳಿಸದಂತೆ ತಡೆಯಲು ಕಾಂಗ್ರೆಸ್ ಸರ್ಕಾರ ಎಸ್ಐಆರ್ ಪ್ರಕ್ರಿಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಆದ್ರೆ ಮತಪಟ್ಟಿ ಪರಿಷ್ಕರಣೆ ಈಗ ತೀವ್ರ ಚರ್ಚೆಗೆ ಗುರಿಯಾಗಿದ್ದು, ಬಿಎಲ್‌ಒಗಳು ಮನೆ ಮನೆಗೆ ತೆರಳುತ್ತಾ ಪರಿಶೀಲಿಸುವ ಬದಲಿಗೆ ರಾಮನಗರ, ಕನಕಪುರ, ಬೆಂಗಳೂರು & ಯಾದಗಿರಿ, ಕುಣಿಗಲ್ ಸೇರಿ ಹಲವೆಡೆ ಕಲ್ಯಾಣ ಮಂಟಪ, ಮಸೀದಿ ಮತ್ತು ಮನೆಗಳಲ್ಲಿ ಜನರನ್ನು ಗುಂಪು ಗುಂಪಾಗಿ ಸೇರಿಸಿ ಗಣತಿ ಅರ್ಜಿ ಭರ್ತಿ ಮಾಡಿಸುತ್ತಿರುವ ಆರೋಪ ಕೇಳಿಬಂದಿದೆ. ಈ ಕಾರಣಕ್ಕೆ ಮತ್ತೊಮ್ಮೆ ವಿಶೇಷ ಮತಪಟ್ಟಿ ಪರಿಷ್ಕರಣೆ ಜಟಾಪಟಿ ದೊಡ್ಡ ಮಟ್ಟದ ರಾಜಕೀಯ ಬಿರುಗಾಳಿ ಎಬ್ಬಿಸುತ್ತಿದೆ.