Vinay Kulkarni: ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್, ಕೊನೆಗೂ ಸಿಕ್ಕಿತು ಜಾಮೀನು

bengaluru diaries | July 31, 2026 - 2:20 pm

ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ ಸಿಕ್ಕಿದೆ, ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲೇ ಭಾರಿ ದೊಡ್ಡ ಮಟ್ಟಿಗೆ ಸೌಂಡ್ ಮಾಡಿತ್ತು ಈ ಪ್ರಕರಣ. ಅದರಲ್ಲೂ ಕರ್ನಾಟಕ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷದಲ್ಲಿ ಬಿಗಿ ಹಿಡಿತ ಹೊಂದಿರುವ ನಾಯಕನಿಗೇ ಶಿಕ್ಷೆ ಆಗಿದ್ದು ಸಂಚಲನ ಸೃಷ್ಟಿ ಮಾಡಿತ್ತು. ಅಲ್ಲದೆ ಹಲವು ರೀತಿಯಲ್ಲಿ ಈ ವಿಚಾರ ಚರ್ಚೆಗೂ ದಾರಿ ಮಾಡಿಕೊಟ್ಟಿತ್ತು, ಮತ್ತೊಂದು ಕಡೆ ಕಾಂಗ್ರೆಸ್ ಸರ್ಕಾರಕ್ಕೆ ಇದರಿಂದ ಭಾರಿ ಹಿನ್ನಡೆ ಉಂಟಾಗುತ್ತಾ? ಎಂಬ ಚರ್ಚೆಗಳು ಕೂಡ ಶುರುವಾಗಿ ಕಿಚ್ಚು ಹೊತ್ತಿಸಿತ್ತು. ಇಂತಹ ಸಮಯದಲ್ಲೇ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ ಸಿಕ್ಕಿದೆ. ಹಾಗಾದ್ರೆ ಈ ಪ್ರಕರಣದಲ್ಲಿ ಇಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಏನು? ಮುಂದೆ ಓದಿ.

ಅಂದಹಾಗೆ ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್ ಗೌಡ ಕೇಸ್ ಸಂಬಂಧ ಮಾಜಿ ಸಚಿವ & ಧಾರವಾಡ ಗ್ರಾಮಾಂತರ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿಗೆ ಹೈ ಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. ಈ ಪ್ರಕರಣ ರಾಜಕೀಯವಾಗಿ ಕೂಡ ತಲ್ಲಣ ಎಬ್ಬಿಸಿ, ಮುಂದಿನ ಚುನಾವಣೆಗೆ ವಿನಯ್ ಕುಲಕರ್ಣಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುತ್ತ? ಎಂಬ ಪ್ರಶ್ನೆ ಕೂಡ ಮೂಡಿತ್ತು. ಅದರಲ್ಲೂ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ಕಾಂಗ್ರೆಸ್ ನಾಯಕನ ರಾಜಕೀಯ ಜೀವನವನ್ನೇ ಸುಳಿಗೆ ಸಿಲುಕಿಸಿತ್ತು. ಆದರೆ ಇದಕ್ಕೆಲ್ಲಾ ಇಂದು ಹೊಸ ತಿರುವು ಸಿಕ್ಕಿದ್ದು, ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ತಿಳಿಯೋಣ ಬನ್ನಿ...


ಜೈಲು ವಾಸದಿಂದ ತಾತ್ಕಾಲಿಕ ರಿಲೀಫ್

ಕರ್ನಾಟಕ ರಾಜಕೀಯದಲ್ಲೇ ದೊಡ್ಡ ತಲ್ಲಣ ಎಬ್ಬಿಸಿದ್ದ, ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್ ಗೌಡ ಕೇಸ್‌ನಲ್ಲಿ ಶಿಕ್ಷೆಗೆ ಒಳಗಾಗಿದ್ದ ಮಾಜಿ ಸಚಿವ & ಧಾರವಾಡ ಗ್ರಾಮಾಂತರ ಶಾಸಕ ವಿನಯ್ ಕುಲಕರ್ಣಿ ಈ ದಿನವನ್ನು ತಮ್ಮ ಜೀವನದಲ್ಲೇ ಮರೆಯುವುದಿಲ್ಲ ಅಂತಾ ಕಾಣುತ್ತೆ. ಏಕೆಂದರೆ ಈ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ ಕರ್ನಾಟಕ ಹೈಕೋರ್ಟ್. ಕೆಲವು ತಿಂಗಳ ಹಿಂದೆ ವಿಚಾರಣಾ ನ್ಯಾಯಾಲಯವು ವಿಧಿಸಿದ್ದ ಜೀವಾವಧಿ ಶಿಕ್ಷೆ ಜಾರಿಯನ್ನ ಈಗ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ನ್ಯಾಯಾಲಯ, ಕಟ್ಟುನಿಟ್ಟಿನ ಷರತ್ತು ವಿಧಿಸಿ ಜಾಮೀನು ನೀಡಲು ಅನುಮತಿ ಕೊಟ್ಟಿದೆ.

ಈ ಮೂಲಕ ಮಾನ್ಯ ಕರ್ನಾಟಕ ಹೈಕೋರ್ಟ್‌ ಇಂದು ನೀಡಿದ ಆದೇಶದಿಂದ, ವಿನಯ್ ಕುಲಕರ್ಣಿ ಅವರಿಗೆ ತಕ್ಷಣಕ್ಕೆ ನೆಮ್ಮದಿ ದೊರೆತಿದ್ದು, ಶಿಕ್ಷೆ ಪ್ರಕಟವಾಗಿದ್ದ ಕಾರಣಕ್ಕೆ ಎದುರಾಗಿದ್ದ ಶಾಸಕ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಕೂಡ ಇದೀಗ ದೂರವಾದಂತೆ ಆಗಿದೆ. ಹೀಗಿದ್ದಾಗಲೇ ಅಂತಿಮ ತೀರ್ಪು ಬರುವವರೆಗೂ ಅವರಿಗೆ ಎಂದರೆ ಈ ಪ್ರಕರಣದ ಆರೋಪಿಗಳಿಗೆ ಕಾನೂನುಬದ್ಧ ಹೋರಾಟವನ್ನ ಮುಂದುವರಿಸಲು ಅವಕಾಶ ಸಿಕ್ಕಂತೆ ಆಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಇದೀಗ ಮಾನ್ಯ ಹೈಕೋರ್ಟ್ ಈ ಪ್ರಕರಣದ ಆದೇಶದಲ್ಲಿ ವಿಧಿಸಿರುವ ಕಠಿಣ ಷರತ್ತುಗಳು ಯಾವುವು? ಮಾಹಿತಿಗಾಗಿ ಮುಂದೆ ಓದಿ.

ಸಿಹಿ ಹಂಚಿ ಸಂಭ್ರಮಿಸಿದ ಬೆಂಬಲಿಗರು

ಅಷ್ಟಕ್ಕೂ ಇದೀಗ ಮಾಜಿ ಸಚಿವ ಹಾಗೂ ಹಾಲಿ ಶಾಸಕ ವಿನಯ್ ಕುಲಕರ್ಣಿ ಅವರು 5 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ & ಇಬ್ಬರ ಶ್ಯೂರಿಟಿ ನೀಡಬೇಕಿದೆ. ಹಾಗೇ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಯಾವುದೇ ಕಾರಣಕ್ಕೂ ದೇಶ ಬಿಟ್ಟು ಹೊರ ಹೋಗುವಂತಿಲ್ಲ ಎಂದು ಹೈಕೋರ್ಟ್ ಷರತ್ತು ವಿಧಿಸಿದೆ ಇದೀಗ. ಮತ್ತೊಂದು ಕಡೆ ಇಂದು ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದ ಸುದ್ದಿ ತಿಳಿಯುತ್ತಿದ್ದಂತೆ, ವಿನಯ್ ಕುಲಕರ್ಣಿ ಅವರ ಬೆಂಬಲಿಗರಲ್ಲಿ ಸಂತಸ ಮನೆಮಾಡಿತ್ತು. ಹೀಗಾಗಿಯೇ ಧಾರವಾಡ ಸೇರಿ ಹಲವೆಡೆ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದ್ದಾರೆ ಬೆಂಬಲಿಗರು.