Taiwan Military: ಚೀನಾ ವಿರುದ್ಧ ತೊಡೆತಟ್ಟಿದ ತೈವಾನ್, ಪುಟಾಣಿ ದ್ವೀಪರಾಷ್ಟ್ರದ ಮಾಸ್ಟರ್ ಪ್ಲಾನ್ ಏನು?

bengaluru diaries | August 10, 2026 - 6:56 pm

ತೈವಾನ್ ಒಂದು ಪುಟಾಣಿ ದೇಶವೇ ಆಗಿದ್ದರೂ, ಚೀನಾ ರೀತಿಯ ದೊಡ್ಡ ದೇಶದ ವಿರುದ್ಧ ಕೂಡ ತೊಡೆತಟ್ಟಿ ನಿಲ್ಲುವ ತಾಕತ್ತು ಹೊಂದಿದೆ. ಅದರಲ್ಲೂ ತನ್ನ ಬಳಿ ಇರುವ ಪುಟಾಣಿ ಭೂಪ್ರದೇಶ ಹಾಗೂ ಅಗಾಧ ತಜ್ಞರ ತಂಡವನ್ನು ಬಳಸಿಕೊಂಡು ದೊಡ್ಡ ಹೋರಾಟಕ್ಕೆ ಸಜ್ಜಾಗುತ್ತಿರುವ ರೀತಿ ಕಾಣುತ್ತಿದೆ. ಏಕೆಂದರೆ ತೈವಾನ್ ಮತ್ತು ಚೀನಾ ನಡುವೆ ಸುಮಾರು ಅರ್ಧ ಶತಮಾನಗಳಿಂದಲೂ ಕಿರಿಕ್ ನಡೆದುಕೊಂಡೇ ಬಂದಿದೆ. ಹೀಗಿದ್ದಾಗ ಯಾವ ಕ್ಷಣದಲ್ಲಿ ಬೇಕಾದರೂ ಎರಡೂ ದೇಶಗಳ ನಡುವೆ ದೊಡ್ಡ ಕದನ ಶುರುವಾಗುವ ಆತಂಕ ಕೂಡ ಆವರಿಸಿದೆ. ಈ ಸಮಯದಲ್ಲೇ ತನ್ನ ಬತ್ತಳಿಕೆಯಲ್ಲಿ ಉಳಿದಿದ್ದ ಮಹಾನ್ ಅಸ್ತ್ರ ಒಂದನ್ನು ಪ್ರಯೋಗ ಮಾಡುತ್ತಿದೆ ತೈವಾನ್. ಹಾಗಾದ್ರೆ ಚೀನಾ ಮತ್ತು ತೈವಾನ್ ನಡುವೆ ಯುದ್ಧ ಫಿಕ್ಸ್ ಆಯ್ತಾ? ಪುಟಾಣಿ ದೇಶಕ್ಕೆ ಇಷ್ಟೊಂದು ಶಕ್ತಿ ಬಂದಿದ್ದು ಹೇಗೆ? ಮುಂದೆ ಓದಿ.

ಚೀನಾ ಅಕ್ಕಪಕ್ಕ ಇರುವ ಪ್ರಜಾಪ್ರಭುತ್ವ ಬೆಂಬಲಿಸುವ ದೇಶಗಳು & ಕಮ್ಯುನಿಸ್ಟ್ ಪಕ್ಷದ ಆಡಳಿತದಲ್ಲಿ ಇರುವ ಚೀನಾ ನಡುವೆ ಪದೇ ಪದೇ ತಿಕ್ಕಾಟಗಳು ನಡೆಯುತ್ತಿವೆ. ಕೆಲವು ವರ್ಷಗಳ ಹಿಂದೆ ಹಾಂಕಾಂಗ್ ವಿಚಾರದಲ್ಲಿ ಕೂಡ ಇದೇ ರೀತಿ ಆಗಿತ್ತು, ಅಮೆರಿಕ ಈ ರೀತಿ ಚೀನಾ ವಿರುದ್ಧ ನಿಲ್ಲುವ ದೇಶಗಳನ್ನು ಬೆಂಬಲಿಸುತ್ತಿದೆ ಎಂಬ ಆರೋಪ ಚೀನಾ ಸರ್ಕಾರದ್ದು. ಹೀಗಿದ್ದಾಗ ಚೀನಾ ವಿರುದ್ಧ ಹೋರಾಟ ನಡೆಸಲು ಬೇಕಾದ ಸೇನಾ ಸಲಕರಣೆ ಹಾಗೂ ಅಗತ್ಯ ಸಾಮಾಗ್ರಿಗಳನ್ನು ಅಮೆರಿಕ ಸರ್ಕಾರ ತೈವಾನ್‌ಗೆ ಮಾರಾಟ ಮಾಡುತ್ತಾ ಬಂದಿದೆ. ಇಷ್ಟೆಲ್ಲದರ ನಡುವೆ ಮೊನ್ನೆ ಮೊನ್ನೆಯಷ್ಟೇ ತೈವಾನ್ ಕರಾವಳಿ ಪ್ರದೇಶದಲ್ಲಿ ಪ್ರಮುಖ ಘಟನಾವಳಿಗಳು ಸಂಭವಿಸಿದ್ದವು. ಈ ಘಟನೆಗಳ ನಂತರ ತನ್ನ ಸೇನಾ ಬಜೆಟ್ ಬರೋಬ್ಬರಿ 1 ಟ್ರಿಲಿಯನ್‌ಗೆ ಏರಿಕೆ ಮಾಡಲು ಮುಂದಾಗಿದೆ ಇದೇ ಪುಟಾಣಿ ದ್ವೀಪರಾಷ್ಟ್ರ ತೈವಾನ್.


ತೈವಾನ್ ಸೇನೆಗೆ ಡೈನೋಸಾರ್ ಬಲ?

ಚೀನಾ ಸೇನೆ ಯಾವುದೇ ಕ್ಷಣದಲ್ಲಿ ತೈವಾನ್ ಮೇಲೆ ದಾಳಿ ಮಾಡಬಹುದು ಎಂಬ ಭಯ ತೈವಾನ್ ಸರ್ಕಾರ & ಸೇನೆಯನ್ನ ಕಾಡುತ್ತಿದೆ. ಇದೇ ಕಾರಣಕ್ಕೆ ಪರಿಸ್ಥಿತಿ ನಿಭಾಯಿಸಲು ಹಾಗೂ ಯಾವುದೇ ರೀತಿಯ ಸಮಸ್ಯೆ ಮುಂದೆ ಎದುರಾದರೂ ಅದನ್ನು ಎದುರಿಸಿ ಗೆದ್ದು ಬೀಗಲು ಇದೀಗ ತೈವಾನ್ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದೆ. ಇದೇ ಕಾರಣಕ್ಕೆ ತೈವಾನ್ ಸೇನೆಗೆ ಇನ್ನಷ್ಟು ಬಲ ತುಂಬಲು ಇದೀಗ ಸೇನಾ ಬಜೆಟ್ ಭಾರಿ ದೊಡ್ಡ ಮಟ್ಟದಲ್ಲಿ ಏರಿಕೆ ಮಾಡಿದೆ ತೈವಾನ್ ಸರ್ಕಾರ. ಸುಮಾರು 1 ಟ್ರಿಲಿಯನ್ ತೈವಾನ್ ಡಾಲರ್ ಬಜೆಟ್ ಮೀಸಲಾಗಿ ಇಟ್ಟು, 2027ರ ತೈವಾನ್ ಮಿಲಿಟರಿ ಬಜೆಟ್ ಅನ್ನ ಇನ್ನಷ್ಟು ಗಟ್ಟಿ ಮಾಡಲು ಮುಂದಾಗಿದೆ ಈ ಪುಟಾಣಿ ದ್ವೀಪರಾಷ್ಟ್ರ. ಹೀಗೆ ಹೊಸ ತಲ್ಲಣದ ಬಿರುಗಾಳಿ ದಕ್ಷಿಣ ಚೀನಾ ಸಮುದ್ರದಲ್ಲಿ ಏಳುವ ಎಲ್ಲಾ ಮುನ್ಸೂಚನೆಗಳು ಇದೀಗ ಸಿಗುತ್ತಿವೆ.