ಉಕ್ರೇನ್ ನೆಲದ ಮೇಲೆ ರಷ್ಯಾ ಸೇನೆಯಿಂದ ಮತ್ತೊಮ್ಮೆ ದೊಡ್ಡ ಮಟ್ಟದ ದಾಳಿ ಮಾಡಲಾಗಿದ್ದು, ಈಗ ಇಡೀ ಉಕ್ರೇನ್ ನಲುಗಿ ಹೋಗಿದೆ. ಕೆಲವು ದಿನಗಳ ಹಿಂದಷ್ಟೇ ರಷ್ಯಾ ದೇಶದ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ ಡ್ರೋನ್‌ಗಳ ಮೂಲಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ರಷ್ಯಾದ ಬ್ಯಾಂಕಿಂಗ್ ವಲಯ ಸೇರಿ, ಪ್ರಮುಖ ತೈಲ ಘಟಕಗಳು ನಾಶವಾಗಿ ಹೋಗಿವೆ ಎಂಬ ಆರೋಪ ಕೇಳಿ ಬಂದಿತ್ತು. ಇದೇ ವಿಚಾರವಾಗಿ ಅತ್ತ ಜಾಗತಿಕ ಮಟ್ಟದಲ್ಲಿ ರಷ್ಯಾ & ಉಕ್ರೇನ್ ನಡುವೆ ಆರೋಪ ಹಾಗೂ ಪ್ರತ್ಯಾರೋಪಗಳು ಜೋರಾಗಿರುವ ಈ ಸಮಯದಲ್ಲೇ ಮತ್ತೊಂದು ಆಘಾತ ಎದುರಾಗಿದೆ. ಈ ಬಾರಿ ಉಕ್ರೇನ್ ಮೇಲೆ ರಷ್ಯಾ ತನ್ನ ಕ್ಷಿಪಣಿಗಳನ್ನು ಬಳಸಿ ಪಾಠ ಕಲಿಸಲು ಮುಂದಾಗಿದೆ.
ಯುರೋಪ್ ಖಂಡವನ್ನೇ ನಲುಗಿ ಹೋಗುವಂತೆ ಮಾಡಿರುವ ಯುದ್ಧ ಇದೀಗ ಮತ್ತೊಂದು ಹಂತ ತಲುಪಿದೆ. ರಷ್ಯಾ & ಉಕ್ರೇನ್ ಯುದ್ಧ ಮತ್ತೆ ತೀವ್ರ ಸ್ವರೂಪ ಪಡೆದು ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ಸೇನೆ ಈಗ ಭಾರಿ ದೊಡ್ಡ ಪ್ರಮಾಣದ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದೆ. ರಷ್ಯಾ ರಾತ್ರೋರಾತ್ರಿ ಉಕ್ರೇನ್ ನೆಲಕ್ಕೆ ಹಾರಿಸಿದ ಈ ಕ್ಷಿಪಣಿಗಳು ಇದೀಗ ಉಕ್ರೇನ್ ನೆಲದಲ್ಲಿ ನೂರಾರು ಕಟ್ಟಡಗಳಿಗೆ ಹಾನಿ ಮಾಡುವ ಜೊತೆಗೆ, ಸುಮಾರು 9 ಜನರ ಸಾವಿಗೆ ಕಾರಣವಾಗಿದೆ ಎಂಬ ಆರೋಪ ಸಂಚಲನ ಸೃಷ್ಟಿಸಿದೆ. ಈ ಸ್ಫೋಟದಿಂದ ಕೀವ್ ನಗರದ ವಿವಿಧ ಭಾಗಗಳಲ್ಲಿ ಬೆಂಕಿ ಕಾಣಿಸಿಕೊಂಡು, ಅವಶೇಷಗಳ ಅಡಿ ಸಿಲುಕಿದವರ ರಕ್ಷಣೆಗು ಪರದಾಡಲಾಯಿತು. ಈ ಘಟನೆ ಯುದ್ಧದ ಕಿಚ್ಚನ್ನು ಮತ್ತಷ್ಟು ಹಬ್ಬಿಸಿದೆ.
ಕೀವ್ ನಗರದ ಮೇಯರ್ ಹೇಳಿದ್ದೇನು?
ಉಕ್ರೇನ್ ರಾಜಧಾನಿ ಕೀವ್ ನಗರದ ಮೇಯರ್ ವಿಟಾಲಿ ಕ್ಲಿಟ್ಸ್ಕೊ, ರಷ್ಯಾ ನಡೆಸಿದ ದಾಳಿಯ ಬಗ್ಗೆ ಮಾಹಿತಿ ನೀಡಿ ಆಕ್ರೋಶ ಹೊರ ಹಾಕಿದ್ದಾರೆ. ಕೀವ್‌ನ ಸೋಲೊಮಿಯಾನ್ಸ್ಕಿ ಜಿಲ್ಲೆಯಲ್ಲಿ 5 ಅಂತಸ್ತಿನ ವಸತಿ ಕಟ್ಟಡದ ಮೇಲೆ ಕ್ಷಿಪಣಿ ಅವಶೇಷ ಬಿದ್ದ ಪರಿಣಾಮ ಕಟ್ಟಡಕ್ಕೆ ಭಾರಿ ಹಾನಿಯಾಗಿದೆ. ಈ ಘಟನೆ ಬಳಿಕ ಕಟ್ಟಡದ ಒಳಗೆ ಹಲವು ಜನರು ಸಿಲುಕಿಕೊಂಡು, ರಕ್ಷಣಾ ಸಿಬ್ಬಂದಿ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬರಲು ಪದಾಡಿದರು ಎಂದು ತಿಳಿಸಿದ್ದಾರೆ. ಹಾಗೇ ಇದೇ ವೇಳೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯನ್ನು ಕೀವ್ ನಗರದ ಮೇಯರ್ ವಿಟಾಲಿ ಕ್ಲಿಟ್ಸ್ಕೊ ತೀವ್ರವಾಗಿ ಖಂಡಿಸಿದ್ದಾರೆ. ದಾಳಿ ನಂತರ ರಷ್ಯಾ & ಉಕ್ರೇನ್ ಗಡಿಯಲ್ಲಿ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮವಾಗಿದ್ದು, ರಷ್ಯಾ ಸೇನೆ ಕೂಡ ಅಲರ್ಟ್ ಆಗಿದೆ.
ಶಾಂತಿ ಬದಲು ಕಿತ್ತಾಟ ಜೋರು
ಉಕ್ರೇನ್ ಯಾವಾಗ ಡ್ರೋನ್ ದಾಳಿ ಮಾಡಿತ್ತೋ ಆಗಲೇ ರಷ್ಯಾ ಕಡೆಯಿಂದ ಭೀಕರ ದಾಳಿ ಶುರುವಾಗುವ ಮುನ್ಸೂಚನೆಯಲ್ಲಿ ಇತ್ತು, ಹೀಗಾಗಿ ಉಕ್ರೇನ್ ಕೂಡ ಮೊದಲೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿ ಇತ್ತು. ರಷ್ಯಾ ದಾಳಿ ನಂತರ ಉಕ್ರೇನ್ ರಾಜಧಾನಿ ಕೀವ್ ನಗರದ ವಿವಿಧೆಡೆ ತುರ್ತು ಸೇವೆಗಳ ಆರಂಭಿಸಲಾಗಿದ್ದು, ಈ ಸೇವೆಗಳ ಮೂಲಕ ಜನರ ರಕ್ಷಣೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಮುಖ ಪಾತ್ರವನ್ನ ವಹಿಸುವ ಅಗ್ನಿಶಾಮಕ ದಳ, ವೈದ್ಯಕೀಯ ಸಿಬ್ಬಂದಿ & ರಕ್ಷಣಾ ಪಡೆಗಳು ಸಮನ್ವಯದಿಂದ ಈ ರಕ್ಷಣಾ ಕಾರ್ಯ ನೋಡಿಕೊಳ್ಳಲು ಸೂಚಿಸಲಾಗಿದೆ.
ರಷ್ಯಾ ಸೇನೆಯ ಕ್ಷಿಪಣಿ ದಾಳಿಯಿಂದ ಇದೀಗ ಹಾನಿಗೊಳಗಾದ ಪ್ರದೇಶಗಳಿಗೆ ಪ್ರವೇಶ ನಿರ್ಬಂಧಿಸಿ, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿ ಇದೆ. ಹೀಗೆ ಇನ್ನೊಂದು ಕಡೆ ಉಕ್ರೇನ್ ಮಿಲಿಟರಿ, ರಷ್ಯಾ ವಿರುದ್ಧ ಸೇಡಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಾ ಕೂತಿದೆ. ಯುದ್ಧ 5ನೇ ವರ್ಷ ಮುಗಿಸುವ ಹಂತಕ್ಕೆ ಬಂದಿದ್ದರೂ, ರಷ್ಯಾ ಮತ್ತು ಉಕ್ರೇನ್ ನಡುವೆ ಇನ್ನೂ ಶಾಂತಿ ಒಪ್ಪಂದ ಅಂತಿಮವಾಗಿಲ್ಲ. ಶಾಂತಿ ಬದಲು ದಿನದಿಂದ ದಿನಕ್ಕೆ ಎರಡೂ ದೇಶಗಳ ಸೇನೆಗಳ ನಡುವೆ ದಾಳಿ & ಪ್ರತಿದಾಳಿ ಹೆಚ್ಚಾಗಿದೆ. ಇದು ಜಗತ್ತಿನಲ್ಲಿ ಇತರ ದೇಶಗಳ ನೆಮ್ಮದಿಗೂ ಪರೋಕ್ಷವಾಗಿ ಭಂಗ ತರುತ್ತಿರುವುದು ಸುಳ್ಳಲ್ಲ.