ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಬಿರುಗಾಳಿ ಎದ್ದಿದೆ, ಅದರಲ್ಲೂ ದಾವಣಗೆರೆ ಉಪಚುನಾವಣೆ ವಿಚಾರ ಅಲ್ಲೋಲ & ಕಲ್ಲೋಲ ಸೃಷ್ಟಿ ಮಾಡಿದೆ. ಯಾವಾಗ ದಾವಣಗೆರೆಯ ಕಾಂಗ್ರೆಸ್ ಅಭ್ಯರ್ಥಿಯನ್ನು ಸ್ವಂತ ಪಕ್ಷದವರೇ ಸೋಲಿಸಲು ಪ್ರಯತ್ನ ಮಾಡಿದ್ದರೋ, ಅಲ್ಲಿಂದ ಮುಂದೆ ದೊಡ್ಡ ಬಿರುಗಾಳಿ ಎದ್ದಿದೆ. ಈ ಪೈಕಿ ಕೇಂದ್ರದ ವರಿಷ್ಠರ ತನಕವೂ ಮಾಜಿ ಸಚಿವ & ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಆಕ್ರೋಶ ಮೂಡಿದೆ ಎಂಬ ಮಾತು ರಾಜ್ಯ ರಾಜಕೀಯ ವಲಯದಲ್ಲಿ ಹಬ್ಬಿದೆ. ಇಂತಹ ಸಮಯದಲ್ಲೇ ಲೋಕಾಯುಕ್ತ ತನಿಖೆ ಬಲೆಯಲ್ಲಿ ಸಿಲುಕುವ ಒತ್ತಡದಲ್ಲಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆಯಾ? ಬನ್ನಿ ತಿಳಿಯೋಣ.
ಹೌದು, ಮಾಜಿ ಸಚಿವ & ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಕೇಳಿ ಬಂದಿರುವ ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪ ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು. ಈ ಸಂಬಂಧ ತನಿಖೆ ಆರಂಭಿಸಲು ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಹಾಗೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಕ್ಕೆ ಲೋಕಾಯುಕ್ತ ಪೊಲೀಸರು ರಾಜ್ಯಪಾಲರ ಕಚೇರಿಗೆ ಪ್ರಾಸಿಕ್ಯೂಷನ್ ಅನುಮತಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಹೀಗಿದ್ದಾಗ ಮಾಜಿ ಸಚಿವರ ವಿರುದ್ಧ ತನಿಖೆಯ ಭೀತಿ ಅವರ ಬೆಂಬಲಿಗರಲ್ಲಿ ಆವರಿಸಿತ್ತು. ಇಷ್ಟೆಲ್ಲದರ ನಡುವೆಯೇ ದಿಢೀರ್ ಅಂತಾ ಬಿಗ್ ರಿಲೀಫ್ ಸಿಕ್ಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಲೋಕಾಯುಕ್ತ ಪೊಲೀಸರು ಸಲ್ಲಿಕೆ ಮಾಡಿದ್ದ ಪ್ರಾಸಿಕ್ಯೂಷನ್ ಅನುಮತಿ ಪ್ರಸ್ತಾವನೆಯನ್ನ ರಾಜ್ಯಪಾಲರ ಕಚೇರಿ ವಾಪಸ್ ಕಳುಹಿಸಿದೆ. ಅರೆ ಇಷ್ಟಕ್ಕೇ ಈ ಸ್ಟೋರಿ ಮುಗಿದಿಲ್ಲ, ಮುಂದೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.
ಇನ್ನೂ ಮುಗಿದಿಲ್ಲ ಟೆನ್ಷನ್.. ಟೆನ್ಷನ್..!
ಹೌದು, ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಕೆರಳಿಸಿರುವ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧದ ಈ ಭಾರಿ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಜಮೀರ್ ಅವರ ವಿರುದ್ಧವೇ ಕಾನೂನು ಕ್ರಮ ಜರುಗಿಸಲು ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಪ್ರಸ್ತಾವನೆ ಕಡತ ರಾಜ್ಯಪಾಲರ ಕಚೇರಿಯಿಂದ ವಾಪಸ್ ಆಗಿದೆ. ಆದರೆ ಇದಕ್ಕೆ ಪ್ರಮುಖ ಕಾರಣ ಇಂಗ್ಲಿಷ್, ಮೂಲ ದಾಖಲೆಗಳು & ತನಿಖಾ ವರದಿಯ ಬಹುಭಾಗ ಕನ್ನಡದಲ್ಲಿ ಇರುವ ಕಾರಣ, ಅದನ್ನ ಅಧಿಕೃತ ಪರಿಶೀಲನೆಗೆ ಅನುಕೂಲವಾಗುವ ರೀತಿಯಲ್ಲಿ ಇಂಗ್ಲಿಷ್‌ಗೆ ಟ್ರಾನ್ಸ್‌ಲೇಟ್ ಮಾಡಿ ಸಲ್ಲಿಸಬೇಕೆಂದು ರಾಜಭವನ ತಿಳಿಸಿದೆ ಎನ್ನಲಾಗಿದೆ. ಹೀಗಾಗಿ ಮಾಜಿ ಸಚಿವರಿಗೆ ಇನ್ನೂ ಮುಗಿದಿಲ್ಲ ಟೆನ್ಷನ್.. ಟೆನ್ಷನ್.. ಎಂಬ ಮಾತು ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಜೋರಾಗಿದೆ.
2028ರ ವಿಧಾನಸಭೆ ಚುನಾವಣೆಗೆ ಎಫೆಕ್ಟ್?
ಜಮೀರ್ ಅಹ್ಮದ್ ಖಾನ್ ಅವರು ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ನಾಯಕ, ಹೀಗಿದ್ದಾಗಲೇ ಕರ್ನಾಟಕದ ರಾಜಕೀಯದಲ್ಲಿ ಭಾರಿ ದೊಡ್ಡ ಹೆಸರು ಮಾಡಿದ್ದರು. ಆದರೆ ಇತ್ತೀಚಿನ ಕೆಲವು ಬೆಳವಣಿಗೆ ಹಾಗೂ ಸ್ವಂತ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಕಾರಣ ಜಮೀರ್ ಅಹ್ಮದ್ ಖಾನ್ ಸಂಕಷ್ಟಕ್ಕೆ ಸಿಲುಕಿದ್ದಾರಾ? ಎಂಬ ಪ್ರಶ್ನೆಯು ಕೂಡ ಸಹಜವಾಗಿ ಮೂಡಿದೆ. ಮತ್ತೊಂದು ಕಡೆ 2028ರ ವಿಧಾನಸಭೆ ಚುನಾವಣೆಗೆ ಎಫೆಕ್ಟ್ ಆಗುತ್ತಾ? ಜಮೀರ್ ಅವರ ರಾಜಕೀಯ ಭವಿಷ್ಯ ಏನು? ಎಂಬ ಚರ್ಚೆ ಕೂಡ ಜೋರಾಗಿದೆ.
ಇನ್ನು ಈ ಇಡೀ ಪ್ರಕರಣದ ತನಿಖೆ ಆರಂಭವಾಗಿದ್ದೇ 2018ರಲ್ಲಿ ನಡೆದಿದ್ದ ಐಎಂಎ ವಂಚನೆ ಪ್ರಕರಣ ಇನ್ವೆಸ್ಟಿಗೇಷನ್ ಸಮಯದಲ್ಲಿ. ಜಾರಿ ನಿರ್ದೇಶನಾಲಯ ಅಂದ್ರೆ ED ಅಧಿಕಾರಿಗಳು ಜಮೀರ್ ಅವರ ಮನೆಯ ಮೇಲೆ ದಾಳಿ ನಡೆಸಿ ಎಲ್ಲ ಪ್ರಮುಖ ದಾಖಲೆಗಳನ್ನ ವಶಕ್ಕೆ ಪಡೆದಿದ್ದರು. ಇದೇ ಮಾಹಿತಿ ಆಧಾರದಲ್ಲಿ ಜಮೀರ್ ಅವರು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಈ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಅಂದಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸೂಚಿಸಲಾಗಿತ್ತು. ಕರ್ನಾಟಕದಲ್ಲಿ ಇದೀಗ ಎಸಿಬಿ ರದ್ದಾಗಿದ್ದು, ಈ ಕೇಸ್‌ನ ಸಂಪೂರ್ಣ ತನಿಖೆಯ ಜವಾಬ್ದಾರಿ ಲೋಕಾಯುಕ್ತ ಪೊಲೀಸರು ವಹಿಸಿಕೊಂಡಿದ್ದಾರೆ.