Vaibhav Suryavanshi: ಸಚಿನ್ ದಾಖಲೆ ಉಡೀಸ್ ಮಾಡಿದ ವೈಭವ್ ಸೂರ್ಯವಂಶಿಗೆ ದಿಢೀರ್ ಏನಾಯ್ತು?

New Admin | July 4, 2026 - 7:30 pm

ವೈಭವ್ ಸೂರ್ಯವಂಶಿ... ವೈಭವ್ ಸೂರ್ಯವಂಶಿ... ಹೀಗೆ ವೈಭವ್ ಸೂರ್ಯವಂಶಿಯ ಬಗ್ಗೆ ಎಲ್ಲಾ ಕಡೆಯೂ ಸಖತ್ ಬಿಲ್ಡಪ್ ಕೊಟ್ಟಿದ್ದೇ ಕೊಟ್ಟಿದ್ದು. ವೈಭವ್ ಸೂರ್ಯವಂಶಿ ಟೀಂ ಇಂಡಿಯಾಗೆ ಆಡಿದರೆ ಹಂಗ್ ಮಾಡ್ತಾನೆ.. ವೈಭವ್ ಸೂರ್ಯವಂಶಿ ನೋಡಿದ್ರೆ ಎದುರಾಳಿಗಳ ಎದೆ ಹೊಡೆದು ಹೋಗುತ್ತೆ... ಹಿಂಗೆಲ್ಲಾ ಬಿಲ್ಡಪ್ ಕೊಡುವ ಸಮಯದಲ್ಲೇ ಎಲ್ಲಾ ಉಲ್ಟಾ ಆಗಿ ಹೋಗಿದೆ. ಹಾಗಾದ್ರೆ, ಸಚಿನ್ ದಾಖಲೆ ಉಡೀಸ್ ಮಾಡಿದ ವೈಭವ್ ಸೂರ್ಯವಂಶಿಗೆ ದಿಢೀರ್ ಏನಾಯ್ತು? ಬನ್ನಿ ತಿಳಿಯೋಣ.

ವೈಭವ್ ಸೂರ್ಯವಂಶಿ ಐಪಿಎಲ್ ಅಖಾಡಕ್ಕೆ ಎಂಟ್ರಿ ಕೊಟ್ಟು ಕಳೆದ 2 ಸೀಸನ್ ದೊಡ್ಡ ಹವಾ ಎಬ್ಬಿಸಿದ್ದು, ಈ ಆಟಗಾರ ನಮ್ಮ ತಂಡಕ್ಕೆ ಆಡಬಾರದಿತ್ತಾ? ಅನ್ನೋ ಮಾತುಗಳನ್ನು ಪ್ರತಿಯೊಬ್ಬ ಅಭಿಮಾನಿ ಕೂಡ ಹೇಳಿ ಇರ್ತಾನೆ ಒಮ್ಮೊಮ್ಮೆ. ಕ್ರಿಕೆಟ್ ಹಬ್ಬ ಐಪಿಎಲ್ ಅಖಾಡದಲ್ಲಿ ರಾಜಸ್ಥಾನ ರಾಯಲ್ಸ್ ಪರವಾಗಿ ಆಡುತ್ತಿರುವ ವೈಭವ್ ಸೂರ್ಯವಂಶಿಗೆ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ನೀಡಬೇಕು ಎಂಬ ಒತ್ತಡ ಹೆಚ್ಚಾಗಿತ್ತು. ಇದೇ ಕಾರಣಕ್ಕೆ ಕೊನೆಗೂ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿದ್ದು, ಇಂದು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಬ್ಬರಿಸುತ್ತಾನೆ ಅಂತಾ ಎಲ್ಲರೂ ಕಾಯುತ್ತಿದ್ದರು ಆದರೆ ಆಗಿದ್ದೇ ಬೇರೆ ಕಣ್ರೀ!


ವೈಭವ್ ಮೊದಲ ಪಂದ್ಯದಲ್ಲೇ ಫ್ಲಾಪ್

ಅಂದಹಾಗೆ ಕೇವಲ 15 ವರ್ಷ 99 ದಿನಕ್ಕೆ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ವೈಭವ್ ಸೂರ್ಯವಂಶಿ ಈಗ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಹಿಂದೆ 16 ವರ್ಷ 205 ದಿನಕ್ಕೆ ಚೊಚ್ಚಲ ಪಂದ್ಯ ಆಡಿದ್ದ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನ ಇದೀಗ ವೈಭವ್ ಸೂರ್ಯವಂಶಿ ಮುರಿದು ದಾಖಲೆ ನಿರ್ಮಿಸಿದ್ದಾರೆ. ಆದರೆ ಏನು ಪ್ರಯೋಜನ? ವೈಭವ್ ಸೂರ್ಯವಂಶಿ ಮೊದಲ ಪಂದ್ಯದಲ್ಲೇ ಫ್ಲಾಪ್ ಆಗಿದ್ದಾರೆ ಅನ್ನೋ ಆಕ್ರೋಶ ಕ್ರಿಕೆಟ್ ಅಭಿಮಾನಿಗಳ ಬಾಯಲ್ಲಿ ಇದೀಗ ಕೇಳಿಬರುತ್ತಿದೆ.

ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿಗೆ ಭಾರತ ಪರ ಕಣಕ್ಕಿಳಿದ 15 ವರ್ಷದ ಬ್ಯಾಟರ್ 10 ಎಸೆತಗಳಲ್ಲಿ 14 ರನ್ ಗಳಿಸಿ ವಿಲ್ ಜಾಕ್ಸ್ ಬೌಲಿಂಗ್‌ನಲ್ಲಿ ಸ್ಟಂಪಿಂಗ್‌ಗೆ ಬಲಿಯಾದರು. ದೊಡ್ಡ ಹೊಡೆತಕ್ಕೆ ಮುಂದಾದ ವೇಳೆ ಕ್ರೀಸ್ ಬಿಟ್ಟಿದ್ದ ಅವರನ್ನ ವಿಕೆಟ್‌ಕೀಪರ್ ಜೋಸ್ ಬಟ್ಲರ್ ಚುರುಕಾಗಿ ಔಟ್ ಮಾಡುವ ಮೂಲಕ ಆಘಾತ ನೀಡಿದರು. ಅಂದಹಾಗೆ ಸಚಿನ್ ತೆಂಡೂಲ್ಕರ್ ತಮ್ಮ ಮೊದಲ ಪಂದ್ಯದಲ್ಲಿ 15 ರನ್ ಗಳಿಸಿದ್ದರೆ, ವೈಭವ್ ತಮ್ಮ ಚೊಚ್ಚಲ ಪಂದ್ಯದಲ್ಲಿ 14 ರನ್ ದಾಖಲಿಸಿದ್ದಾರೆ.

ವೈಭವ್ ಸೂರ್ಯವಂಶಿ ಬಗ್ಗೆ ಚರ್ಚೆ

ಆರಂಭದಲ್ಲಿ ಜೋಶ್ ಟಂಗ್ ಬೌಲಿಂಗ್ ಅನ್ನ ಎಚ್ಚರಿಕೆಯಿಂದ ಎದುರಿಸಿದ್ದ ವೈಭವ್, ನಂತರ ಜೋಫ್ರಾ ಆರ್ಚರ್ ವಿರುದ್ಧ ಮೊದಲ ಎಸೆತ ಸಿಕ್ಸರ್‌ಗೆ ನುಗ್ಗಿಸುವ ಮೂಲಕ ಆತ್ಮವಿಶ್ವಾಸ ಮೆರೆದರು. ಆದ್ರೆ ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಈ ನಡುವೆ ವೈಭವ್ ಸೂರ್ಯವಂಶಿ ಮೊದಲ ಪಂದ್ಯದಲ್ಲೇ ಉತ್ತಮವಾಗಿ ಆಟವಾಡಿ ದಾಖಲೆ ಬರೆಯಲು ವಿಫಲ ಆಗಿರುವುದು ದೊಡ್ಡ ಚರ್ಚೆಗೆ ಗ್ರಾಸವಾಗಿದೆ.