ಒಂದು ಕಾಲದಲ್ಲಿ ಹೋಟೆಲ್ ಅಂದ್ರೆನೇ ಭಾರತೀಯರಿಗೆ ಗೊತ್ತಿರಲಿಲ್ಲ, ಆದರೆ ಆಧುನಿಕ ಕಾಲಘಟ್ಟ ಎಂತಹ ವಾತಾವರಣ ಸೃಷ್ಟಿ ಮಾಡಿದೆ ಎಂದರೆ ಕೂತಿರುವ ಜಾಗಕ್ಕೆ ಇದೀಗ ಊಟ ಸಪ್ಲೈ ಆಗುತ್ತಿದೆ. ಇನ್ನು ತಂದಿರುವ ಊಟ ತಿನ್ನಿಸುವುದು ಬಾಕಿ ಇದೆ ಅಷ್ಟೇ. ಹೀಗಿದ್ದಾಗ ಆಧುನಿಕ ಜಗತ್ತಿನಲ್ಲಿ ಕೆಲಸ & ಓದು ಅಂತಾ ಬ್ಯುಸಿ ಲೈಫ್ ಲೀಡ್ ಮಾಡುವವರಿಗೆ ಆನ್‌ಲೈನ್ ಫುಡ್ ಡೆಲಿವರಿ ಮಾಡುವ ಅಪ್ಲಿಕೇಷನ್‌ಗಳೇ ಆಧಾರ. ಇದೇ ಕಾರಣಕ್ಕೆ ಪ್ರತಿದಿನ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಇದೇ ಆನ್‌ಲೈನ್ ಫುಡ್ ಡೆಲಿವರಿ ಮೂಲಕ ನಡೆಯುತ್ತದೆ. ಇದು ನಮ್ಮ ಬೆಂಗಳೂರಿನಲ್ಲೂ ವಾಡಿಕೆ ಆಗಿದ್ದು, ಇದೀಗ ಆನ್‌ಲೈನ್ ಫುಡ್ ಡೆಲಿವರಿ ಅಪ್ಲಿಕೇಷನ್ಸ್ ನಂಬಿ ಜೀವನ ಸಾಗಿಸುತ್ತಿದ್ದ ಜನರಿಗೆ ದೊಡ್ಡ ಶಾಕ್ ಸಿಕ್ಕಿದೆ.
ಹೌದು, ಆನ್‌ಲೈನ್ ಫುಡ್ ಡೆಲಿವರಿ ಅನ್ನೋ ಮಾತು ಬಂದ್ರೆ ನಮಗೆ ಮೊದಲಿಗೆ ಬಾಯಿಗೆ ಬರುವ ಪದ ಅದು ಸ್ವಿಗ್ಗಿ & ಜೊಮ್ಯಾಟೋ. ಈ ಎರಡೂ ಅಪ್ಲಿಕೇಷನ್ ಅಷ್ಟು ಫೇಮಸ್ ಆಗಿದ್ದು, ಹತ್ತಾರು ಲಕ್ಷ ಜನರಿಗೆ ಇದೇ ಅಪ್ಲಿಕೇಷನ್ ಮೂಲಕ ಆಹಾರ ಸರಬರಾಜು ಆಗುತ್ತದೆ. ಆದರೆ ಇದೀಗ ಇದೇ ಫುಡ್ ಡೆಲಿವರಿ ಅಪ್ಲಿಕೇಷನ್ಸ್ ವಿರುದ್ಧ ಹೋಟೆಲ್‌ಗಳ ಮಾಲೀಕರು ರೊಚ್ಚಿಗೆದ್ದಿದ್ದಾರೆ. ನಮಗೆ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿರುವ ಮಾಲೀಕರು ಇದೀಗ ದೊಡ್ಡ ನಿರ್ಧಾರ ಕೈಗೊಂಡಿದ್ದಾರೆ. ಹೀಗಿದ್ದಾಗ ಹೋಟೆಲ್ ಮಾಲೀಕರ ಕೆಂಗಣ್ಣು ಕೇವಲ ಫುಡ್ ಡೆಲಿವರಿ ಮಾಡುವ ಅಪ್ಲಿಕೇಷನ್‌ಗಳಿಗೆ ಬಿಸಿ ತಾಗಿಸುತ್ತಿಲ್ಲ, ಬದಲಾಗಿ ಫುಡ್ ಡೆಲಿವರಿ ಬಾಯ್ಸ್ ಹಾಗೂ ಫುಡ್ ಆರ್ಡರ್ ಮಾಡುವ ಗ್ರಾಹಕರಿಗೂ ಇದರ ಬಿಸಿ ತಾಗುವುದು ಬಹುತೇಕ ಗ್ಯಾರಂಟಿ ಆಗಿದೆ. ಹಾಗಾದರೆ ಈಗ ದಿಢೀರ್ ಆನ್‌ಲೈನ್ ಫುಡ್ ಆರ್ಡರ್ ಮಾಡುವುದು ಬಂದ್ ಆಗುತ್ತಾ? ಬನ್ನಿ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
ಆಗಸ್ಟ್ 15 ಕೊನೆಯ ಅವಕಾಶ?
ಅಂದಹಾಗೆ ಇಲ್ಲಿ ಸ್ವಿಗ್ಗಿ, ಜೊಮ್ಯಾಟೋ ಅಪ್ಲಿಕೇಶನ್ಸ್ ವಿರುದ್ಧ ಹೋಟೆಲ್ ಮಾಲೀಕರ ಸಂಘ ಭಾರಿ ಆಕ್ರೋಶವನ್ನ ಹೊರ ಹಾಕಿದೆ. ಅತಿಯಾದ ಕಮಿಷನ್, ಬೇಕಾಬಿಟ್ಟಿ ಹಣ ವಸೂಲಿ & ಪಾರದರ್ಶಕತೆ ಕೊರತೆ ಎಂಬ ಆರೋಪಗಳ ಸರಮಾಲೆ ಹೊರಿಸಿರುವ ಹೋಟೆಲ್ ಮಾಲೀಕರ ಸಂಘವು, ಇ-ಕಾಮರ್ಸ್ ಫುಡ್ ಡೆಲಿವರಿ ಆ್ಯಪ್‌ಗಳಿಗೆ ಡೆಡ್‌ಲೈನ್ ಕೊಟ್ಟಿದೆ. ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗದಿದ್ದರೆ ಆಗಸ್ಟ್ 15 ಶನಿವಾರದಿಂದಲೇ ಬೆಂಗಳೂರಲ್ಲಿ ಸ್ವಿಗ್ಗಿ ಹಾಗೂ ಜೊಮ್ಯಾಟೋ ಸೇವೆ ಬಂದ್ ಮಾಡಲು ನಿರ್ಧಾರ ಕೂಡ ಇದೀಗ ಕೈಗೊಳ್ಳಲಾಗಿದೆ. ಈ ಮೂಲಕ ತಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಇದರ ಬಿಸಿಯನ್ನು ಆನ್‌ಲೈನ್ ಡೆಲಿವರಿ ಅಪ್ಲಿಕೇಷನ್‌ಗಳು ಅನುಭವಿಸಲಿ, ಎಂದು ತೀವ್ರ ಆಕ್ರೋಶ ಹೊರಹಾಕಿದೆ ಹೋಟೆಲ್ ಮಾಲೀಕರ ಸಂಘ.
ಹೋಟೆಲ್ ಮಾಲೀಕರ ಸಂಘದ ಬೇಡಿಕೆಗಳು
ಆನ್‌ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ಕೆಂಡವಾಗಿರುವ ಹೋಟೆಲ್ ಮಾಲೀಕರ ಸಂಘ ಈಗ ಕೆಲ ಪ್ರಮುಖ ಬೇಡಿಕೆಗಳನ್ನ ಮುಂದಿಟ್ಟಿದೆ. ಈ ಪೈಕಿ ಪ್ರಮುಖವಾಗಿ ಹೋಟೆಲ್ ಮಾಲೀಕರ ಮುಂಗಡ ಲಿಖಿತ ಅಥವಾ ಡಿಜಿಟಲ್ ಅನುಮತಿ ಇಲ್ಲದೇ ಜಾಹೀರಾತು ಆರಂಭಿಸುವಂತಿಲ್ಲ. ಹಾಗೇ, ಹೋಟೆಲ್‌ಗಳ ಮಾಲೀಕರ ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣ ಕಟ್ ಆಗುವುದು ನಿಲ್ಲಬೇಕು. ಯಾವುದೇ ಹೋಟೆಲ್ ಮಾಲೀಕರು ಬಯಸಿದಾಗ ಒಂದೆ ಕ್ಲಿಕ್‌ಗೆ ಜಾಹೀರಾತು ನಿಲ್ಲಿಸುವ ಅವಕಾಶ ಬೇಕು. ಜಾಹೀರಾತು ನಿಲ್ಲಿಸಿದ ನಂತರ ಹೆಚ್ಚುವರಿ ಚಾರ್ಜ್ ಪಡೆಯಬಾರದು ಎನ್ನುವ ಡಿಮ್ಯಾಂಡ್ ಇಡಲಾಗಿದೆ. ಹಾಗೇ ಪಾವತಿ ವಿವರದಲ್ಲಿ ಕಮಿಷನ್, ಜಿಎಸ್‌ಟಿ, ಸಿಪಿಸಿ ಜಾಹೀರಾತು ಮತ್ತು ಕೊಡುಗೆ & ಪ್ರಚಾರ ಶುಲ್ಕದ ವಿವರ ಸ್ಪಷ್ಟವಾಗಿರಬೇಕು. ಪಾರದರ್ಶಕತೆ ಕೊರತೆಯಿಂದ ಮಾಲೀಕರಿಗೆ ಪಾವತಿಗಳ ಹೊಂದಾಣಿಕೆ ಮಾಡಲು ಕಷ್ಟವಾಗುತ್ತಿದೆ ಎಂದು ಬೇಡಿಕೆ ಮುಂದಿಟ್ಟಿದ್ದಾರೆ ಹೋಟೆಲ್ ಮಾಲೀಕರು.
ಹೀಗಿದ್ದಾಗ ಜಿಎಸ್‌ಟಿ ಮೇಲೂ ಸೇವಾಶುಲ್ಕ ವಿಧಿಸಿ ಹೋಟೆಲ್ ಮಾಲೀಕರಿಂದ ವಸೂಲಿ ಮಾಡುತ್ತಿದ್ದು, ಗ್ರಾಹಕರ ಮೂಲಕ ಸಂಗ್ರಹಿಸಿ ಸರ್ಕಾರಕ್ಕೆ ಪಾವತಿಸಬೇಕಿದ್ದ ಹಣ ಮಾಲೀಕರಿಂದ ವಸೂಲಿ ಮಾಡುತ್ತಿರುವ ಕಾರಣ ಆರ್ಥಿಕ ಸಂಕಷ್ಟ ಎದುರಾಗಿದೆ. ಒಂದು ಬಿಲ್‌ನಲ್ಲಿ 100 ರೂಪಾಯಿ ಚಾರ್ಜ್ ಮಾಡಿದ್ದರೆ ಇದರಲ್ಲಿ 50 ರೂಪಾಯಿಗೂ ಕಡಿಮೆ ಹಣ ಹೋಟೆಲ್ ಮಾಲೀಕರ ಕೈಗೆ ಸಿಗುತ್ತಿದೆ. ಇದರಿಂದ ಭಾರಿ ದೊಡ್ಡ ನಷ್ಟ ಉಂಟಾಗುತ್ತಿದೆ ಎಂದು ಹೋಟೆಲ್ ಮಾಲೀಕರ ಸಂಘ ತೀವ್ರ ಆಕ್ರೋಶ ಹೊರ ಹಾಕಿದೆ. ಹೀಗಾಗಿ ನೇರವಾಗಿ ಸ್ವಿಗ್ಗಿ ಬಳಿ ಹೋಗಿ ಮಾತುಕತೆಗೆ ಕೂತಿದ್ದರೂ ಸಮಸ್ಯೆ ಸರಿಯಾಗಿಲ್ಲ, ಈ ಕಾರಣಕ್ಕೆ ಆಗಸ್ಟ್ 15 ಶನಿವಾರದಿಂದ ಆನ್‌ಲೈನ್ ವ್ಯವಹಾರ ಸಂಪೂರ್ಣ ಸ್ಥಗಿತಗೊಳಿಸಲು ಹೋಟೆಲ್ ಮಾಲೀಕರ ಸಂಘ ಅಂತಿಮ ನಿರ್ಧಾರ ಕೈಗೊಂಡಿದೆ. ಹೀಗಾಗಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.