Yash Toxic Movie: ಟಾಕ್ಸಿಕ್ ಟ್ರೇಲರ್ ರಿಲೀಸ್, ಕನ್ನಡಿಗ ಯಶ್ ಆರ್ಭಟ ನೋಡಿ ಕುಣಿದಾಡಿದ ಅಭಿಮಾನಿಗಳು!

bengaluru diaries | August 8, 2026 - 11:43 pm

ಯಶ್ ಅಂದುಕೊಂಡ ಯಾವುದೇ ವಿಚಾರವನ್ನೂ ಸಾಧಿಸದೆ ಬಿಡಲ್ಲ ಅನ್ನೋದಕ್ಕೆ ಮತ್ತೊಂದು ಸಾಕ್ಷಿ ಇದೀಗ ಸಿಕ್ಕಿದೆ. ಕನ್ನಡಿಗ ಯಶ್ ಬರೋಬ್ಬರಿ 4 ವರ್ಷಗಳ ನಂತರ ತಮ್ಮ ಹೊಸ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ಇಂದು ಆ ಸಿನಿಮಾದ ಟ್ರೇಲರ್ ಭರ್ಜರಿಯಾಗಿ ರಿಲೀಸ್ ಆಗಿದೆ. 2022 ಏಪ್ರಿಲ್ ತಿಂಗಳಲ್ಲಿ ರಿಲೀಸ್ ಆಗಿ ಬಾಕ್ಸ್ ಆಫಿಸ್ ದಾಖಲೆಗಳನ್ನು ಧೂಳ್ ಧೂಳ್ ಮಾಡಿದ್ದ ಕೆಜಿಎಫ್ ಚಾಪ್ಟರ್-2 ಇಡೀ ಪ್ರಪಂಚದಲ್ಲಿ ಕನ್ನಡ ಬಾವುಟ ಹಾರಿಸಿತ್ತು. ಆದರೆ ಕೆಜಿಎಫ್ ಚಾಪ್ಟರ್-2 ನಂತರ ಯಶ್ ಅವರ ಮುಂದಿನ ಹಾದಿ ಏನು? ಅನ್ನೋ ಚರ್ಚೆಯ ಬಿರುಗಾಳಿಗೆ ಸಿಲುಕಿದ್ದ ಯಶ್ ವಿರೋಧಿಗಳಿಗೆ ಈಗ ತಕ್ಕ ಉತ್ತರ ಸಿಕ್ಕಿದೆ. ಹಾಗಾದ್ರೆ ಹೇಗಿದೆ ಯಶ್ ಅವರ ಟಾಕ್ಸಿಕ್ ಸಿನಿಮಾ ಟ್ರೇಲರ್? ಮುಂದೆ ಓದಿ.

ಸಿನಿಮಾ ರಂಗದಲ್ಲಿ ಯಶ್ ಅವರು ಎಷ್ಟು ಬುದ್ಧಿವಂತ ನಟ ಹಾಗೂ ನಿರ್ಮಾಪಕ ಎಂದರೆ, ಯಶ್ ಅವರಿಗೆ ಯಶ್ ಅವರೇ ಸಾಠಿ ಅಂತಾರೆ ಅವರನ್ನು ಬಲ್ಲವರು. ಏಕೆಂದರೆ ಯಶ್ ಸುಮಾರು 2 ದಶಕಗಳ ತಮ್ಮ ಸಿನಿಮಾ ಎಕ್ಸ್‌ಪೀರಿಯನ್ಸ್ ಮೂಲಕ ದೊಡ್ಡ ದೊಡ್ಡ ಸಾಹಸಕ್ಕೆ ಕೈಹಾಕಿ ಗೆದ್ದು ತೋರಿಸುತ್ತಿದ್ದಾರೆ. ಹೀಗಿದ್ದಾಗ ಕೆಜಿಎಫ್ ಸಿನಿಮಾ ಸರಣಿಗಳ ಮೂಲಕ ಕನ್ನಡ ಸಿನಿಮಾ ರಂಗವನ್ನು ಪ್ಯಾನ್ ಇಂಡಿಯಾ ಹಂತಕ್ಕೆ ತೆಗೆದುಕೊಂಡು ಹೋಗಿ, ಕನ್ನಡಿಗರ ತಾಕತ್ ಎಂತಹದ್ದು? ಕನ್ನಡ ಸಿನಿಮಾಗಳ ಕ್ವಾಲಿಟಿ ಹೇಗೆ ಇರಲಿದೆ? ಎಂಬುದನ್ನ ಸಾಬೀತು ಕೂಡ ಮಾಡಿದ್ದರು. ಹೀಗಿದ್ದಾಗಲೇ ಟಾಕ್ಸಿಕ್ ಸಿನಿಮಾ ಘೋಷಣೆ ಆದ ನಂತರ ದೊಡ್ಡ ಸಂಚಲನ ಸೃಷ್ಟಿಯಾಗಿತ್ತು, ಈ ಸಿನಿಮಾ ಹೇಗಿರಲಿದೆ? ಎಂಬ ಕುತೂಹಲ ಮೂಡಿತ್ತು. ಅದಕ್ಕೆ ಉತ್ತರವೂ ಇಂದು ಸ್ಪಷ್ಟವಾಗಿದ್ದು, ಕನ್ನಡಿಗರ ಮೊಟ್ಟ ಮೊದಲ ಹಾಲಿವುಡ್ ಲೆವೆಲ್ ಸಿನಿಮಾ ಅಬ್ಬರಿಸಲು ಸಜ್ಜಾಗಿದೆ.


ಯಶ್ ಅಬ್ಬರಕ್ಕೆ ಹಾಲಿವುಡ್ ಸೈಲೆಂಟ್!

ಕೆವಿಎನ್ ಪ್ರೊಡಕ್ಷನ್ ಜೊತೆಗೆ ಯಶ್ ಅವರ ಸ್ವಂತ ಮಾನ್‌ಸ್ಟರ್ ಮೈಂಡ್ಸ್ ಸೇರಿ ಟಾಕ್ಸಿಕ್ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಜಾಗತಿಕ ಮಟ್ಟದಲ್ಲಿ ಟಾಕ್ಸಿಕ್ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳಸಿರುವುದು ಗೊತ್ತೇ ಇದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಡೈರೆಕ್ಷನ್ ಮಾಡಿರುವ ಟಾಕ್ಸಿಕ್ ಬಿಗ್ ಬಜೆಟ್ ಸಿನಿಮಾದ ಪ್ರಚಾರ ಭರ್ಜರಿಯಾಗಿ ಸಾಗಿದೆ. ಇದರ ಭಾಗವಾಗಿ ಹಿಂದೆ ಲಿರಿಕಲ್ ವಿಡಿಯೋ ಹಾಗೂ ಟೀಸರ್ ರಿಲೀಸ್ ಆಗಿದ್ದವು, ಇದೇ ಭರ್ಜರಿ ಕಿಕ್ ಕೊಟ್ಟು ಅಭಿಮಾನಿಗಳ ಮನಸ್ಸು ಗೆದ್ದಿತ್ತು. ಈಗ ಮತ್ತೊಂದು ಬಂಪರ್ ಸಿಕ್ಕಂತಾಗಿದ್ದು, ಯಶ್ ಅವರ ಅಭಿಮಾನಿಗಳ ಸಂಭ್ರಮಕ್ಕೆ ಗಡಿ ಇಲ್ಲವಾಗಿದೆ. ಈಗಾಗಲೇ ಟಾಕ್ಸಿಕ್ ಟ್ರೇಲರ್ ಎಲ್ಲಾ ಭಾಷೆಗಳಲ್ಲೂ ಟ್ರೆಂಡ್ ಕ್ರಿಯೇಟ್ ಮಾಡಿದ್ದು, ಯಶ್ ಆರ್ಭಟಕ್ಕೆ ಬಾಲಿವುಡ್ ಟು ಹಾಲಿವುಡ್ ಸ್ಟಾರ್ಸ್ ಕೂಡ ಬೆರಗಾಗಿದ್ದಾರೆ.

ಟಾಕ್ಸಿಕ್ ಸಿನಿಮಾದಲ್ಲಿ ಯಶ್ ತ್ರಿಬಲ್ ಆಕ್ಟಿಂಗ್?

ಒಟ್ಟು 6 ಭಾಷೆಗಳಲ್ಲಿ ರಿಲೀಸ್ ಆಗಿರುವ ಟಾಕ್ಸಿಕ್ ಟ್ರೇಲರ್ ಅದ್ಭುತವಾಗಿ ಮೂಡಿ ಬಂದಿದ್ದು, ಮೂಲ ಕನ್ನಡ ಭಾಷೆಯಲ್ಲಿ ನಿರ್ಮಾಣ ಆಗಿದೆ. ಇದರ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿ ಕೂಡ ಸಿನಿಮಾ ನಿರ್ಮಾಣ ಮಾಡಿದ್ದು, ತಮಿಳು, ತೆಲುಗು, ಮಲಯಾಳಂ ಸೇರಿ ಹಿಂದಿ ಭಾಷೆಯಲ್ಲಿ ಕೂಡ ಟಾಕ್ಸಿಕ್ ಸಿನಿಮಾ ರಿಲೀಸ್ ಆಗಲಿದೆ. ಇದೇ ಕಾರಣಕ್ಕೆ ಯಶ್ ಅವರ ಟಾಕ್ಸಿಕ್ ಸಿನಿಮಾ ಮೇಲಿನ ನಿರೀಕ್ಷೆಗಳು ಈಗ ಮುಗಿಲು ಮುಟ್ಟಿವೆ. ಸುಮಾರು 1000 ಕೋಟಿ ರೂಪಾಯಿ ಟಾಕ್ಸಿಕ್ ಸಿನಿಮಾಗೆ ಖರ್ಚು ಮಾಡಲಾಗಿದೆ ಎನ್ನಲಾಗಿದ್ದು, ಹಾಲಿವುಡ್ ಅಂಗಳಕ್ಕೆ ಅಧಿಕೃತವಾಗಿ ಎಂಟ್ರಿ ಕೊಡುತ್ತಿರುವ ಮೊದಲ ಕನ್ನಡ ಸಿನಿಮಾ, ಹಾಗೇ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ ಕೂಡ ನಮ್ಮ  ಕನ್ನಡ ಸಿನಿಮಾ ಟಾಕ್ಸಿಕ್ ಪಾಲಾಗುವ ನಿರೀಕ್ಷೆ ಇದೆ. ಅದರಲ್ಲೂ ಯಶ್ ಇದರಲ್ಲಿ 3 ಪಾತ್ರಗಳನ್ನ ನಿಭಾಯಿಸಿದ್ದಾರೆ ಅಂತಾ ಹೇಳಲಾಗಿದ್ದು, ಅಭಿಮಾನಿಗಳು ಟ್ರೇಲರ್ ನೋಡಿ ಬೆರಗಾಗಿದ್ದಾರೆ.