Wild Elephant: ಹಾವಿನ ದ್ವೇಷ ಅಲ್ಲ ಆನೆಯ ದ್ವೇಷ 14 ವರ್ಷ, ಇಲ್ಲಿದೆ ಸಾಕ್ಷಿ ಮಿಸ್ ಮಾಡದೇ ಓದಿ!

bengaluru diaries | July 16, 2026 - 2:30 pm

ಕಾಡು ಪ್ರಾಣಿಗಳಿಗೆ ನೆನಪಿನ ಶಕ್ತಿ ಕಡಿಮೆ, ಅವುಗಳ ಜೀವ ಹಾಗೂ ಜೀವನಕ್ಕೆ ಮನುಷ್ಯರು ಯಾವುದೇ ರೀತಿಯಲ್ಲಿ ತೊಂದರೆ ಕೊಟ್ಟರೂ ನಡೆಯುತ್ತೆ ಅನ್ನೋದೆಲ್ಲಾ ಸುಳ್ಳು ಸುಳ್ಳು... ಯಾಕಂದ್ರೆ ಕಾಡು ಪ್ರಾಣಿಗಳು ಕೂಡ ಮನುಷ್ಯರ ರೀತಿಯಲ್ಲೇ ರಿವೇಂಜ್ ತೆಗೆದುಕೊಂಡು, ಸೇಡಿಗೆ ಸೇಡು ಅಂತಾ ಅಬ್ಬರಿಸುತ್ತವೆ ಎಂಬುದಕ್ಕೆ ಇಲ್ಲೊಂದು ಸಾಕ್ಷ್ಯ ಸಿಕ್ಕಿದೆ. ಅಂದಹಾಗೆ ಹಾವಿನ ದ್ವೇಷ 12 ವರ್ಷ ಅನ್ನೋ ಮಾತು ಇದೆ, ಹೀಗೆ ಹಾವಿನ ದ್ವೇಷದ ಬಗ್ಗೆ ಹಾಡುಗಳು ಕೂಡ ಬಂದು ಹೋಗಿವೆ. ಆದರೆ, ಹಾವಿನ ದ್ವೇಷ ಅಲ್ಲ ಆನೆಯ ದ್ವೇಷ 14 ವರ್ಷ ಅನ್ನೋದಕ್ಕೆ ಇದೀಗ ಸಾಕ್ಷ್ಯ ಸಿಕ್ಕಿದೆ ಬನ್ನಿ ಮಿಸ್ ಮಾಡದೆ ಓದೋಣ.

ಭೂಮಿ ಮೇಲೆ ನಗರಗಳು ಬೆಳೆದಂತೆಲ್ಲಾ ಕಾಡು ನಾಶವಾಗಿ ಹೋಗುತ್ತಿದ್ದು, ಕಾಡು ಪ್ರಾಣಿಗಳಿಗೆ ಸಾಕಷ್ಟು ತೊಂದರೆ ಎದುರಾಗುತ್ತಿದೆ. ಅದರಲ್ಲೂ ದೈತ್ಯ ಪ್ರಾಣಿಗಳು ಎಂಬ ಖ್ಯಾತಿ ಪಡೆದಿರುವ ಗಜರಾಜ ಅರ್ಥಾತ್ ಆನೆಗಳಿಗೆ ಸಾಕಷ್ಟು ಸಮಸ್ಯೆ ಉಂಟಾಗಿದ್ದು, ನೂರಾರು ಆನೆಗಳು ನಗರೀಕರಣ ಪರಿಣಾಮ ಜೀವ ಬಿಟ್ಟಿವೆ ಎಂಬ ಆರೋಪ ಕೇಳಿಬರುತ್ತಲೇ ಇದೆ. ಇಷ್ಟೆಲ್ಲದರ ನಡುವೆ ಕಾಡು ಪ್ರಾಣಿಗಳಿಗೆ ಮಾತು ಬರಲ್ಲ, ಅವು ಏನು ಮಾಡುತ್ತವೆ ಬಿಡು? ಅಂತಾ ಉಡಾಫೆ ಮಾಡುತ್ತಿದ್ದ ಮನುಷ್ಯರು ಬೆಚ್ಚಿ ಬೀಳುವ ಘಟನೆ ಒಂದು ಇಲ್ಲಿ ನಡೆದಿದೆ. ಇಲ್ಲೊಂದು ಕಾಡಾನೆ, ಬರೋಬ್ಬರಿ 14 ವರ್ಷಗಳ ಕಾಲ ಕಾದು ಕುಳಿತು ತನ್ನ ದ್ವೇಷ ಸಾಧಿಸಲು ನದಿ ದಾಟಿ ಹೋಗಿ ಒಂದೇ ಕುಟುಂಬದ ಸದಸ್ಯರನ್ನು ಹುಡುಕಿ ಹುಡುಕಿ ದಾಳಿ ಮಾಡಿ ಹತ್ಯೆ ಮಾಡಿರುವ ಘಟನೆ ವರದಿ ಆಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ...


ನೇಪಾಳದಲ್ಲಿ ಆನೆಯ ದ್ವೇಷ 14 ವರ್ಷ!

ಹೌದು ನೇಪಾಳ ದೇಶದ ಖ್ಯಾತ ಚಿತವಾನ್ ನ್ಯಾಷನಲ್ ಪಾರ್ಕ್ ಬಳಿ ಭೀಕರ ದುರಂತ ಒಂದು ಸಂಭವಿಸಿದೆ. ಅಷ್ಟಕ್ಕೂ ಈ ಘಟನೆ ಮನುಷ್ಯರಿಗೆ ಒಂದು ಎಚ್ಚರಿಕೆಯ ಸಂದೇಶವನ್ನು ಕೂಡ ರವಾನೆ ಮಾಡಿದೆ. ನೇಪಾಳದ ಖ್ಯಾತ ಚಿತವಾನ್ ನ್ಯಾಷನಲ್ ಪಾರ್ಕ್ ಬಳಿ ವಾಸ ಮಾಡುತ್ತಿದ್ದ ಸನಿಚರ್ ಬೋಟೆ ಎಂಬಾತನ ಫ್ಯಾಮಿಲಿ ಮೇಲೆ 2012ರಲ್ಲಿ ಕಾಡಾನೆಯು ಭೀಕರ ದಾಳಿ ನಡೆಸಿತ್ತು. ಇಂತಹ ಘೋರ ಘಟನೆಯಲ್ಲಿ ಸನಿಚರ್ ಬೋಟೆ ಕುಟುಂಬದ ನಾಲ್ವರು ಸದಸ್ಯರು ಸ್ಥಳದಲ್ಲೇ ಜೀವವನ್ನ ಕೂಡ ಬಿಟ್ಟರು. ಇಷ್ಟಕ್ಕೇ ಸುಮ್ಮನಾಗದ ಆನೆ, ಇದೇ ಕುಟುಂಬವನ್ನು ಸುಮಾರು 9 ಮೈಲಿ ದೂರಕ್ಕೆ ಮತ್ತೊಮ್ಮೆ ಬೆನ್ನತ್ತಿಕೊಂಡು ಹೋಗಿ ಹತ್ಯೆ ಮಾಡಲು ಶುರು ಮಾಡಿದೆ.

ಅಂದಹಾಗೆ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಆಘಾತಕ್ಕೊಳಗಾದ ಸನಿಚರ್ ಬೋಟೆ ಕುಟುಂಬ, ಆ ಜಾಗ ಖಾಲಿ ಮಾಡಿ ಅಲ್ಲಿಂದ ಬರೋಬ್ಬರಿ 9 ಮೈಲು ದೂರದಲ್ಲಿ ಇದ್ದ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಆಗಿತ್ತು. ಅವರು ಪ್ರಸಿದ್ಧ ರಫತಿ ನದಿಯನ್ನ ದಾಟಿ ಜಗತ್ ಪುರ ಎಂಬ ಪ್ರದೇಶದಲ್ಲಿ ಹೊಸದಾಗಿ ಬದುಕು ಕಟ್ಟಿಕೊಳ್ಳಲು ಆರಂಭಿಸಿದ್ದರು. ಹೀಗೆ ನದಿ ದಾಟಿ ಇಷ್ಟು ದೂರ ಬಂದಿದ್ದ ಹಿನ್ನೆಲೆಯಲ್ಲಿ ಆನೆಯಿಂದ ತಾವು ಸುರಕ್ಷಿತವಾಗಿದ್ದೇವೆ ಎಂದೇ ಆ ಕುಟುಂಬ ಭಾವಿಸಿತ್ತು ಕೂಡ. ಆದರೆ, ದಿಢೀರ್ 14 ವರ್ಷಗಳ ನಂತರ ಮತ್ತೊಮ್ಮೆ ಅದೇ ಆನೆ ಸನಿಚರ್ ಬೋಟೆ ಕುಟುಂಬದ ಮನೆ ಮೇಲೆ ದಾಳಿ ಮಾಡಿ ಮತ್ತೆ ಇಬ್ಬರನ್ನು ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ.

ಆನೆ ಅಬ್ಬರಕ್ಕೆ 25 ಜನರ ಜೀವ...

ದುರ್ಬೆ ಎಂಬ ಹೆಸರಿನ ಈ ಕಾಡಾನೆ ಜಗತ್ ಪುರದಲ್ಲಿ ಪ್ರತ್ಯಕ್ಷವಾಗಿದ್ದು ಸನಿಚರ್ ಬೋಟೆ ಹೊಸ ಮನೆಯ ಮೇಲೆ ಮತ್ತೆ ಅಟ್ಯಾಕ್ ಮಾಡಿದೆ. ಕಾಡಾನೆ ದಾಳಿ ಮಾಡಿದ ಸಮಯದಲ್ಲಿ ಸನಿಚರ್ ಬೋಟೆಯ ಸೊಸೆ ಆಶಿಕಾ ಬೋಟೆ ಹಾಗೂ ಮೊಮ್ಮಗ ಭರತ್ ಬೋಟೆ ಇಬ್ಬರನ್ನೂ ಆನೆ ಹತ್ಯೆಗೈದಿದೆ. 2010 ರಿಂದ ಇಂದಿನವರೆಗೂ ಈ ಕಾಡಾನೆಯ ದಾಳಿಯಿಂದ ಸುಮಾರು 25 ಜನರು ಮೃತಪಟ್ಟಿದ್ದಾರೆ ಎಂಬ ಅಂಕಿ & ಅಂಶವನ್ನ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಅಲ್ಲದೇ ಕಾಡಾನೆ ದ್ವೇಷ ಸಾಧಿಸುತ್ತಿದೆಯಾ? ಅಥವಾ ಅಚಾನಕ್ ಮತ್ತೊಮ್ಮೆ ಈ ರೀತಿಯ ದಾಳಿ ನಡೆದಿದೆಯಾ? ಎಂಬ ಚರ್ಚೆ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಜೋರಾಗಿದೆ.